'ಹೊಸ ಗ್ರಾಪಂ ರಚನೆಗೆ ತಿಂಗಳೊಳಗೆ ಅರ್ಜಿ ಸಲ್ಲಿಸಿ'
ಚಿಕ್ಕಮಗಳೂರು: ಗ್ರಾಮ ಪಂಚಾಯ್ತಿಗಳ ಕೇಂದ್ರ ಸ್ಥಾನಗಳ ಬದಲಾವಣೆ ಹಾಗೂ ಹೊಸದಾಗಿ ಗ್ರಾಪಂಗಳ ರಚನೆ ಮತ್ತು ಬೇರೆ ಗ್ರಾಮ ಪಂಚಾಯ್ತಿಗಳಿಗೆ ತಮ್ಮ ಗ್ರಾಮಗಳ ಸೇರ್ಪಡೆಗೊಳಿಸುವ ಕುರಿತು ಸಾರ್ವಜನಿಕರು ಒಂದು ತಿಂಗಳೊಳಗೆ ಅಹವಾಲುಗಳನ್ನು ನೀಡಬಹುದೆಂದು ಗ್ರಾಪಂ ಮರು ವಿಂಗಡಣೆ ಹಾಗೂ ಕೇಂದ್ರ ಸ್ಥಾನಗಳ ಬದಲಾವಣೆ ಸಮಿತಿ ಅಧ್ಯಕ್ಷರಾದ ಎಸ್.ಜಿ. ನಂಜಯ್ಯ ಮಠ್ ಹೇಳಿದ್ದಾರೆ.
ಜಿಪಂಕಚೇರಿ ಸಭಾಂಗಣದಲ್ಲಿ ಸೋಮವಾರ ಗ್ರಾಮ ಪಂಚಾಯ್ತಿಗಳ ಪುನರ್ ವಿಂಗಡಣೆ, ಪರಿಷ್ಕರಣೆ ಹಾಗೂ ಕೇಂದ್ರ ಸ್ಥಾನಗಳ ಬದಲಾವಣೆ ಮಾಡುವ ಕುರಿತು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ತಿಂಗಳೊಳಗೆ ಅರ್ಜಿ ಸಲ್ಲಿಸಿ: ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ. ಈಗಾಗಲೇ 10 ಜಿಲ್ಲೆಗಳಿಗೆ ಭೇಟಿ ನೀಡಲಾಗಿದ್ದು, ಇನ್ನುಳಿದ ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲು ಆಗದೆ ಇದ್ದವರು ಮುಂದಿನ ಒಂದು ತಿಂಗಳೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಈ ಅವಕಾಶವನ್ನು ಸಾರ್ವಜನಿಕರು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಜಿಲ್ಲೆಯ ಸಾರ್ವಜನಿಕರು ಹಾಗೂ ಸ್ಥಳೀಯ ಪ್ರತಿನಿಧಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಮಾರ್ಪಾಡು ಅಥವಾ ಹೊಸ ಗ್ರಾಮ ಪಂಚಾಯಿತಿಗಳ ರಚನೆ ಅವಶ್ಯಕತೆ ಇದ್ದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಪಂ ಸದಸ್ಯರು, ಎಮ್ಮೆದೊಡ್ಡಿ, ತ್ಯಾಗದಕಟ್ಟೆ, ಕಳಸ, ಗೋಣಿಬೀಡು ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಜನಸಂಖ್ಯೆ ಇರುವುದರಿಂದ ಹೊಸ ಗ್ರಾಮ ಪಂಚಾಯಿತಿಯನ್ನು ರಚನೆ ಮಾಡಬೇಕು ಎಂದು ಮನವಿ ನೀಡಿದರು.
ಸಭೆಯಲ್ಲಿ ಗ್ರಾಪಂ ಮರು ವಿಂಗಡಣೆ ಹಾಗೂ ಕೇಂದ್ರ ಸ್ಥಾನಗಳ ಬದಲಾವಣೆ ಸಮಿತಿ ಸದಸ್ಯರಾದ ಎಸ್.ಕೆ. ಭಗವತ್, ಎ.ಆರ್. ಸುಧಾಮಣಿ, ಜಿ.ಪಂ. ಅಧ್ಯಕ್ಷೆ ಪದ್ಮಾ ಚಂದ್ರಪ್ಪ, ಉಪಾಧ್ಯಕ್ಷೆ ಅನ್ನಪೂರ್ಣ ಚನ್ನಕೇಶವ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ನಿರಂಜನ್, ಉಪ ಕಾರ್ಯದರ್ಶಿ ನಾಗರಾಜ್, ಪಂಚಾಯಿತಿ ಸದಸ್ಯರು ಇದ್ದರು.
ಹೊಸ ಗ್ರಾಪಂಗೆ 11 ಅರ್ಜಿಗಳು
ಜಿಲ್ಲೆಯಲ್ಲಿ ಹೊಸದಾಗಿ ಗ್ರಾಮ ಪಂಚಾಯ್ತಿಗಳ ರಚನೆಗಾಗಿ 11 ಅರ್ಜಿಗಳು ಬಂದಿವೆ ಎಂದು ಎಸ್.ಜಿ. ನಂಜಯ್ಯ ಮಠ್ ಹೇಳಿದ್ದಾರೆ.
ಇದರ ಜತೆಗೆ ಗ್ರಾಮ ಪಂಚಾಯ್ತಿಗಳ ಕೇಂದ್ರ ಸ್ಥಾನಗಳ ಬದಲಾವಣೆ ಕೋರಿ 2 ಅರ್ಜಿಗಳು ಬಂದಿವೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು. ಮಲೆನಾಡು ಭಾಗದಲ್ಲಿ ಒಂದು ಗ್ರಾಮ ಪಂಚಾಯ್ತಿ ಕನಿಷ್ಠ 2500 ಜನಸಂಖ್ಯೆ ಹೊಂದಿರಬೇಕು. ಇನ್ನು ಬಯಲುಸೀಮೆ ಪ್ರದೇಶದಲ್ಲಿ ಈ ಸಂಖ್ಯೆ ಗರಿಷ್ಠ 5000 ಇರಬೇಕು. ರಾಜ್ಯದ 10 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ಜುಲೈ ತಿಂಗಳವರೆಗೆ ರಾಜ್ಯದಲ್ಲಿ ಪ್ರವಾಸ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಮಾಹಿತಿಯನ್ನು ಕ್ರೋಢೀಕರಿಸಿ, ಸೆಪ್ಟಂಬರ್ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.