ರೈತರಿಗೆ ತಲುಪದ ತಾಂತ್ರಿಕತೆ: ವಿಷಾದ
ನರಸಿಂಹರಾಜಪುರ: ನಮ್ಮ ದೇಶ ತಾಂತ್ರಿಕತೆಯಲ್ಲಿ ಮುಂದುವರಿಯುತ್ತಿದ್ದರೂ, ಅದು ನಾಲ್ಕು ಗೋಡೆಗಳ ಮಧ್ಯೆ ನಶಿಸಿಹೋಗುತ್ತಿದ್ದು, ರೈತರಿಗೆ ತಲುಪುತ್ತಿಲ್ಲ ಎಂದು ಬೆಂಗಳೂರಿನ ಕರ್ನಾಟಕ ಆಗ್ರೋ ಕೆಮಿಕಲ್ಸ್ನ ವಿಜ್ಞಾನಿ ಡಾ.ಎಂ. ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಬುಧವಾರ ಸೀತೂರಿನಲ್ಲಿ ಸೀತೂರು ವ್ಯವಸಾಯ ಸೇವಾ ಸಹಕಾರ ಸಂಘ, ಬೆಂಗಳೂರು ಕರ್ನಾಟಕ ಆಗ್ರೋ ಕೆಮಿಕಲ್ಸ್, ಕೊಪ್ಪ ಯಡಗರೆ ಸಹಕಾರ ಸಂಘ, ಕೊಪ್ಪ ಮಹಿಮಾ ಆಗ್ರೋ ಕ್ಲಿನಿಕ್, ಕಮಾಲಾಪುರ ಸರ್ವೋದಯ ರೈತ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾಳುಮೆಣಸು ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಸ್ಲೈಡ್ ಶೋನೊಂದಿಗೆ ತಾಂತ್ರಿಕ ಮಾಹಿತಿ ನೀಡಿ ಮಾತನಾಡಿದರು.
ಲಘು ಪೋಷಕಾಂಶ ಅಗತ್ಯ: ಎಲ್ಲಾ ಬೆಳೆಗಳಿಗೂ ಲಘು ಪೋಷಕಾಂಶ ಅಗತ್ಯವಾಗಿದೆ. ಬೆಳೆಗಳಿಗೆ ಸಮತೋಲನ ಪೋಷಕಾಂಶ ನೀಡಿದರೆ ಶೇ. 80 ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಉತ್ತಮ ಇಳುವರಿ ಪಡೆಯಬೇಕಾದರೆ ಪೋಷಕಾಂಶಯುಕ್ತ ಗೊಬ್ಬರ ನೀಡಬೇಕು. ಸಮಯಕ್ಕೆ ಸರಿಯಾಗಿ ಆರೈಕೆ ಮಾಡಬೇಕು. ಕೃಷಿ ಲಾಭದಾಯಕ ಬೆಳೆಯಾಗಿದ್ದು, ರೈತರು ವರ್ಷದ ಕೃಷಿ ಕೆಲಸಗಳ ಬಗ್ಗೆ ಯೋಜನೆಯೊಂದನ್ನು ತಯಾರಿಸಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವರ್ಷ ಕಾಳುಮೆಣಸು, ಜಾಯಿ ಕಾಯಿ, ಏಲಕ್ಕಿಯಿಂದ ಹಿಡಿದು ಎಲ್ಲಾ ಸಾಂಬಾರು ಬೆಳೆಗಳಿಗೂ ಉತ್ತಮ ಬೆಲೆ ಬಂದಿದೆ. ಪಶ್ಚಿಮಘಟ್ಟಗಳಲ್ಲಿ ಮಾತ್ರ ಸಾಂಬಾರ ಬೆಳೆ ಬೆಳೆಯಬಹುದಾಗಿದೆ. ಆದರೆ ಬೆಳೆಯನ್ನು ಸರಿಯಾದ ರೀತಿಯಲ್ಲಿ ಪೋಷಣೆ ಮಾಡುವುದರಲ್ಲಿ ರೈತರು ವಿಫಲವಾಗುತ್ತಿದ್ದಾರೆ. ಪ್ರಸ್ತುತ ಬೆಲೆ ಹೆಚ್ಚಾಗಿದ್ದರೂ, ಬೆಳೆ ಕಡಿಮೆಯಾಗಿದೆ. ಕೃಷಿಯನ್ನು ಕೈಗಾರಿಕೆ ಎಂದು ಪರಿಗಣಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ತಾಂತ್ರಿಕತೆ ಅಳವಡಿಸಿಕೊಳ್ಳಿ: ಹಿರಿಯ ಸಹಕಾರಿ ಎಸ್.ಡಿ.ವಿ. ಗೋಪಾಲರಾವ್ ಮಾತನಾಡಿ, ರೈತರು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಏಲಕ್ಕಿ ಬೆಳೆ ಮಂಗನ ಕಾಟದಿಂದ ಸಂಪೂರ್ಣ ನಾಶವಾಗಿದೆ. ಕಾಳು ಮೆಣಸಿಗೆ ಉತ್ತಮ ಧಾರಣೆ ಇದ್ದರೂ, ಫಸಲು ಕಡಿಮೆಯಾಗಿದೆ. ರೈತರು ಉಪ ಬೆಳೆ ಬೆಳೆಯುವುದರಿಂದ ಆರ್ಥಿಕವಾಗಿ ಲಾಭ ಗಳಿಸಬಹುದು ಎಂದರು.
ಸಹಾಯಕ ತೋಟಗಾರಿಕಾ ನಿರ್ದೇಶಕಿ ಸೀಮಾ ಮಾತನಾಡಿ, ರೈತರು ತರಬೇತಿಯಲ್ಲಿ ಪಾಲ್ಗೊಂಡು ಇಲ್ಲಿ ಪಡೆದ ಮಾಹಿತಿಯನ್ನು ಅಕ್ಕಪಕ್ಕದ ರೈತರಿಗೆ ತಿಳಿಸಬೇಕು. ಮುಖ್ಯವಾಗಿ ರೈತರು ಮಣ್ಣು ಪರೀಕ್ಷೆ ಮಾಡುತ್ತಿಲ್ಲ. ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಪೋಷಕಾಂಶಗಳನ್ನು ನೀಡುವುದು ಸರಿಯಾದ ಕ್ರಮವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮ್ಯಾಮ್ಕೋಸ್ ನಿರ್ದೇಶಕ ವೈ.ಎಸ್. ಸುಬ್ರಮಣ್ಯ ಮಾತನಾಡಿ, ಸೀತೂರು ಸೇವಾ ಸಹಕಾರ ಸಂಘದಲ್ಲಿ ಯಶಸ್ವಿನಿ ಯೋಜನೆ ಮುಂದುವರಿದಿದ್ದು, ಸದಸ್ಯರು ಅದರ ಪ್ರಯೋಜನ ಪಡೆದುಕೊಳ್ಳಬೇಕು. ಶಿವಮೊಗ್ಗದ ಮ್ಯಾಮ್ಕೋಸ್ನಲ್ಲೂ ವಿಮಾ ಯೋಜನೆ ಮುಂದುವರಿದಿದೆ. ಸಂಸ್ಥೆಯ ಸದಸ್ಯರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ರಮೇಶ್ ಸ್ವಾಗತಿಸಿದರು. ಅನಿಲ್ಕುಮಾರ್ ನಿರೂಪಿಸಿದರು. ಎ.ಎಸ್. ವೆಂಕಟರಮಣ ವಂದಿಸಿದರು.