ಆಸ್ತಿ ತೆರಿಗೆ ಪಾವತಿಸಲು ಸೂಚನೆ
ಮೂಲ್ಕಿ: ನಗರ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಟ್ಟಡಗಳ ಹಾಗೂ ಕೃಷಿಯೇತರ ನಿವೇಶನಗಳ ಮಾಲೀಕರು ಮತ್ತು ಅನುಭೋಗದಾರರು 2013- 14ರ ಸಾಲಿನ ಆಸ್ತಿ ತೆರಿಗೆಯನ್ನು ಏ.30ರ ಒಳಗೆ ಪಾವತಿಸಿದ್ದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಂತೆ ಶೇ.5 ರಿಯಾಯಿತಿ ದೊರೆಯಲಿದ್ದು ಎಲ್ಲಾ ತೆರಿಗೆದಾರರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯುವಂತೆ, 2012- 13 ಸಾಲಿನ ತೆರಿಗೆಯನ್ನು ಪಾವತಿಸುವಂತೆ ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಗಮನೆಯಲ್ಲಿ 11 ರಿಂದ ಚಿಣ್ಣರಮೇಳ
ಸುಳ್ಯ: ಸುಳ್ಯ ಹಳೆಗೇಟಿನ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ಏ. 11ರಿಂದ 21ರ ತನಕ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಮೇಳವು ನಡೆಯಲಿದೆ. ರಂಗಾಯಣ ಶಿವಮೊಗ್ಗ ಇದರ ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ 8ರಿಂದ 15 ವರ್ಷದೊಳಗಿನ 100 ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಶಿಬಿರ ಸಂಪೂರ್ಣ ಉಚಿತವಾಗಿರುತ್ತದೆ. ಆಸಕ್ತರು ಏ. 7ರೊಳಗೆ ಮೊ. 9448215946 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದು ರಂಗನಿರ್ದೇಶಕ ಜೀವನ್ ರಾಮ್ ತಿಳಿಸಿದ್ದಾರೆ.
6ರಿಂದ ಸಸಿಹಿತ್ಲಿನಲ್ಲಿ ವಿವಿಧ ಸ್ಪರ್ಧೆ
ಮಂಗಳೂರು: ಸುರತ್ಕಲ್ನ ಸಸಿಹಿತ್ಲು ಶ್ರೀಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಸುವರ್ಣ ಮಹೋತ್ಸವ 25, 26ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ದೈಹಿಕ ಕಸರತ್ತಿನ ಕ್ರೀಡೆ, ಸಾಂಸ್ಕೃತಿಕ ಮನೋರಂಜನಾ ಸ್ಪರ್ಧೆ ಎ.6 ಮತ್ತು 7ರಂದು ಸಸಿಹಿತ್ಲು ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು ಸಮಿತಿ ಸದಸ್ಯ ಪರಮಾನಂದ ಸಾಲ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕುಸ್ತಿ ಸ್ಪರ್ಧೆ, ಹಗ್ಗಜಗ್ಗಾಟ, ದೋಣಿ ಸ್ಪರ್ಧೆ, ಈಜು ಸ್ಪರ್ಧೆ ನಡೆಯಲಿದೆ. 6ರಂದು ಸಂಜೆ ಆಹ್ವಾನಿತ ನೃತ್ಯ ತಂಡಗಳಿಂದ ನೃತ್ಯ ಸ್ಪರ್ಧೆ ನಡೆಯಲಿದೆ.