ಸೌದಿ ಅರೇಬಿಯಾ ಕಾರ್ಮಿಕ ನೀತಿ: ಕೇಂದ್ರ ಪ್ರವೇಶ ಆಗ್ರಹ
ಮಂಗಳೂರು: ಸೌದಿ ಅರೇಬಿಯಾ ಜಾರಿಗೆ ತಂದಿರುವ ಹೊಸ ಕಾರ್ಮಿಕ ನೀತಿಯಿಂದ ಭಾರತೀಯ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿಯಿದ್ದು, ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಡಿವೈಎಫ್.ಐ ಆಗ್ರಹಿಸಿದೆ.
ಸೌದಿ ಅರೇಬಿಯಾದ ಸರ್ಕಾರದ ನೀತಿಯ ಪ್ರಕಾರ ಶೇ. 10 ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕಿದೆ. ಸ್ವತಂತ್ರ ವೀಸಾ ಹೊಂದಿದವರು ಹಿಂದಿನಂತೆ ತಮಗಿಷ್ಟ ಬಂದಲ್ಲಿ ಕೆಲಸ ಮಾಡುವ ಅವಕಾಶ ಕಿತ್ತುಕೊಳ್ಳಲಾಗಿದ್ದು, ತಮ್ಮ ಆಯೋಜಕರ ಅಧೀನದಲ್ಲಿ ಕೆಲಸ ಮಾಡುವಂತೆ ಕಡ್ಡಾಯಗೊಳಿಸಿದೆ. ಪ್ರತಿ ವರ್ಷ ವೀಸಾ ನವೀಕರಣ ಶುಲ್ಕವನ್ನು ಏರಿಸಿದೆ. ನಿಯಮ ಉಲ್ಲಂಘನೆಯಾದಲ್ಲಿ ಕಡ್ಡಾಯವಾಗಿ ಭಾರತಕ್ಕೆ ಕಳುಹಿಸುವ ಕೆಲಸ ಮಾಡುತ್ತಿದೆ.
ಇಂಥ ಕಠಿಣ ನೀತಿಯಿಂದ ದೇಶದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದ್ದು, ಕರಾವಳಿಯ ಆರ್ಥಿಕತೆಯಲ್ಲಿ ಏರುಪೇರಾಗಲಿದೆ ಎಂದು ಡಿವೈಎಫ್.ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.