ರಂಭಾಪುರಿ ಶ್ರೀ ಶುಭ ಹಾರೈಕೆ
ಚಿಕ್ಕಮಗಳೂರು: ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಶುಭ ಹಾರೈಸಿದ್ದಾರೆ. ಅತ್ಯಂತ ಮೇಧಾವಿ ಮತ್ತು ದೂರದೃಷ್ಟಿ ಹೊಂದಿದ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಪ್ರಚಂಡ ವಿಜಯ ಗಳಿಸಿದೆ. ಈ ಸಂದರ್ಭದಲ್ಲಿ ಪ್ರಧಾನಿ ಗದ್ದುಗೆ ಏರಿರುವ ನರೇಂದ್ರ ಮೋದಿ ಅವರ ಕಾಲದಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಮತ್ತು ಸರ್ವ ಜನಾಂಗದವರ ಹಿತ ಕಾಪಾಡುವ ಮುನ್ಸೂಚನೆ ಅವರಲ್ಲಿ ಕಾಣುತ್ತಿದ್ದೇವೆ. ರಾಷ್ಟ್ರದ ಸಮಗ್ರತೆ, ಸಾಮರಸ್ಯ ಮತ್ತು ಸರ್ವಾಂಗೀಣ ಪ್ರಗತಿಯ ಅವರ ಕನಸು ನನಸಾಗಲಿ ಎಂದು ಹೇಳಿದ್ದಾರೆ.
ಎಲ್ಲ ಜಾತಿ ಜನಾಂಗದವರಲ್ಲಿ ವಿಶ್ವಾಸ ತುಂಬುವ ಮತ್ತು ದ್ವೇಷ ಅಸೂಯೆ ಕೊನೆಗೊಂಡು ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ನೆರವೇರಿಸಿಕೊಂಡು ಬರುವ ಶಕ್ತಿ ಅವರಿಗೆ ಪ್ರಾಪ್ತವಾಗಲಿ. ಅಕ್ಕ- ಪಕ್ಕದ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆದುಕೊಂಡು ಬರುವಂತಾಗಲಿ. ವಿನಾಕಾರಣ ಆತಂಕ ಸೃಷ್ಟಿಸುವ ಮತ್ತು ಭಯೋತ್ಪಾದನೆ ಉಂಟು ಮಾಡುತ್ತಿರುವ ದೇಶಗಳಿಗೆ ಎಚ್ಚರಿಕೆ ಕೊಡುವ ಗಟ್ಟಿತನವನ್ನು ಅವರು ತೋರಲಿ ಎಂದಿದ್ದಾರೆ.
ಪಟಾಕಿ ಸಿಡಿಸಿ ಸಂಭ್ರಮ
ತರೀಕೆರೆ: ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಪುರಸಭೆ ಮುಂಭಾಗದಲ್ಲಿ ಭಾರೀ ಪಟಾಕಿ ಸಿಡಿಸಿ ವಿವಿಧ ಬಗೆಯ ಸಿಹಿ ಹಂಚಿದರು. ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಮೋಹನಕುಮಾರ್ ಕರಕುಚ್ಚಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎನ್.ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಆರ್.ದೇವಾನಂದ್, ಸುನೀಲ್ ಕುಮಾರ್, ಪುರಸಭೆ ಮಾಜಿ ಸದಸ್ಯರಾದ ಟಿ.ಎಂ. ಬೋಜರಾಜ್, ಖಾಲಿಕ್ ಅಹಮದ್, ಕೃಷ್ಣಮೂರ್ತಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿಎಚ್‌ಎಲ್ ರಮೇಶ್, ಅಜಯ್‌ಕುಮಾರ್, ಅವಿನಾಶ್, ಶಿವಮೂರ್ತಿ, ಶಿವಣ್ಣ, ಸುನೀಲ್‌ಕುಮಾರ್ ಡಿ.ಆರ್. ಗುರುಮೂರ್ತಿ, ವೆಂಕಟೇಶ್ ಮಹೇಂದ್ರಕುಮಾರ್ ಬೇಲೇನಹಳ್ಳಿ ಸೋಮಶೇಖರ್, ಟಿ.ಜಿ. ಮಂಜುನಾಥ್, ಕಾರ್ಯಕರ್ತರು ಭಾಗವಹಿಸಿದ್ದರು. ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಮಾತನಾಡಿ, ಯುವಕರಿಗೆ ಬಡವರಿಗೆ ಆಶಾಕಿರಣ ಆಗಿದ್ದಾರೆ ಎಂದು ತಿಳಿಸಿದರು. ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಎನ್. ಮಂಜುನಾಥ್, ಪುರಸಭೆ ಮಾಜಿ ಸದಸ್ಯ ಟಿ.ಎಂ. ಭೋಜರಾಜ್, ಆರ್.ದೇವಾನಂದ್, ಮೋಹನ್‌ಕುಮಾರ್ ಕರಕುಚ್ಚಿ, ಆಜಯಕುಮಾರ್, ಅವಿನಾಶ್ ಮಾತನಾಡಿದರು.
ಜಿಪಂ ಮುತ್ತಿಗೆಗೆ ಸಮಿತಿ ನಿರ್ಧಾರ
ಮೂಡಿಗೆರೆ: ತಾಲೂಕಿನ ಕಳಸ ಪಟ್ಟಣಕ್ಕೆ ನೀರು ಪೂರೈಸುವ 6.90 ಲಕ್ಷ ರು. ವೆಚ್ಚದ ಹೊನ್ನೆಕಾಡು ಯೋಜನೆ ಅಧಿಕಾರಿಗಳ ನಿರ್ಲಕ್ಷತೆಗೆ ಒಳಗಾಗಿದೆ. ಈ ಬಗ್ಗೆ ಜಿ.ಪಂ ಗಮನ ಸೆಳೆಯಲು ಜೂ.3ರಂದು ಜಿ.ಪಂಗೆ ಮುತ್ತಿಗೆ ಹಾಕಲು ಹೊನ್ನೆಕಾಡು ಕುಡಿಯುವ ನೀರಿನ ಹೋರಾಟ ಸಮಿತಿ ತೀರ್ಮಾನಿಸಿದೆ.
ಕಳಸ ಗ್ರಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಮಿತಿಯು ಈ ತೀರ್ಮಾನವನ್ನು ತೆಗೆದುಕೊಂಡಿದೆ. ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎ. ಶೇಷಗಿರಿ, ಯೋಜನೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಕಳಸ ಬಂದ್ ಹಾಗೂ ರಾಜ್ಯ ಹೆದ್ದಾರಿ ಬಂದ್ ನಡೆಸಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಆದ್ದರಿಂದ ಅಧಿಕಾರಿಗಳ ಗಮನ ಸೆಳೆಯುಲು ಜಿ.ಪಂ.ಸಾಮಾನ್ಯ ಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಹೋರಾಟ ಸಮಿತಿಯ ಗೌರಾವಾಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಮಾತನಾಡಿ, ಕಾಮಗಾರಿಯ ಬಗ್ಗೆ ಅಧಿಕಾರಿಗಳು ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ. ಕಳಸ ಬಂದ್ ಮಾಡುತ್ತೇವೆ ಎಂದು ಹೇಳಿದಾಗ ದೌಡಾಯಿಸಿದ ಅಧಿಕಾರಿಗಳು ಮತ್ತೆ ಇತ್ತ ಕಡೆ ನೋಡಿಲ್ಲ ಎಂದರು. ಗ್ರಾಪಂ ಅಧ್ಯಕ್ಷೆ ಉಷಾ, ಜ್ವಾಲನಯ್ಯ, ವಿಶ್ವನಾಥ್ ರಾವ್, ಸಂತೋಷ್ ಹಿನಾರಿ, ಅಬ್ದುಲ್ ಶಕುರು, ಮಮ್ತಾಜ್ ಬೇಗಂ, ಸುರೇಶ್ ಗೌಡ, ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್, ರುದ್ರಾ ಆಚಾರ್, ರಂಗನಾಥ್ ಮತ್ತಿತರರು ಇದ್ದರು.
ಕೃಷಿ ಡಿಪ್ಲೋಮಾ: ಅರ್ಜಿ ಅಹ್ವಾನ
ಚಿಕ್ಕಮಗಳೂರು: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ 2014-15ನೇ ಸಾಲಿಗೆ ಎರಡು ವರ್ಷಗಳ ಡಿಪ್ಲೋಮಾ (ಕೃಷಿ) ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಕತ್ತಲಗೆರೆಯ ಹಾಗೂ ಉಡುಪಿ ಜಿಲ್ಲೆಯ ಬ್ರಹ್ಮಾವರದ ಡಿಪ್ಲೊಮಾ (ಕೃಷಿ) ಮಹಾವಿದ್ಯಾಲಯದ ಆವರಣದಲ್ಲಿ ಡಿಪ್ಲೊಮಾ (ಕೃಷಿ) ಕಾಲೇಜುಗಳಲ್ಲಿ ಸೇರ್ಪಡೆಗೊಳ್ಳಬಹುದಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕುಲಸಚಿವರ ಕಚೇರಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ ಅಥವಾ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕತ್ತಲಗೆರೆ ಅಥವಾ ವಲಯ ಕೃಷಿ ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.