'ಯೋಗ್ಯ ಕಾರ್ಯದಿಂದ ಕರ್ತವ್ಯ ಪಾಲನೆ ಅರಿವು'
ಮೂಡಿಗೆರೆ: ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳೆಯರ ಸಬಲೀಕರಣ ವಿಚಾರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ ಎಂದು ಬಣಕಲ್ ವಿಸ್ಮಯ ಜೆಸಿಐನ ಸುರೇಶ್ ಎಸ್.ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಬಣಕಲ್ ಹೋಬಳಿ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ವಲಯಮಟ್ಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಡಾ. ಡಿ.ವೀರೇಂದ್ರ ಹೆಗ್ಗಡೆ ತಾರತಮ್ಯ ಲೇಪನ ಇಲ್ಲದಿರುವಂತೆ ಗ್ರಾಮೀಣಭಿವೃದ್ಧಿಗೆ ಯೋಜನೆಯನ್ನು ಅವಿಸ್ಮರಣೀಯವಾಗಿ ಕಾರ್ಯಗತಗೊಳಿಸುತ್ತಿದ್ದಾರೆ. ಅವರ ಯೋಜನೆ, ಕಲ್ಪನೆ, ಕ್ರಿಯಾಶೀಲತೆ, ನುಡಿದಂತೆ ನಡೆಯುವ ಗುಣ, ಯೋಜನೆಗಳನ್ನು ಸಾಕಾರಗೊಳಿಸುವ ನೈಪುಣ್ಯತೆಗೆ ಸರಿಸಾಟಿ ಇಲ್ಲ ಎಂದರು.
ಸ್ವಸಹಾಯ ಸಂಘಗಳಲ್ಲಿ ನಾಯಕತ್ವದ ಗುಣ ಮೂಡಿಸುವ ರೀತಿ ಮೆಚ್ಚುವಂತಿದೆ. ಪ್ರತಿಯೊಬ್ಬರೂ ನಾಯಕತ್ವ ವಹಿಸಿದ ಬಳಿಕ ಅವರಲ್ಲಿ ತಾಳ್ಮೆ, ಧನಾತ್ಮಕ, ಗುಣಾತ್ಮಕ ಬದಲಾವಣೆಗಳಾಗಿವೆ. ಯೋಗ್ಯ ಕೆಲಸಗಳಿಂದ ಕರ್ತವ್ಯ ಪಾಲನೆಯ ಅರಿವು ಉಂಟಾಗುತ್ತದೆ ಎಂದರು.
ಯೋಜನಾಧಿಕಾರಿ ಲೀಲಾವತಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಸೌಕರ್ಯಗಳು, ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುತ್ತಿದೆ. ಸ್ಥಳೀಯ ಸಂಪನ್ಮೂಲದೊಡನೆ ಕ್ಷೇತ್ರದ ನೆರವು ಬಳಸಿ ಆಮೂಲಾಗ್ರ ಬದಲಾವಣೆಗೆ ಮುಂದಾಗುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿದೆ. ಸ್ವಚ್ಛತೆ, ಶೌಚಾಲಯ ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಗಳು ನಡೆಯುತ್ತಿವೆ. ಸ್ವಸಹಾಯ ಗುಂಪುಗಳು ಉತ್ತಮ ಮಾರ್ಗದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕಿ ಸುನೀತಾ, ಲೆಕ್ಕ ಪರಿಶೋಧಕಿ ಶಾಲಿನಿ, ಸಹಿತ ಸ್ವಸಹಾಯ ಗುಂಪುಗಳ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.