ಮರೀಚಿಕೆಯಾದ ವಾಜಪೇಯಿ ವಸತಿ ಯೋಜನೆ
ಆರ್. ತಾರಾನಾಥ್
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 23
ನಗರದ ಬಡವರಿಗೆ ನಿವೇಶನ ಹಾಗೂ ಮನೆಗಳನ್ನು ನೀಡಲು ವಾಜಪೇಯಿ ನಗರ ವಸತಿ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಸವಲತ್ತು ಪಡೆಯಲು ಸಾವಿರಾರು ಮಂದಿ ಅರ್ಹರು ಇದ್ದಾರೆ. ಆದರೆ, ಸಕಾಲದಲ್ಲಿ ಆಶ್ರಯ ಸಮಿತಿಯ ಸಭೆಯನ್ನು ಕರೆದು ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ನಿವೇಶನ ಹಾಗೂ ಮನೆಗಳನ್ನು ಮಂಜೂರು ಮಾಡುವಲ್ಲಿ ಜನಪ್ರತಿನಿಧಿಗಳು ಮತ್ತು ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ.
ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಲ್ಲಿ ವಾಜಪೇಯಿ ನಗರ ವಸತಿ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. ಕೆಲವು ಪಟ್ಟಣಗಳಲ್ಲಿ ಆಶ್ರಯ ಸಮಿತಿಯ ಸಭೆಗಳು ನಡೆದಿಲ್ಲ. ಇನ್ನು ಕೆಲವೆಡೆ ನಡೆದು ಫಲಾನುಭವಿಗಳನ್ನು ಗುರುತು ಮಾಡಿದರೂ ಅವರಿಗೆ ಖಾಲಿ ನಿವೇಶನ ಹಾಗೂ ಮನೆಗಳನ್ನು ಮಂಜೂರು ಮಾಡಿರುವುದಿಲ್ಲ.
ಚಿಕ್ಕಮಗಳೂರು ನಗರಸಭೆ: ಚಿಕ್ಕಮಗಳೂರು ನಗರಸಭೆ ರಾಮೇಶ್ವರ ಕೆರೆ ಬಳಿ 2009-10ನೇ ಸಾಲಿನಲ್ಲಿ 747 ನಿವೇಶನಗಳನ್ನು ಮಂಜೂರು ಮಾಡಿದೆ. ಈ ಪೈಕಿ 300 ನಿವೇಶನಗಳಲ್ಲಿ ಮಾತ್ರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು 447 ನಿವೇಶನಗಳು ಖಾಲಿ ಉಳಿದುಕೊಂಡಿವೆ. ಇವರುಗಳು ತಮ್ಮ ಪ್ರಭಾವ ಬೀರಿ ಅರ್ಹರಲ್ಲದವರು ನಿವೇಶನ ಪಡೆದುಕೊಂಡಿದ್ದಾರೆಂಬ ಮಾತು ನಗರದಲ್ಲಿ ಕೇಳಿ ಬರುತ್ತಿದೆ.
ಇಂದಾವರ ಗ್ರಾಮದ ಸರ್ವೆ ನಂಬರ್ 47 ಮತ್ತು 49ರಲ್ಲಿ 10 ಎಕರೆ ಜಮೀನು ನಿವೇಶನಕ್ಕಾಗಿ ಗುರುತು ಮಾಡಲಾಗಿದೆ. ಇದರ ಸಮೀಪದಲ್ಲಿ 13 ಎಕರೆ ಭೂಮಿಯನ್ನು ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಆದರೆ, ಈವರೆಗೆ ನಿವೇಶನ ಹಂಚಿಕೆ ಮಾಡಿಲ್ಲ, 2013-14ನೇ ಸಾಲಿನಲ್ಲಿ 600 ನಿವೇಶನ ಹಂಚಿಕೆಯ ಗುರಿಯನ್ನು ಹೊಂದಲಾಗಿತ್ತು. ಆದರೆ, ಈ ವರೆಗೆ ಒಂದೂ ನಿವೇಶನ ಹಂಚಿಕೆ ಮಾಡಿಲ್ಲ. ಚಿಕ್ಕಮಗಳೂರು ನಗರದಲ್ಲಿ ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ 2057 ಮಂದಿ ನಿವೇಶನ ರಹಿತರು ಇದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ನಡೆದ ಆಶ್ರಯ ಸಮಿತಿಯ ಸಭೆಯಲ್ಲಿ ವಾರ್ಡ್ ವಾರು ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸವನ್ನು ಮಾಡಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಕಡೂರು- ತರೀಕೆರೆ ಪುರಸಭೆ: ಕಡೂರು ಪುರಸಭೆಯಲ್ಲಿ 2013-14ನೇ ಸಾಲಿನಲ್ಲಿ 250 ನಿವೇಶನವನ್ನು ಹಂಚಿಕೆ ಮಾಡುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಪುರಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ ಜಮೀನು ಲಭ್ಯವಿಲ್ಲ.
ತರೀಕೆರೆ ಪುರಸಭೆ ವ್ಯಾಪ್ತಿಯಲ್ಲಿ 2013-14ನೇ ಸಾಲಿನಲ್ಲಿ 250 ನಿವೇಶನಗಳನ್ನು ಹಂಚಿಕೆ ಮಾಡುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಇಲ್ಲೂ ಕೂಡ ಸರ್ಕಾರಿ, ಖಾಸಗಿ ಜಮೀನು ಲಭ್ಯವಿಲ್ಲ. ಮೂಡಿಗೆರೆ ಪಟ್ಟಣ ಪಂಚಾಯ್ತಿ ವತಿಯಿಂದ 2013-14ನೇ ಸಾಲಿನಲ್ಲಿ 150 ನಿವೇಶನಗಳನ್ನು ಹಂಚಿಕೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನಗಳನ್ನು ವಿತರಣೆ ಮಾಡಲು ಸರ್ಕಾರಿ, ಖಾಸಗಿ ಜಮೀನು ಲಭ್ಯವಿಲ್ಲ.
ಬೀರೂರು ಪುರಸಭೆ: ಬೀರೂರು ಪುರಸಭೆ ವ್ಯಾಪ್ತಿಯಲ್ಲಿ 2013-14ನೇ ಸಾಲಿನಲ್ಲಿ 250 ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿತ್ತು. ಈ ಪೈಕಿ 13 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ಅವರಿಗೂ ಸಹ ಈ ವರೆಗೆ ನಿವೇಶನ ಹಂಚಿಕೆಯಾಗಿಲ್ಲ.
ಬೀರೂರು ಪಟ್ಟಣದಲ್ಲಿ 2007-08ನೇ ಸಾಲಿನಲ್ಲಿ ಲಕ್ಷ್ಮಯ್ಯ ಬಡಾವಣೆಯನ್ನು ನಿರ್ಮಾಣ ಮಾಡಲಾಗಿದ್ದು, ನಿವೇಶನ ಹಂಚಿಕೆಯ ಸಂದರ್ಭದಲ್ಲಿ ಅರ್ಹರನ್ನು ಕೈಬಿಡಲಾಗಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ 2 ಎಕರೆ ಜಮೀನು ಬಿಡಬೇಕು. ಆದರೆ, ಈ ಕೆಲಸ ಆಗಿಲ್ಲ ಎಂದು ಕೆಲವು ಮಂದಿ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ನಿವೇಶನ ಹಂಚಿಕೆ ಪ್ರಕ್ರಿಯೆ ಅರ್ಧಕ್ಕೆ ನಿಂತಿದೆ. ಈ ಬಡಾವಣೆಗೆ ರಾಜೀವ್ ಗಾಂಧಿ ವಸತಿ ನಿಗಮ ಮೂಲಭೂತ ಸೌಲಭ್ಯಕ್ಕಾಗಿ 80 ಲಕ್ಷ ರುಪಾಯಿ ಬಿಡುಗಡೆ ಮಾಡಿದ್ದು, ರಸ್ತೆ, ಚರಂಡಿ ನಿರ್ಮಾಣ, ವಿದ್ಯುತ್ ಕಂಬಗಳನ್ನು ಹಾಕುವ ಕೆಲಸ ಮುಗಿದಿದೆ. ಆದರೂ ಸಹ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳುವ ಭಾಗ್ಯ ಇನ್ನು ಕೂಡಿ ಬಂದಿಲ್ಲ.
ಎನ್.ಆರ್.ಪುರ ಪಟ್ಟಣ ಪಂಚಾಯ್ತಿ: ನರಸಿಂಹರಾಜಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 2013-14ನೇ ಸಾಲಿನಲ್ಲಿ 150 ನಿವೇಶನವನ್ನು ವಿತರಣೆ ಮಾಡುವ ಗುರಿಯನ್ನು ಹೊಂದಲಾಗಿತ್ತು. ಈ ಸಂಬಂಧ ಹಿರೇಬೈಲು ಗ್ರಾಮ ಠಾಣಾದ 5 ಎಕರೆ ಪ್ರದೇಶದಲ್ಲಿ 169 ನಿವೇಶನಗಳನ್ನು ರಚನೆ ಮಾಡಲಾಗಿದೆ. ಆದರೆ, ಈವರೆಗೆ ಒಂದು ನಿವೇಶನವನ್ನು ಸಹ ಹಂಚಿಕೆ ಮಾಡಿಲ್ಲ.
ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಈವರೆಗೆ ಆಶ್ರಯ ಸಮಿತಿಯ ಸಭೆ ನಡೆದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದರಿಂದ ಸಭೆಯನ್ನು ಕರೆದು
ಫಲಾನುಭವಿಗಳ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಇಲ್ಲಿನ ನಿವೇಶನ ರಹಿತರ ಪರಿಸ್ಥಿತಿಯಾಗಿದೆ.
ಕೊಪ್ಪ ಪಟ್ಟಣ ಪಂಚಾಯ್ತಿ: ಕೊಪ್ಪ ಪಟ್ಟಣ ಪಂಚಾಯ್ತಿಯಲ್ಲಿ 2013-14ನೇ ಸಾಲಿನಲ್ಲಿ 150 ಜನರಿಗೆ ನಿವೇಶನ ಹಂಚಿಕೆಯ ಗುರಿಯನ್ನು ಹೊಂದಲಾಗಿತ್ತು. ಈ ಸಂಬಂಧ ನಿವೇಶನಕ್ಕಾಗಿ ಕೊಪ್ಪದ ಸರ್ವೆ ನಂಬರ್ 77 ರಲ್ಲಿ 2-20 ಎಕರೆ ಜಮೀನು ಗುರುತು ಮಾಡಲಾಗಿದೆ.
ಇದರಲ್ಲಿ 123 ನಿವೇಶನಗಳನ್ನು ವಿತರಣೆಗಾಗಿ ಸಿದ್ಧಪಡಿಸಲಾಗಿದೆ. ಆದರೆ, ಆಶ್ರಯ ಸಮಿತಿ ಸಭೆಯನ್ನು ಕರೆದು ಫಲಾನುಭವಿಗಳ ಆಯ್ಕೆ ಮಾಡುವ ಕೆಲಸ ಈವರೆಗೆ ಆಗಿಲ್ಲ. ಇಲ್ಲೂ ಕೂಡ ರಾಜಕೀಯ ಪಕ್ಷಗಳ ಸ್ವಪ್ರತಿಷ್ಟೆಯಿಂದ ಬಡವರಿಗೆ ಅನಾನುಕೂಲವಾಗಿದೆ.
ಶೃಂಗೇರಿ ಪಟ್ಟಣ ಪಂಚಾಯ್ತಿ: ಇಲ್ಲಿ 150 ನಿವೇಶನಗಳನ್ನು ಹಂಚಿಕೆ ಮಾಡಲು ಗುರಿಯನ್ನು ಹೊಂದಲಾಗಿದ್ದು, ವೈಕುಂಠಾಪುರ ಗ್ರಾಮದ ಸರ್ವೆ ನಂಬರ್ 247 ರಲ್ಲಿ 9 ಎಕರೆ ಹಾಗೂ ಸರ್ವೆ ನಂಬರ್ 212 ರಲ್ಲಿ 1-14 ಎಕರೆ ಜಮೀನು ಖರೀದಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಈವರೆಗೆ ಹಣ ಬಿಡುಗಡೆಯಾಗಿಲ್ಲ.
ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಬಡವರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, 3 ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ವಿತರಣೆಗೆ ಜಮೀನಿಲ್ಲ, ಇನ್ನು ಕೆಲವೆಡೆ ಜಮೀನಿದ್ದರೂ ನಿವೇಶನ ಸಿದ್ಧಪಡಿಸಿಲ್ಲ, ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ.