ವರುಣನ ಆರ್ಭಟಕ್ಕೆ ಸಂಚಾರ ಅಸ್ತವ್ಯಸ್ತ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 27
ಚಿಕ್ಕಮಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರವಾಗಿ ಸುರಿದ ಮಳೆ.
- ಇದೇನು, ಯಾವತ್ತಿನಲ್ಲಿ ಮಳೆ ಬಂದಿತು. ನಾವು ಇಲ್ಲಿನವರಾಗಿದ್ದರೂ ನಮಗೆ ಗೊತ್ತಿಲ್ಲದೆ ಯಾವಾಗ ಮಳೆ ಬಂದಿತು ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು.
ಇದು, ಕೇವಲ ಕೆಲವರಿಗೆ ಮಾತ್ರವಲ್ಲ, ಹೆಚ್ಚಿನ ಜನರಲ್ಲಿ ಈ ಪ್ರಶ್ನೆ ಎದುರಾಗಬಹುದು. ಕಾರಣ, ಇಲ್ಲಿನ ಕೋಟೆ, ಜಿಲ್ಲಾಧಿಕಾರಿಗಳ ಕಚೇರಿ, ಆಜಾದ್ ಪಾರ್ಕ್, ಎಂಜಿ ರಸ್ತೆ, ಐಜಿ ರಸ್ತೆ, ಮಾರ್ಕೆಟ್ ರಸ್ತೆ ಸೇರಿದಂತೆ ಕೆಲವೆ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆಗೆ ಆರಂಭವಾದ ಮಳೆ 2.30 ವರೆಗೆ ಧಾರಾಕಾರವಾಗಿ ಸುರಿಯಿತು.
ಬಲವಾಗಿ ಬೀಸಿದ ಗಾಳಿಗೆ ಕೆಲವೆಡೆ ಮರಗಳ ಕೊಂಬೆಗಳು ಮುರಿದು ಬಿದ್ದಿದ್ದವು. ಪ್ರಮುಖ ರಸ್ತೆಗಳಲ್ಲಿರುವ ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯ ಮೇಲೆ ಹರಿಯುತ್ತಿತ್ತು. ಗಾಳಿ ಮತ್ತು ಭಾರಿ ಪ್ರಮಾಣದಲ್ಲಿ ಸುರಿದ ಮಳೆಗೆ ವಾಹನ ಚಾಲಕರು, ತಮ್ಮ ವಾಹನಗಳನ್ನು ಲೈಟ್ ಆನ್ ಮಾಡಿಕೊಂಡು ಚಾಲನೆ ಮಾಡುತ್ತಿದ್ದರು. ಇದೇ ವೇಳೆಗೆ ಗುಡುಗು ಸಿಡಿಲಿನ ಆರ್ಭಟವೂ ಆಗಾಗ ಕೇಳಿ ಬಂದಿದ್ದರಿಂದ ಪಾದಚಾರಿಗಳು, ದ್ವಿಚಕ್ರ ವಾಹನಗಳ ಚಾಲಕರು ಅಂಗಡಿಗಳ ಮುಂಭಾಗದಲ್ಲಿ ಆಶ್ರಯ ಪಡೆದಿದ್ದರು.
ಸಂಚಾರಕ್ಕೆ ಅಡಚಣೆ: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲ. ಆದ್ದರಿಂದ ರಸ್ತೆಯ ಮೇಲೆಯೇ ಮಳೆಯ ನೀರು ನಿಂತಿದ್ದರಿಂದ ವಾಹನ ಚಾಲಕರಿಗೆ ತುಂಬಾ ಅಡಚಣೆಯಾಗಿತ್ತು. ಮಧ್ಯಾಹ್ನ ಮನೆಗೆ ಊಟಕ್ಕಾಗಿ ತೆರಳಬೇಕಾಗಿದ್ದ ಸರ್ಕಾರಿ ನೌಕರರು ಕಚೇರಿಯಲ್ಲಿಯೇ ಇರುವಂತೆ ಮಾಡಿತು. ಮಧ್ಯಾಹ್ನ 2.30ರ ನಂತರ ಮಳೆ ಸಂಪೂರ್ಣವಾಗಿ ಬಿಡುವು ನೀಡಿದ್ದರಿಂದ ಮತ್ತೆ ಬಿಸಿಲು ಕಂಡಿತು.
ಸೋರುತಿಹುದು ಡಿಸಿ ಕಚೇರಿ ಮಾಳಿಗೆ
ಚಿಕ್ಕಮಗಳೂರು: ನಗರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ನೈಜ ಚಿತ್ರಣ ಬಯಲಾಯಿತು.
ಈ ಕಚೇರಿಯಲ್ಲಿರುವ ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮಳೆಯಿಂದ ಸೋರುತ್ತಿರುವುದು ಕಂಡು ಬಂದಿತು. ತಾವು ಕುಳಿತುಕೊಳ್ಳುವ ಸ್ಥಳದಲ್ಲಿ ಮಳೆಯ ನೀರು ಸೋರುತ್ತಿರುವುದರಿಂದ ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕಿ ಜರೀನಾ ಶೆಕ್ ಅವರು ಡಸ್ಟ್ ಬಿನ್ನಲ್ಲಿ ನೀರು ಹಿಡಿಯುತ್ತಿರುವುದು ಕಂಡು ಬಂದಿತು.
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ತುಂಬಾ ಹಳೆಯದು. ಇದು, 1864ರಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿನ ಹಲವು ಕಚೇರಿಗಳು ಮಳೆಗೆ ಸೋರುತ್ತಿವೆ. ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ನೌಕರರು ಹಿಂದೇಟು ಹಾಕುತ್ತಿದ್ದಾರೆ.
ಇದನ್ನು ದುರಸ್ತಿಪಡಿಸುವ ಕೆಲಸ ಈವರೆಗೆ ನಡೆದಿಲ್ಲ. ಇದಕ್ಕೆ ಜಿಲ್ಲಾಧಿಕಾರಿಗಳು ಮನಸ್ಸು ಮಾಡಿದರೂ ಇದನ್ನು ದುರಸ್ತಿಪಡಿಸಬೇಕಾಗಿರುವ ಲೋಕೋಪಯೋಗಿ ಇಲಾಖೆ ಮುಂದಾಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಈ ಕಟ್ಟಡ ದುರಸ್ತಿಗಾಗಿ ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಪತ್ರ ಮುಖೇನ ತಿಳಿಸಿದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ.
ಹಲವು ಸಮಸ್ಯೆ: ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆ ಬಂದರೆ, ಸೋರುತ್ತಿರುವ ಸ್ಥಳದಲ್ಲಿ ಡಸ್ಟ್ ಬಿನ್ ಹಾಗೂ ಇತರೆ ವಸ್ತುಗಳನ್ನು ಇಡುತ್ತಿದ್ದಾರೆ. ಇಲ್ಲಿನ ಶೌಚಾಲಯ ನಿರ್ಮಾಣಕ್ಕೆ ಸುಮಾರು 5 ಲಕ್ಷ ಖರ್ಚು ಮಾಡಿ ದುರಸ್ತಿಗೊಳಿಸಿದರೂ ಬಳಕೆ ಮಾಡಿಕೊಳ್ಳಲು ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ಇಲ್ಲಿದ್ದ ವಾಟರ್ ಟ್ಯಾಂಕ್ಅನ್ನು ಕೆಡವಿ ಹೊಸದೊಂದು ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿತ್ತು. ಆದರೆ, ಗುತ್ತಿಗೆದಾರರ ಅವೈಜ್ಞಾನಿಕ ಹಾಗೂ ಬೇಜವಾಬ್ದಾರಿಯಿಂದಾಗಿ ಟ್ಯಾಂಕ್ ಇಟ್ಟ ಒಂದೇ ದಿನದಲ್ಲಿ ಹಾಳಾಗಿ ಹೋಯಿತು. ಶೌಚಾಲಯದ ಬಳಕೆಗೆ ಒಂದು ಹನಿ ನೀರಿಲ್ಲ. ಸುಮಾರು 15 ದಿನಗಳಿಂದ ಈ ಅವ್ಯವಸ್ಥೆಯಾದರೂ ಸಮಸ್ಯೆ ಬಗೆಹರಿಸುವ ಕೆಲಸ ಆಗಿಲ್ಲ.