ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಳೆ, ಗಾಳಿಗೆ ಜನಜೀವನ ಅಸ್ತವ್ಯಸ್ತ

Vishwanath S
Updated On : 23 May 2014, 11:33 am

ಚಿಕ್ಕಮಗಳೂರು: ಜಿಲ್ಲೆಯ ಕೆಲವೆಡೆ ಗುರುವಾರವೂ ಮಳೆ ಮುಂದುವರೆದಿದ್ದು, ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಬಲವಾಗಿ ಬೀಸಿದ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದು ಜನ ಜೀವನ ಅಸ್ತವ್ಯಸ್ತವಾಗಿತ್ತು.
ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಯ ಮೇಲೆ ಬಿದ್ದಿದ್ದರಿಂದ ಕಡೂರು- ಚಿಕ್ಕಮಗಳೂರು ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಎಲ್ಲಾ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
20 ಮರ ಧರೆಗೆ: ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಗುಡುಗು ಸಹಿತ ಮಳೆ ಆರಂಭಗೊಂಡಿತು. ಬಲವಾಗಿ ಗಾಳಿ ಬೀಸಿದ್ದರಿಂದ ಚಿಕ್ಕಮಗಳೂರಿನ ಕಣಿವೇ ಕ್ರಾಸ್ ನಿಂದ ಸುಮಾರು ಅರ್ಧ ಕಿ.ಮೀ. ಅಂತರದಲ್ಲಿ ಸುಮಾರು 20ಕ್ಕೂ ಮರಗಳು ಹಾಗೂ ವಿದ್ಯುತ್ ಕಂಬಗಳು ನೋಡು ನೋಡುತ್ತಿದ್ದಂತೆ ನೆಲಕ್ಕೆ ಉರುಳಿ ಬಿದ್ದವು.
ಅದೇ ವೇಳೆಗೆ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಅವಘಡದಿಂದ ತಪ್ಪಿಸಿಕೊಂಡಿತು. ಕಡೂರು- ಚಿಕ್ಕಮಗಳೂರು ಮಾರ್ಗದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಯಾವುದೇ ವಾಹನಗಳ ಸಂಚಾರ ಇರಲಿಲ್ಲ. ನಂತರದಲ್ಲಿ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಲಾಯಿತು.
ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಧ್ಯಾಹ್ನದ ವೇಳೆಗೆ ಮಳೆ ಆರಂಭಯಾಗುತ್ತಿದ್ದು, ಪ್ರತಿದಿನ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದು ಬಿಡುವು ನೀಡುತ್ತಿದೆ. ಗುರುವಾರವೂ ಕೂಡ ಇದೇ ರೀತಿ ಮಳೆ ಬಂದು ಹೋಯಿತು.
ಮತದಾರರಿಗೆ ಕಾಂಗ್ರೆಸ್ ಕೃತಜ್ಞತೆ
ಬಾಳೆಹೊನ್ನೂರು: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿದ್ದು, ಬಿ.ಕಣಬೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದು ಸಾಬೀತಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್ ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಜನತೆ ಬದಲಾವಣೆ ಬಯಸಿ ತೀರ್ಪು ನೀಡಿದ್ದರಿಂದ ಈ ಬಾರಿ ಬಿಜೆಪಿಗೆ ಜಯ ಲಭಿಸಿದೆ. ಉಪ ಚುನಾವಣೆಯಲ್ಲಿ ಜಯಿಸಿದ ಅಲ್ಪ ಅವಧಿಯಲ್ಲೇ ಜಯಪ್ರಕಾಶ್ ಹೆಗ್ಡೆ ಅವರು, ಮಾಡಿದ ಜನಪರ ಕಾರ್ಯಗಳು, ಜನರ ವಿಶ್ವಾಸ ಮತಗಳಾಗಿ ಪರಿವರ್ತನೆಯಾಗದೆ ಪಕ್ಷಕ್ಕೆ ಸೋಲುಂಟಾಯಿತು.
ಈ ಬಾರಿ ಯುವಕರು ಹೆಚ್ಚು ಮತದಾನ ಮಾಡಿದ್ದು ಹೆಚ್ಚಿನ ಅಂತರದಲ್ಲಿ ಸೋಲಲು ಕಾರಣವಾಯಿತು. ಮುಂದಿನ ದಿನಗಳಲ್ಲಿ ಬೇರು ಮಟ್ಟದಿಂದ ಪಕ್ಷ ಸಂಘಟಿಸಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲಾಗುವುದು ಎಂದರು.
ಶೃಂಗೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಶಹಾಬ್, ಗ್ರಾಪಂ ಮಾಜಿ ಅಧ್ಯಕ್ಷರಾದ ರವಿ, ಬಿ.ಕೆ. ಮಧುಸೂಧನ್, ಮಾಜಿ ಉಪಾಧ್ಯಕ್ಷ ಸದಾಶಿವ, ಮಹೇಶ್ ವಾಟ್ ಕೂಡಿಗೆ ಇದ್ದರು.
ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಲಹೆ
ಚಿಕ್ಕಮಗಳೂರು: ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಬಿ. ಹೇಮಂತ್ ಪ್ರಭು ಹೇಳಿದ್ದಾರೆ.
ಚಿಕ್ಕಮಗಳೂರು ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿ ವಾರ್ಷಿಕ ಕಾರ್ಯಕ್ರಮಗಳ ಅವಲೋಕನ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಥೆಯು ಕಳೆದ ಒಂದು ವರ್ಷದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚಿಕ್ಕಮಗಳೂರು ಲಯನ್ಸ್ ಅಧ್ಯಕ್ಷೆ ನೇತ್ರಾ ಅವರು ತಮ್ಮ ಅವಧಿಯಲ್ಲಿ ಉತ್ತಮ ಕಾರ್ಯಕ್ರಮ ಕೈಗೊಂಡಿದ್ದಾರೆ ಎಂದರು.
ಮೂತ್ರಪಿಂಡ ತೊಂದರೆ ಅನುಭವಿಸುವವರ ನೆರವಿಗಾಗಿ ಡಯಾಲಿಸಿಸ್ ಯಂತ್ರವನ್ನು ಜಿಲ್ಲಾ ಆಸ್ಪತ್ರೆಗೆ ಲಯನ್ಸ್ ಮೂಲಕ ಕೊಡುಗೆ ನೀಡಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಅವರ ಈ ರೀತಿಯ ಮನೋಭಾವವನ್ನು ಸಂಸ್ಥೆಯ ಎಲ್ಲ ಸದಸ್ಯರು ಮೈಗೂಡಿಸಿಕೊಳ್ಳಬೇಕು. ಇತರೆ ಸಂಸ್ಥೆಗಳಿಗೂ ಮಾದರಿಯಾಗಬೇಕು ಎಂದರು.
ಸಮಾಜ ಸೇವೆ ಮಾಡುವ ಕನಸು ಕಾಣಬೇಕು. ಅವಕಾಶ ಸಿಕ್ಕಾಗ ದಿನದ ಒಂದು ಗಂಟೆ ಸಮಯವನ್ನಾದರೂ ಅದಕ್ಕಾಗಿ ಮುಡಿಪಾಗಿಟ್ಟರೆ ಮನಶ್ಶಾಂತಿ ದೊರಕುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಅಧ್ಯಕ್ಷೆ ನೇತ್ರಾ ವೆಂಕಟೇಶ್ ಮಾತನಾಡಿ, ವರ್ಷಪೂರ್ತಿ ಒಳ್ಳೆಯ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಂಡಿದೆ. ಅವಕಾಶ ಸಿಕ್ಕಲ್ಲಿ ಮುಂದಿನ ದಿನಗಳಲ್ಲೂ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಲಯನೆಸ್ ಅಧ್ಯಕ್ಷೆ ಚಂದ್ರಾವತಿ ಶಂಕರ್, ಕಾರ್ಯದರ್ಶಿ ದಾಕ್ಷಾಯಿಣಿ ಪ್ರಭು ಇದ್ದರು. ಹರೀಶ್ ನಿರೂಪಿಸಿದರು. ಅನುಸೂಯ ಜಗದೀಶ್ ವಂದಿಸಿದರು.
ನಿರ್ಮಾಣ ಹಂತದ ಸೇತುವೆ ಕುಸಿದು ವ್ಯಕ್ತಿ ಸಾವು
ತರೀಕೆರೆ: ಸಮೀಪದ ಸೋಂಪುರ ಬಳಿ ಭದ್ರಾ ಉಪನದಿ ಹರಿಯುವ ಹಳ್ಳಕ್ಕಾಗಿ, ಸೋಂಪುರ- ಕರಕುಚ್ಚಿ ನಡುವೆ ನಿರ್ಮಾಣ ಹಂತದಲ್ಲಿದ್ದ ದೊಡ್ಡ ಸೇತುವೆಯ ಸೆಂಟರಿಂಗ್ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಚಿಕ್ಕನಾಯಕನಹಳ್ಳಿಯ ಭಾಸ್ಕರ(35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆಯ ವಿವರ: ಸಮೀಪದ ಸೋಂಪುರ ಗ್ರಾಮದ ಬಳಿ ಕರಕುಚ್ಚಿಗೆ ಹೋಗುವ ಮಾರ್ಗದಲ್ಲಿ ಭದ್ರಾ ಉಪ ನದಿಯ ಹಳ್ಳಕ್ಕೆ ಕಳೆದ ಮೂರು ವರ್ಷದಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಕಾಂಕ್ರೀಟ್ ಹಾಕುತ್ತಿರುವಾಗ ಸೆಂಟರಿಂಗ್ ಕಳಚಿ ಬಿದ್ದು ದುರ್ಘಟನೆ ಸಂಭವಿಸಿದೆ.
ಅಧಿಕಾರಿಗಳ ಭೇಟಿ: ಸುದ್ದಿ ತಿಳಿದ ಕೂಡಲೇ ಇಲಾಖೆಯ ಹಾಸನ ಎಕ್ಸಿಕ್ಯುಟಿವ್ ಎಂಜಿನಿಯರ್ ರುದ್ರಪ್ಪ, ಚಿಕ್ಕಮಗಳೂರು ಸೂಪರಿಟೆಂಡೆಂಟ್
ರಾಮಚಂದ್ರಪ್ಪ, ಎಇಇ ಪ್ರಕಾಶ್, ತಹಸೀಲ್ದಾರ್ ಶಿವಕುಮಾರ್ ಅವರು ಸೇತುವೆ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ್ದರು.
ಸಂಭ್ರಮದ ರಂಗನಾಥಸ್ವಾಮಿ ರಥೋತ್ಸವ
ಕ.ಪ್ರ.ವಾರ್ತೆ ,  ತರೀಕೆರೆ ,  ಮೇ 22
ಸಮೀಪದ ಉಡೇವ ಗ್ರಾಮದ ಮರೆಕಲ್ಲಳ್ಳಿ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವವು ರಂಭಾಪುರಿ ಖಾಸಾ ಶಾಖಾ ಮಠದ ಬೀರೂರು- ಉಡೇವಾ ಇದರ ಸ್ವಾಮೀಜಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅದ್ಧೂರಿಯಾಗಿ ನಡೆಯಿತು.
ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಗೆ ಪೂಜೆ ಹಾಗೂ ಹರಕೆ ಸಲ್ಲಿಸಿದರು. ಜಾತ್ರಾ ಮಹೋತ್ಸವದಲ್ಲಿ ಗ್ರಾಮ ದೇವತೆಗಳಾದ ರಂಗನಾಥಸ್ವಾಮಿ, ಆಂಜನೇಯಸ್ವಾಮಿ, ಅಂತರಘಟ್ಟಮ್ಮ, ಚೌಡಮ್ಮ, ಕರಿಯಮ್ಮ, ಈಶ್ವರಸ್ವಾಮಿ, ಕಣಿವೆ ಅಜ್ಜಯ್ಯ, ಸೇವಾಲಾಲ್ ಮತ್ತು ಮರಿಯಮ್ಮ ಮುಂತಾದ ದೇವತೆಗಳನ್ನು ವಿಶೇಷವಾಗಿ ಪೂಜಿಸಲಾಯಿತು.
ಆತ್ಮ ಕಲುಷಿತವಾಗದಂತೆ ಎಚ್ಚರವಹಿಸಿ: ರಾಘವೇಶ್ವರ ಶ್ರೀ
ಕ.ಪ್ರ.ವಾರ್ತೆ ,  ತ್ಯಾಗರ್ತಿ ,  ಮೇ 22
ಶರೀರ ಒಂದು ಮನೆ. ಶರೀರದಲ್ಲಿರುವ ಆತ್ಮ ತುಂಬಾ ಪವಿತ್ರವಾದದ್ದು, ಆತ್ಮ ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಆತ್ಮಕ್ಕೆ ಹಿತವಾದದ್ದನ್ನು ಮಾತ್ರ ನಾವು ಪಡೆದುಕೊಳ್ಳಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ ಹೇಳಿದರು.
ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಮತ್ತಿಕೊಪ್ಪದ ಹಿರಿಯ ಸಹಕಾರಿ ಧುರೀಣ ಎಮ್. ಹರನಾಥ್ ರಾವ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭೂಮಿ, ಮತ್ತು ಮಳೆ ಚೆನ್ನಾಗಿ ಬಂದರೆ ಮಾತ್ರ ಕೃಷಿ ಸಾಧ್ಯವಿಲ್ಲ.
ಭೂಮಿ ಮತ್ತು ಮಳೆಯೊಂದಿಗೆ ರೈತನ ಶ್ರಮ ಮತ್ತು ಪ್ರಯತ್ನವೂ ಇರಬೇಕು. ಆಗ ಮಾತ್ರ ಉತ್ತಮ  ಬೆಳೆ ಬೆಳೆಯಲು ಸಾಧ್ಯ. ಅದೇ ರೀತಿ ಮನುಷ್ಯನಿಗೆ ಗುರು ಕೃಪೆ, ಶ್ರದ್ಧೆ,  ಭಕ್ತಿ, ನಂಬಿಕೆ, ಇರಬೇಕು. ನಂಬಿಕೆಗೆ ಅಗಾಧವಾದ ಶಕ್ತಿಯಿದೆ. ನಂಬಿಕೆ ಎಂತಹ ರೋಗಗಳನ್ನೂ  ಗುಣಪಡಿಸಬಲ್ಲದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement