ಶಾಶ್ವತ ಕುಡಿವ ನೀರಿನ ಮೂರು ಯೋಜನೆಗೆ ಯತ್ನ
ಕ.ಪ್ರ.ವಾರ್ತೆ , ಕಡೂರು , ಮೇ 27
ಹೆಬ್ಬೆ ಯೋಜನೆ ಜಾರಿ ಸೇರಿದಂತೆ ಮೂರು ಶಾಶ್ವತ ಯೋಜನೆ ತರುವ ಆಶಯ ಹೊಂದಿದ್ದು, ಭದ್ರಾ ಡ್ಯಾಂನಿಂದ ಕುಡಿಯುವ ನೀರು ತರಲು ಇದ್ದ ಅಡ್ಡಿ ಆತಂಕ ನಿವಾರಿಸುವಲ್ಲಿ ನನ್ನ ಹಾಗೂ ಬೇರೆಯವರ ಶ್ರಮ ಎಷ್ಟೆಂಬುದರ ಬಗ್ಗೆ ಬಹಿರಂಗ ಚರ್ಚೆಯಾಗಬೇಕಿದೆ ಎಂದು ಶಾಸಕ ವೈಎಸ್‌ವಿದತ್ತ ಹೇಳಿದರು.
ಪಟ್ಟಣದ ಕೆಎಲ್‌ವಿ ವೃತ್ತದಲ್ಲಿ ಭದ್ರಾ ಡ್ಯಾಂನಿಂದ ಪೈಪುಗಳ ಮುಖೇನ ಪ್ರಾಯೋಗಿಕ ನೀರು ಬಿಟ್ಟಿದ್ದನ್ನು ವೀಕ್ಷಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
2006- 07ರಲ್ಲಿ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಕೆ.ಎಂ. ಕೃಷ್ಣಮೂರ್ತಿ ಅವರು ಕಡೂರು- ಬೀರೂರು ಹಾಗೂ ಮಾರ್ಗ ಮಧ್ಯದ 34 ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಚಿಂತನೆ ನಡೆಸಿದ್ದರು.
ಅವರ ಕನಸಾಗಿದ್ದ 36 ಕೋಟಿ ವೆಚ್ಚದ ಭದ್ರಾ ಕುಡಿಯುವ ಯೋಜನೆಗೆ ಅನುಮೋದನೆ ಪಡೆಯಲಾಯಿತು. 2008ರ ಹೊತ್ತಿಗೆ ಕೆ.ಎಂ.ಕೆ. ನಾಲ್ಕನೇ ಬಾರಿ ಶಾಸಕರಾದಾಗ ಆಡಳಿತಾತ್ಮಕ ಅನುಮೋದನೆಯೊಂದಿಗೆ 2009ರಲ್ಲಿ ಭದ್ರಾ ಕುಡಿಯುವ ನೀರಿನ ಎಂಬ ಯೋಜನೆಯಾಗಿ ರೂಪುಗೊಂಡಿತು.
ಯೋಜನೆ ಕುರಿತು ಕೆಎಂಕೆ ಅವರ ದೂರದೃಷ್ಟಿಯ ಕನಸನ್ನು ಮರೆಯುವಂತಿಲ್ಲ. ಆದರೆ, ನಿಗದಿತ ಅವಧಿ ಜೂನ್ 2012ರ ವೇಳೆಗೆ ಕಾಮಗಾರಿ ಮುಗಿದು ಕಾರ್ಯಾರಂಭವಾಗಬೇಕಿತ್ತು. ಆಗಲಿಲ್ಲ ಎಂದರು.
ಅಧಿಕಾರಿಗಳ ಯಡವಟ್ಟಿನಿಂದ ಹಳಿಯೂರು ಘಟಕದ ಜಾಗದ ವಿವಾದ ಕೂಡ ಕಗ್ಗಂಟಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಕೆಲವರು ದತ್ತ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿಸಿದ್ದಾರೆ ಎಂದು ತಮ್ಮ ಮೇಲೆಯೇ ಆರೋಪ ಮಾಡಿದರು.
ಇಂತಹ ಕೀಳುಮಟ್ಟದ ವ್ಯಕ್ತಿ ನಾನಲ್ಲ. ನಾನು ಜಾಗದ ರೈತರ ಮನವೊಲಿಸಿ ರಾಜಿ ಸಂಧಾನಕ್ಕೆ ಒಪ್ಪಿಸಿದ್ದರಿಂದ ಕಾಮಗಾರಿ ವೇಗ ಪಡೆಯಲು ಸಾಧ್ಯವಾಯಿತು ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಭಂಡಾರಿ ಶ್ರೀನಿವಾಸ್, ಕೆ.ಎಂ. ಮಹೇಶ್ವರಪ್ಪ, ಎನ್. ಇಮಾಮ್, ರಾಂಪುರ ಮಹೇಶ್, ತಮ್ಮಯ್ಯ, ಸಿದ್ದಪ್ಪ, ತಿಮ್ಮೇಗೌಡ, ಬಾಬಣ್ಣ ಇತರರು ಇದ್ದರು.