ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭಾರತೀ ಪ್ರೌಢಶಾಲೆ ಮಾನ್ಯತೆ ರದ್ದತಿಗೆ ಆಗ್ರಹ

Rashmi Kasaragodu
Updated On : 24 May 2014, 11:10 am

ಚಿಕ್ಕಮಗಳೂರು: ನಗರದ ಭಾರತೀ ಪ್ರೌಢಶಾಲೆಯ ಮಾನ್ಯತೆ ರದ್ದುಗೊಳಿಸಬೇಕು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ದಲಿತ- ಪ್ರಗತಿಪರ ಸಂಘಟನೆ ಒಕ್ಕೂಟದ ಮುಖಂಡರಾದ ಶ್ರೀನಿವಾಸ್ ಅವರು ಜಿಲ್ಲಾಧಿಕಾರಿ ಅವರನ್ನು ಆಗ್ರಸಿದ್ದಾರೆ.
ಪ್ರತಿಭಟನಾಕರರ ಮೇಲೆ ಗೂಂಡಾಗಿರಿ ನಡೆಸಿರುವ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ, ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಸಹೋದರ ಸುಂದರೇಶ್ ಗೌಡರನ್ನು ಅಮಾನತ್ತುಗೊಳಿಸಬೇಕು. ರಾಜೇಗೌಡ ಹಾಗೂ ಸುಂದರೇಶ್ ಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ, ಮುಂದಿನ ದಿನಗಳಲ್ಲಿ ಸಚಿವರು ನಗರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಗಮಿಸಿದರೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಒತ್ತಾಯಿಸಿದರು.
ಅಮಾನತಿಗೆ ಒತ್ತಾಯ:  ಚಿಕ್ಕಮಗಳೂರು ನಗರದ ಭಾರತೀ ವಿದ್ಯಾಸಂಸ್ಥೆಯಲ್ಲಿ ಪ್ರಯೋಗಶಾಲಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟಸ್ವಾಮಿ ಅವರಿಗೆ ಕಳೆದ 10 ತಿಂಗಳಿಂದ ಸಂಬಳ ನೀಡಿಲ್ಲ. ಜತೆಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ಖಂಡಿಸಿ ಕಳೆದ 4 ದಿನಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟ ಅವಧಿವರೆಗೆ ಧರಣಿ ನಡೆಸಲಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹಾಗೂ ಅವರ ಸಹೋದರ ಸುಂದರೇಶ್ ಗೌಡ ಅವರು ಪ್ರತಿಭಟನಾಕಾರರ ಮೇಲೆ ಗೂಂಡಾ ಪ್ರವೃತ್ತಿಯಲ್ಲಿ ವರ್ತಿಸಿದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಭಾರತೀ ಪ್ರೌಢಶಾಲೆ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ ಎಂದು ಆ ಶಾಲೆಯ ಮುಖ್ಯೋಪಾಧ್ಯಾಯರಾದ ಪುಟ್ಟಪ್ಪ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ. ಆದರೆ, ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿರುವ ವರದಿಯಲ್ಲಿ ಸ್ವಂತ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಕೃಷ್ಣಮೂರ್ತಿ, ಅಣ್ಣಯ್ಯ ಹಾಗೂ ಶಾಲೆಯಿಂದ ಅಮಾನತುಗೊಂಡಿರುವ ಪುಟ್ಟಸ್ವಾಮಿ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement