ಮಾಹಿತಿ ಫಲಕ ಅಳವಡಿಕೆಗೆ ಗಡುವು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 20
ಆಟೋಗಳಲ್ಲಿ ನಿಗದಿತ ಪ್ರಮಾಣದಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಆಟೋ ಚಾಲಕರಿಗೆ ಸೂಚನೆ ನೀಡಿದ್ದಾರೆ.
ಆಟೋದಲ್ಲಿ 3 ಮಂದಿಗಳನ್ನು ಮಾತ್ರ ಕೂರಿಸಬೇಕು. ಅದಕ್ಕಿಂತ ಹೆಚ್ಚು ಮಂದಿ ಕೂರಿಸಬಾರದು. ಆದರೆ, ಗ್ರಾಮಾಂತರ ಪ್ರದೇಶಕ್ಕೆ ಹೋಗುವ ಸಂದರ್ಭ ಕೇವಲ 4 ಮಂದಿಯನ್ನು ಮಾತ್ರ ಆಟೋದಲ್ಲಿ ಕೂರಿಸಬೇಕೆಂದು ಹೇಳಿದರು.
ಸಮವಸ್ತ್ರ ಧರಿಸದ ಆಟೋ ಚಾಲಕರಿಗೆ ನಗರದ ಪೊಲೀಸರು ಸೋಮವಾರ ದಂಡ ವಿಧಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಆಟೋ ಚಾಲಕರು ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ಹೋಗಿ ಸಮಾಲೋಚಿಸಿದ ಸಂದರ್ಭ ಅವರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿಗಳು, ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಚಾಲಕರು ಸಹಕರಿಸಬೇಕು ಎಂದರು.
ಆಟೋ ಚಾಲಕರು ಸಹಕರಿಸಿದರೆ, ಪೊಲೀಸ್ ಸಹಕರಿಸಲಿದೆ. ಕೆಲವು ಚಾಲಕರು ಶಿಸ್ತುಬದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಮಾದರಿ ಆಗಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಆಟೋಗಳ ಮೇಲೆ ನಿಗಾ ಇಡಲು ಮುಂದಿನ ದಿನಗಳಲ್ಲಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಹೇಳಿದರು.
ಪ್ರತಿಯೊಂದು ಆಟೋಗಳಲ್ಲಿ ಚಾಲಕರು, ತಮ್ಮ ವಿಳಾಸ, ಚಾಲನೆಯ ಪರವಾನಗಿ, ವಿಮೆ ಸೇರಿದಂತೆ ಇತರೆ ಮಾಹಿತಿಯನ್ನು ಒಳಗೊಂಡ ಫಲಕವನ್ನು ಮುಂದಿನ 15 ದಿನಗಳೊಳಗೆ ಆಟೋಗಳ ಒಳಭಾಗದಲ್ಲಿ ಅಳವಡಿಸಬೇಕೆಂದು ತಿಳಿಸಿದರು.
ಪ್ರಯಾಣಿಕರೊಬ್ಬರ ಆಟೋದಲ್ಲಿ ಬಿಟ್ಟು ಹೋಗಿದ್ದ 50000 ನಗದನ್ನು ಪೊಲೀಸ್ ಠಾಣೆಗೆ ಒಪ್ಪಿಸಿರುವ ಇಲ್ಲಿನ ಕೆಜಿಎನ್ ಆಟೋ ನಿಲ್ದಾಣದ ಚಾಲಕ ತಾಜುದ್ದೀನ್ ಅವರಿಗೆ ಜಿಲ್ಲಾ ರಕ್ಷಣಾಧಿಕಾರಿ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಿದರು.