ಏನೆಕಲ್: ಬಚ್ಚನಾಯಕ ದೈವದ ನೇಮೋತ್ಸವ
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಏನೆಕಲ್ ಗ್ರಾಮದ ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಸೋಮವಾರ ಪ್ರಾತಃಕಾಲ ಶ್ರೀ ಬಚ್ಚನಾಯಕ ದೈವದ ನೇಮೋತ್ಸವ ಜರುಗಿತು.
ಶುಕ್ರವಾರ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಉಗ್ರಾಣ ತುಂಬಿಸವ ಕಾರ್ಯ ನೆರವೇರಿತು.ಬಳಿಕ ಮುಹೂರ್ತ ತೋರಣ ಹಾಗೂ ಉಳ್ಳಾಕುಲು ವಗೈರೆ ದೈವಗಳ ನೇಮ ನೆರವೇರಿತು. ಶನಿವಾರ ಉಳ್ಳಾಳ್ತಿ ವಗೈರೆ ದೈವಗಳ ನೇಮ ನಡಾವಳಿಗಳು ಸಮಾಪನಗೊಂಡಿತು. ಭಾನುವಾರ ಭಂಡಾರ ಬಂದು, ಉಡ್ಡೋತ್ತಾರುಟ ಕುಮಾರ ದೈವಗಳ ನೇಮ ಮತ್ತು ಪ್ರಧಾನಿ ವಗೈರೆ ದೈವಗಳ ನೇಮ ನಡೆಯಿತು. ಸೋಮವಾರ ಬೆಳಗ್ಗೆ ಶ್ರೀ ಬಚ್ಚನಾಯಕ ದೈವದ ನೇಮೋತ್ಸವ ನೆರವೇರಿತು.
ಏನೆಕಲ್ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಈ ಮೊದಲ ದಿನಗಳಲ್ಲಿ ವಾರ್ಷಿಕ ಜಾತ್ರೋತ್ಸವವು ನೆರವೇರಿತು. ಗೊನೆ ಕಡಿಯುವುದರೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ದೊರಕಿತ್ತು. ನಂತರ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ರಂಗಪೂಜೆ, ರಾತ್ರಿ ಶ್ರೀ ಭೂತ ಬಲಿ ಉತ್ಸವ, ವಸಂತ ಕಟ್ಟೆಪೂಜೆ, ಗಣಪತಿ ಹೋಮ, ಕಲಶ ಪೂಜೆ, ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದವು.