ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

1.5 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಗುರಿ

Vishwanath S
Updated On : 30 May 2014, 11:54 am

ಮೇಗುಂದಾ ಹೋಬಳಿ ಬ್ರಾಹ್ಮಣ ಮಹಾಸಭಾ ವಾರ್ಷಿಕ ಸಮಾವೇಶದಲ್ಲಿ ಕಡೇಗದ್ದೆ ಚಕ್ರಪಾಣಿ
ಜಯಪುರ:  ಕೊಪ್ಪ ತಾಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ಕೊಪ್ಪದಲ್ಲಿ 1.5 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣದ ಗುರಿ ಹೊಂದಿದ್ದು, ಬಡ ಬ್ರಾಹ್ಮಣರ ಅನಾರೋಗ್ಯದ ಚಿಕಿತ್ಸೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ಸೇರಿದಂತೆ ಮಹಾಸಭಾದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದು ಕೊಪ್ಪ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕಡೇಗದ್ದೆ ಚಕ್ರಪಾಣಿ ಹೇಳಿದ್ದಾರೆ.
ಕೊಪ್ಪ ತಾಲೂಕು ಮೇಗುಂದಾ ಹೋಬಳಿ ಬ್ರಾಹ್ಮಣ ಮಹಾಸಭಾ ವತಿಯಿಂದ ಜಯಪುರದ ಸಮೀಪದ ಹಿರೇಹಳ್ಳಿ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಗುರುವಾರ ನಡೆದ ವಾರ್ಷಿಕ ಸಮಾವೇಶದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ರಾಜ್ಯ ಸಮಾಜ ಕಲ್ಯಾಣ ಸಚಿವರು ಬಡ-ಬ್ರಾಹ್ಮಣರನ್ನು ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸುವುದಾಗಿ ಹೇಳಿಕೆ ನೀಡಿದ್ದರು. ಆ ಹೇಳಿಕೆ ಹಿನ್ನಲೆಯಲ್ಲಿ ಕೊಪ್ಪ ಬ್ರಾಹ್ಮಣ ಮಹಾಸಭಾ ಸಚಿವರಿಗೆ ಕೃತಜ್ಞತಾ ಪೂರ್ವಕ ಪತ್ರ ಕಳುಹಿಸಿದ್ದು, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಿಂಬರಹ ದೊರೆತಿದ್ದು, ಅದರಲ್ಲಿ ಬಡ ಬ್ರಾಹ್ಮಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಸಹಾಯ ಒದಗಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಈ ಕುರಿತು ಬಡ ಮಕ್ಕಳ ಒಂದು ಪಟ್ಟಿಯನ್ನು ಇಲಾಖೆಗೆ ಶೀಘ್ರದಲ್ಲಿ ಸಲ್ಲಿಸಲಾಗುವುದು ಎಂದರು.
ಅವಕಾಶ ವಂಚಿತ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಳಗೋಡು ವೆಂಕಟೇಶ ರಾವ್, ಸರ್ಕಾರಿ ಉದ್ಯೋಗದಲ್ಲಿ ಮೀಸಲು ಇರುವುದರಿಂದಾಗಿ ಬ್ರಾಹ್ಮಣರು ಅವಕಾಶ ವಂಚಿತರಾಗುತ್ತಿದ್ದಾರೆ. ಸಂಘಟನೆಯಿಂದ ನಾವೇ ಅವಕಾಶ ಕಲ್ಪಿಸಿಕೊಳ್ಳಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಸರ್ಕಾರಿ ಹುದ್ದೆ ಅಪೇಕ್ಷಿಸದೆ ಸ್ವಂತ ಉದ್ಯೋಗ ನಿರ್ವಹಿಸಬೇಕು ಎಂದರು.
ಮೇಗುಂದಾ ಹೋಬಳಿ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷೆ ಶ್ಯಾಮಲಾ ರಂಗನಾಥ್, ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುಡ್ಡೇತೋಟ ನಟರಾಜ್, ಮೇಗುಂದಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ವಿ. ಶಿವಾನಂದರಾವ್, ವತ್ಸಲ ಭಾಸ್ಕರ್, ಜಯಶ್ರಿ ಮೋಹನ್, ಸೇಜಲ್, ಕೆ.ಸಿ. ವೆಂಕಟರಮಣ ನಾವುಡ, ಎಚ್.ಎಸ್. ವಾಸುದೇವ, ಸುಮಾ ಗಿರೀಶ್ ಇದ್ದರು.
ಹಿರೇಹಳ್ಳಿಯ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಗಾಯತ್ರಿ ಹೋಮ ಹಾಗೂ ಅರ್ಚನೆ ಕಾರ್ಯಕ್ರಮ ನೆರವೇರಿತು. 300ಕ್ಕೂ ಹೆಚ್ಚು ವಿಪ್ರ ಸಮಾಜದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement