ಬೆಳೆ ಹಾನಿಗೆ 91 ಕೋಟಿ ಸಬ್ಸಿಡಿ
ಆರ್. ತಾರಾನಾಥ್
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 25
ಕಳೆದ ವರ್ಷದಲ್ಲಿ ಮಳೆ ಇಲ್ಲದೆ ಬರಗಾಲ ಬಂದು ಬೆಳೆಯನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ವಿತರಣೆ ಮಾಡಲು ರಾಜ್ಯ ಸರ್ಕಾರ 2ನೇ ಕಂತಿನಲ್ಲಿ 91.43 ಕೋಟಿ ಬಿಡುಗಡೆ ಮಾಡಿದೆ. ಮೇ 7ರಂದು (ಸರ್ಕಾರದ ಆದೇಶ ಸಂಖ್ಯೆ ಆರ್.ಡಿ.105, ಟಿ.ಎನ್.ಆರ್. 2014) ಅನುದಾನ ಬಿಡುಗಡೆಯಾಗಿದೆ.
2013- 14ನೇ ಸಾಲಿನಲ್ಲಿ ಸಕಾಲದಲ್ಲಿ ಮುಂಗಾರು ಮಳೆ ಬಾರದೆ ರಾಜ್ಯದ 125 ತಾಲೂಕುಗಳಲ್ಲಿ ಬರ ಎದುರಾಗಿದೆ. ಈ ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿತ್ತು. ಈ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿತ್ತು.
ಇದರಿಂದಾಗಿ ಬೆಳೆಯನ್ನು ಕಳೆದುಕೊಂಡಿರುವ ರೈತರಿಗೆ ಪ್ರತಿ ವರ್ಷದಂತೆ ಈ ಬಾರಿ ರಾಜ್ಯ ಸರ್ಕಾರ ಇನ್ ಪುಟ್ ಸಬ್ಸಿಡಿಯನ್ನು ಬಿಡುಗಡೆ ಮಾಡಿದೆ.
ರೈತರಿಗೆ ಇನ್‌ಪುಟ್ ಸಬ್ಸಿಡಿ ವಿತರಣೆ ಮಾಡಲು ಕೇಂದ್ರ ಸರ್ಕಾರ, ಕೇಂದ್ರದ ವಿಪತ್ತು ಪರಿಹಾರ ನಿಧಿಯಡಿಯಲ್ಲಿ 169.15 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯ ಸರ್ಕಾರ ಮೊದಲನೇ ಕಂತಿನಲ್ಲಿ 77.72 ಕೋಟಿ ಬಿಡುಗಡೆ ಮಾಡಿತ್ತು. ಇದೀಗ 2ನೇ ಕಂತಿನಲ್ಲಿ ರಾಜ್ಯದ 18 ಜಿಲ್ಲೆಗಳಿಗೆ 91.43 ಕೋಟಿ ರುಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ.
ಹಿಂದಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳಿಗೆ ಜಿಲ್ಲಾವಾರು ಹಣ ಬಿಡುಗಡೆ ಮಾಡುತ್ತಿತ್ತು. ಆದರೆ, ಈ ಬಾರಿ ಬೆಳೆವಾರು ಇನ್‌ಪುಟ್ ಸಬ್ಸಿಡಿಯನ್ನು ಬಿಡುಗಡೆ ಮಾಡಿದೆ. ಅಂದರೆ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡಿದೆ.
2ನೇ ಕಂತಿನಲ್ಲಿ ಬಿಡುಗಡೆ ಆಗಿರುವ 91.43 ಕೋಟಿಗಳನ್ನು ಕೃಷಿ ಬೆಳೆ ಹಾನಿಗೆ 63.52 ಕೋಟಿ, ತೋಟಗಾರಿಕೆ ಬೆಳೆ ಹಾನಿಗೆ 27.90 ಕೋಟಿ ಹಂಚಿಕೆ ಮಾಡಲಾಗಿದೆ. ಈ ಹಣವನ್ನು 2013-14ನೇ ಸಾಲಿನಲ್ಲಿ ಬರ ಪರಿಸ್ಥಿತಿಯಿಂದ ಆದ ಬೆಳೆ ಹಾನಿಗೆ ಇನ್‌ಪುಟ್ ಸಬ್ಸಿಡಿ ನೀಡಲು ಮಾತ್ರ ಬಳಸಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಆದೇಶದಲ್ಲಿ ತಿಳಿಸಲಾಗಿದೆ. ಈ ಅನುದಾನವನ್ನು ಕೇಂದ್ರ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯ ಪ್ರಕಾರ ಅರ್ಹ ಫಲಾನುಭವಿಗಳಿಗೆ ವಿತರಿಸತಕ್ಕದ್ದು ಎಂದು ಹೇಳಲಾಗಿದೆ.
ಇನ್ ಪುಟ್ ಸಬ್ಸಿಡಿ: ಇನ್ ಪುಟ್ ಸಬ್ಸಿಡಿಯಲ್ಲಿ ಎರಡು ವಿಧಗಳಿವೆ.
ಒಂದು- ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದರೆ, ಮತ್ತೊಂದು- ಮಳೆ ಸಕಾಲದಲ್ಲಿ ಬಾರದೆ ಬೆಳೆಗಳಿಗೆ ಹಾನಿಯಾಗಿದ್ದರೆ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಬೆಳೆವಾರು ಹಾಗೂ ವಿಸ್ತೀರ್ಣವಾರು ಸಬ್ಸಿಡಿಯನ್ನು ವಿತರಣೆ ಮಾಡಲಿದೆ.
ಮಳೆಯಿಂದ ಹಾನಿಯಾದ ಬೆಳೆಗಳಿಗೆ ಈಗಾಗಲೇ ಇನ್ ಪುಟ್ ಸಬ್ಸಿಡಿ ಬಿಡುಗಡೆ ಮಾಡಲಾಗಿದೆ. ಈಗ 2 ಹಂತದಲ್ಲಿ ಬಿಡುಗಡೆ ಆಗಿರುವ 169.15 ಕೋಟಿಯನ್ನು ಮಳೆ ಬಾರದೆ ಬೆಳೆ ಹಾನಿ ಆಗಿರುವ ರೈತರಿಗೆ ಪರಿಹಾರ ನೀಡಲು ಮಾತ್ರ ಬಳಕೆ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಬರಪೀಡಿತ ಪ್ರದೇಶಗಳಲ್ಲಿ ಬೆಳೆಯನ್ನು ಕಳೆದುಕೊಂಡಿರುವ ರೈತರ ಪಟ್ಟಿಯನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಪ್ರತ್ಯೇಕವಾಗಿ ಸಿದ್ಧಪಡಿಸಿ, ಆ ಪಟ್ಟಿಯನ್ನು ತಾಲೂಕು ಕಚೇರಿಗಳಿಗೆ ಕಳುಹಿಸಲಾಗುವುದು.
ಜಿಲ್ಲಾಧಿಕಾರಿ ಖಾತೆಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಬರುವ ಹಣವನ್ನು ತಾಲೂಕು ತಹಸೀಲ್ದಾರ್ ಖಾತೆಗೆ ಜಮಾ ಮಾಡಲಾಗುವುದು.
ಅಲ್ಲಿಂದ ರೈತರ ಬ್ಯಾಂಕ್ ಖಾತೆಗೆ ಈ ಸಬ್ಸಿಡಿ ಹಣ ಜಮಾವಾಗಲಿದೆ. ಸದ್ಯ ಈ ಪ್ರಕ್ರಿಯೆ ಚಾಲನೆಯಲ್ಲಿದೆ.
2ನೇ ಕಂತಿನಲ್ಲಿ ಇನ್ ಪುಟ್ ಸಬ್ಸಿಡಿ ಅನುದಾನ ಬಿಡುಗಡೆಯಾಗಿರುವ ಜಿಲ್ಲಾವಾರು ಮಾಹಿತಿ (ಕೋಟಿ. ರು.ಗಳಲ್ಲಿ)
ಬಾಗಲಕೋಟೆ............................................................. 7.09
ಗದಗ.........................................................................16.89
ಹಾಸನ.......................................................................10.51
ಬೆಳಗಾವಿ......................................................................8.96
ಮೈಸೂರು.....................................................................3.92
ಚಿತ್ರದುರ್ಗ....................................................................9.87
ತುಮಕೂರು...............................................................14.60
ಧಾರವಾಡ....................................................................1.83
ಚಾಮರಾಜನಗರ......................................................... 6.58
ಕೋಲಾರ.....................................................................2.44
ಮಂಡ........................................................................ 1.24
ಚಿಕ್ಕಮಗಳೂರು............................................................4.60
ರಾಮನಗರ................................................................. 2.13
ದಾವಣಗೆರೆ...............................................26.54 (ಲಕ್ಷ ರು.)
ಯಾದಗಿರಿ.............................................. 28.54 (ಲಕ್ಷ ರು.)
ಗುಲ್ಬರ್ಗಾ............................................... 0.18 (ಲಕ್ಷ ರು.)
ಬೆಂಗಳೂರು ಗ್ರಾಮೀಣ............................. 0.92 (ಲಕ್ಷ ರು.)
ಚಿಕ್ಕಬಳ್ಳಾಪುರ...........................................14.67 (ಲಕ್ಷ ರು.)