ಸೋಲಿಗೆ ಆಡಳಿತ ವೈಫಲ್ಯ ಕಾರಣವಲ್ಲ: ಕಾಗೋಡು
ಸಾಗರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಆಡಳಿತ ವೈಫಲ್ಯ ಕಾರಣವಲ್ಲ. ಬಿಜೆಪಿ ಕಳೆದ ಒಂದು ವರ್ಷದಿಂದ ಕೈಗೊಂಡಿರುವ ವ್ಯಾಪಕ ಪ್ರಚಾರ ಹಾಗೂ ಮಾಧ್ಯಮಗಳಲ್ಲಿ ತನ್ನನ್ನು ಹಂತಹಂತವಾಗಿ ಬಿಂಬಿಸಿಕೊಂಡಿದ್ದರಿಂದ ಹೆಚ್ಚು ಸ್ಥಾನ ಗಳಿಸಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಇಲ್ಲಿನ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಿದರೆ ಒಪ್ಪಿಕೊಳ್ಳುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹಿಂದಿನಿಂದಲೂ ಭೂಮಿ ಹೋರಾಟದಿಂದ ಹಿಡಿದು ಭೂಮಿಗೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದರಿಂದ ಕಂದಾಯ ಸಚಿವನಾಗಿ ಕೆಸಲ ಮಾಡಲು ಆಸಕ್ತಿ ಇದೆ. ಆದರೆ ನಾನು ಈಗ ಸ್ವೀಕರ್ ಆಗಿರುವುದರಿಂದ ಪಕ್ಷದಲ್ಲಿ ಇಲ್ಲ.
ಆದ್ದರಿಂದ ಸಚಿವ ಸ್ಥಾನದ ಕುರಿತು ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಜನರಿಗೆ ತಿಳಿಸಬೇಕು: ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ನನಗೆ ತೃಪ್ತಿ ತಂದಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ರೈತರಿಗೆ ಸಾಲ ಸೌಲಭ್ಯ, ಆಶ್ರಯಮನೆ ಸಾಲದ ಮೇಲಿನ ಬಡ್ಡಿಮನ್ನಾ, ಎಸ್‌ಸಿ, ಎಸ್ಟಿ, ಹಿಂದುಳಿದ ವರ್ಗದವರ ಸಾಲಮನ್ನಾದಂತಹ ಜನಪರ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಆದರೆ ಅದನ್ನು ಜನರಿಗೆ ತಿಳಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಆಶ್ರಯ, ಬಗರ್‌ಹುಕುಂನಂತಹ ಸಮಿತಿಗಳನ್ನು ರಚಿಸಿ ಜನರಿಗೆ ಸೌಲಭ್ಯ ಕಲ್ಪಿಸುವ ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದಿಂದ ಆಗಮಿಸಿದ್ದ ರೈಲ್ವೆ ಸಿನಿಯರ್ ಸೆಕ್ಷನ್ ಎಂಜಿನಿಯರ್ ಗಂಗಾಧರ್ ಅವರೊಂದಿಗೆ ಸಾಗರ ಜಂಬಗಾರು ರೈಲ್ವೆ ನಿಲ್ದಾಣ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ, ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದರು.