ರಸ್ತೆ ಸಮಸ್ಯೆಗೆ ಶೀಘ್ರ ಪರಿಹಾರ
ಕ.ಪ್ರ.ವಾರ್ತೆ ಬೀರೂರು ಮೇ 30
ಪಟ್ಟಣದ ಭಗವತ್ನಗರ ರಸ್ತೆಯ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಪುರಸಭಾಧ್ಯಕ್ಷೆ ಗೀತಾ ಹೇಮಂತ್ ಹೇಳಿದ್ದಾರೆ.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿನ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ರಾಜ್ಯ ಸರ್ಕಾರ ಮನೆ ಕಂದಾಯ ಹೆಚ್ಚು ಮಾಡುವ ಸುತ್ತೋಲೆ ಕಳುಹಿಸಿದ್ದು, ಈ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಎಂ.ಜಿ. ಮಧು, ಬಿ.ಆರ್. ರವಿಕುಮಾರ್ ಹಾಗೂ ಉಪಾಧ್ಯಕ್ಷ ಲೋಕೇಶಪ್ಪ ಈ ಪ್ರಸ್ತಾವನೆ ಕೈಬಿಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪುರಸಭಾ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಸರ್ಕಾರದ ಸುತ್ತೋಲೆ ತಿರಸ್ಕರಿಸಲು ಬರುವುದಿಲ್ಲ. ನಾಗರಿಕರಿಗೆ ಹೆಚ್ಚಿನ ಹೊರೆ ಬೀಳುವುದಿಲ್ಲ ಎಂದರು.
ಶೇ. 22.75ರ ಯೋಜನೆಯಡಿ ಹಿಂದುಳಿದ ವರ್ಗದವರಿಗೆ ವಿತರಿಸಲಾಗುವ ಅನಿಲ ಸಂಪರ್ಕ, ಶೌಚಾಲಯ ನಿರ್ಮಾಣಕ್ಕೆ ಧನಸಹಾಯ, ಚಿಕಿತ್ಸಾ ವೆಚ್ಚ, ಪಕ್ಕಮನೆ ನಿರ್ಮಾಣ ಹಾಗೂ ಉನ್ನತ ವ್ಯಾಸಂಗಕ್ಕೆ ವೈದ್ಯಕೀಯ ವಿದ್ಯಾರ್ಥಿಗೆ ಪ್ರೋತ್ಸಾಹಧನ ನೀಡಿಕೆ, ಮುಂಬರುವ ದಿನಗಳಲ್ಲಿ ಪಟ್ಟಣದ ಎಲ್ಲಾ ಕೋಳಿ ಮಾರಾಟದ ಅಂಗಡಿಗಳನ್ನು ಒಂದೆಡೆ ಸ್ಥಳಾಂತರಿಸುವ ಕುರಿತಂತೆ ಚರ್ಚಿಸಲಾಯಿತು.
ಎಸ್ಎಫ್ಸಿ ನಿಧಿ ಬಳಕೆ: 13ನೇ ಹಣಕಾಸು ಯೋಜನೆ, ಎಸ್ಎಫ್ಸಿ ನಿಧಿ ಬಳಕೆ, ಅಂಗವಿಕಲ ಕಲ್ಯಾಣದ ಹಣ ಬಳಕೆ, ಬೇಸಿಗೆಯಲ್ಲಿ ಪಟ್ಟಣದ ಖಾಸಗೀ ಟ್ಯಾಂಕರ್ಗಳ ಮೂಲಕ ನಾಗರಿಕರಿಗೆ ನೀರು ಪೂರೈಸಿರುವ ಹಣ ಬಿಡುಗಡೆ, ಪಟ್ಟಣದ ತರಳಬಾಳು ಕಲ್ಯಾಣ ಮಂದಿರದಿಂದ ತ್ರಿನೇತ್ರ ಚಿತ್ರಮಂದಿರದವರೆಗೆ ಎಲ್ಇಡಿ ಬೀದಿ ದೀಪಗಳ ಅಳವಡಿಕೆ, ಹೈಮಾಸ್ಟ್ ದೀಪಗಳ ದುರಸ್ತಿ ಹಾಗೂ ಅಳವಡಿಕೆ, ಭದ್ರಾ ನೀರು ಬರುತ್ತಿರುವ ಹಿನ್ನಲೆಯಲ್ಲಿ ಊರಿನ ಒಳಗಡೆಯ ಪೈಪ್ಲೈನ್ ದುರಸ್ತಿ ಹಾಗೂ ನೂತನ ಪೈಪ್ಲೈನ್ ಜೋಡನೆಗೆ ಅನುದಾನ ಬಳಸಿಕೊಳ್ಳುವ ಕುರಿತಂತೆ ಚರ್ಚಿಸಲಾಯಿತು.
ಚೌಡಪ್ಪನ ಹೊಲದ 13 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಚರ್ಚಿಸಲಾಯಿತಾದರೂ ಆಶ್ರಯ ಸಮಿತಿಯ ತೀರ್ಮಾನದಂತೆ ಹಕ್ಕುಪತ್ರ ವಿತರಣೆಗೆ ಶಾಸಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಲಾಯಿತು.
ನಿರ್ವಹಣಾ ವೆಚ್ಚ: ಸಾರ್ವಜನಿಕರಿಂದ ಕಸ ವಿಲೇವಾರಿಗೆ ಮನೆ ಕಂದಾಯ ವಸೂಲಿ ಜತೆ ಮಾಸಿಕ 20ಗಳಂತೆ ವಾರ್ಷಿಕ 240 ಸಂಗ್ರಹಿಸಲಾಗುವುದು ಎಂಬ ಅಧಿಕಾರಿಗಳ ಪ್ರಶ್ನೆಗೆ, ಬಡವರಿಗೆ ಹೊರೆಯಾಗಲಿದ್ದು, ನಿರ್ವಹಣಾ ವೆಚ್ಚ ಪರಿಷ್ಕರಿಸಬೇಕೆಂಬ ಇಂಗಿತವನ್ನು ಸದಸ್ಯರು ವ್ಯಕ್ತಪಡಿಸಿದರು.
ವಿವಿಧ ಅನುದಾನಗಳಡಿ ಬಳಕೆಯಾಗದೆ ಉಳಿದಿರುವ ಕೆಲ ಹಣಕ್ಕೆ ಸೂಕ್ತ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದುಕೊಳ್ಳುವ ಕುರಿತು ಚರ್ಚಿಸಲಾಯಿತು.
ನಾಮಫಲಕ ಅಳವಡಿಕೆಗೆ ಚರ್ಚೆ
ಪಟ್ಟಣದ ಬಡಾವಣೆಗಳಿಗೆ ನಾಮಫಲಕ ಅಳವಡಿಸುವ ಕುರಿತು 'ಕನ್ನಡಪ್ರಭ'ದಲ್ಲಿ ಪ್ರಕಟವಾದ ವರದಿಯ ಬಗ್ಗೆ ಕೆಲವು ಸದಸ್ಯರು ಪ್ರಸ್ತಾಪಿಸಿದಾಗ ಮುಂದಿನ ಸಭೆಯಲ್ಲಿ ಚರ್ಚಿಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವ ಭರವಸೆಯನ್ನು ಪುರಸಭಾಧ್ಯಕ್ಷೆ ಗೀತಾ ಹೇಮಂತ್ ನೀಡಿದರು.