ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ನಾನಕ್ಕಿಳಿದ ಇಬ್ಬರು ಬಾಲಕಿಯರು ನೀರು ಪಾಲು

Vishwanath S
Updated On : 3 Apr 2013, 11:36 am

ಸುಳ್ಯ: ಸ್ನಾನಕ್ಕೆಂದು ಹೊಳೆಗೆ ಇಳಿದ ಇಬ್ಬರು ಬಾಲಕಿಯರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಗೂನಡ್ಕ ಸಮೀಪದ ದೊಡ್ಡಡ್ಕ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ದೊಡ್ಡಡ್ಕದ ಯೂನುಸ್ ಎಂಬವರ ಪುತ್ರಿ, ರಾಜಾರಾಂಪುರ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ನಿಶಾನತ್ ಮತ್ತು ಮಹಮ್ಮದ್ ಎಂಬವರ ಪುತ್ರಿ, ಅದೇ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಮೆಹನಾಝ್ ಮೃತ ಬಾಲಕಿಯರು. ಮನೆಯವರು ಬಟ್ಟೆ ಒಗೆಯಲು ಸಮೀಪದ ಹೊಳೆಗೆ ಹೋಗಿದ್ದ ವೇಳೆ ಈ ಬಾಲಕಿಯರು ಕೂಡ ಅವರೊಂದಿಗೆ ತೆರಳಿ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದರು. ಬಟ್ಟೆ ಒಗೆದು ಮನೆಗೆ ವಾಪಸ್ ಹೋಗಲೆಂದು ಮಕ್ಕಳನ್ನು ನೋಡಿದರೆ ಅವರು ಅಲ್ಲಿರಲಿಲ್ಲ. ಗಾಬರಿಗೊಂಡು ಅವರು ಬೊಬ್ಬೆ ಹೊಡೆಯಲು ಶುರು ಮಾಡಿದಾಗ ಸ್ಥಳೀಯರು ಸ್ಥಳಕ್ಕಾಗಮಿಸಿ ಹುಡುಕಾಡಿದಾಗ ನೀರಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಕಬ್ಬಿಣ ತಾಗಿ ಗಾಯಗೊಂಡಿದ್ದ ಯುವಕ ಸಾವು
ಸುಳ್ಯ:
ಕ್ರೇನ್‌ನಲ್ಲಿ ಕಬ್ಬಿಣವನ್ನು ಕಟ್ಟಡವೊಂದಕ್ಕೆ ಸಾಗಿಸುತ್ತಿದ್ದಾಗ ಆ ಕಬ್ಬಿಣ ತಾಗಿ ಕ್ರೇನ್ ಚಾಲಕ ಮೃತಪಟ್ಟಿದ್ದಾನೆ. ಸೋಮವಾರ ಸುಳ್ಯದ ಎ.ಪಿ.ಎಂ.ಸಿ. ಸಮೀಪ ಹೊಸ ಕಟ್ಟಡವೊಂದಕ್ಕೆ ಛಾವಣಿ ನಿರ್ಮಿಸಲು ಕೆಳಗಿನಿಂದ ಕಬ್ಬಿಣವನ್ನು ಕ್ರೇನ್ ಮೂಲಕ ಸಾಗಿಸಲಾಗುತ್ತಿತ್ತು. ಈ ವೇಳೆ ಕಬ್ಬಿಣ ಒಂದಕ್ಕೊಂದು ಸಿಲುಕಿಕೊಂಡಿತ್ತು. ಇದನ್ನು ಬಿಡಿಸಲು ಕ್ರೇನ್ ಚಾಲಕ ಅರಂಬೂರಿನ ಸುನಿಲ್ (24) ಹೋದಾಗ ಸಿಕ್ಕಿಕೊಂಡಿದ್ದ ಕಬ್ಬಿಣ ಒಮ್ಮಿಂದೊಮ್ಮೆಲೆ ಬಿಚ್ಚಿಕೊಂಡು ಸುನಿಲ್‌ನ ತಲೆಯ ಭಾಗಕ್ಕೆ ತಾಗಿತು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಸುಳ್ಯದಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆವೊಂದಕ್ಕೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಮಂಗಳವಾರ ಮಧ್ಯಾಹ್ನ ಅಸುನೀಗಿದ್ದಾರೆ.

ಅಪಘಾತದಲ್ಲಿ ಬಾಲಕಿ ಸಾವಿಗೆ ಕಾರಣ ಖಿನ್ನತೆ: ಚಾಲಕ ಆತ್ಮಹತ್ಯೆ
ಮಂಗಳೂರು:
ಅಪಘಾತದಿಂದ ಬಾಲಕಿ ಸಾವಿಗೆ ಕಾರಣನಾಗಿ ಖಿನ್ನತೆಯಿಂದ ಬಳಸುತ್ತಿದ್ದ ಕಾರು ಚಾಲಕ ಬಿಕರ್ನಕಟ್ಟೆ ಜಯಶ್ರೀಗೇಟ್ ಮನೆ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ವಲೇರಿಯನ್ ರಾಡ್ರಿಗಸ್ (50) ಆತ್ಮಹತ್ಯೆ ಮಾಡಿಕೊಂಡವರು. ಫೆ.23ರಂದು ವಲೇರಿಯನ್ ಚಲಾಯಿಸುತ್ತಿದ್ದ ಸುಮೊಗೆ ಡಿಕ್ಕಿ ಹೊಡೆದು 12 ವರ್ಷದ ಪೂಜಾ ಮೃತಪಟ್ಟಿದ್ದರು. ಬಳಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.  ಹೊಸ ಪ್ಲ್ಯಾಟ್ ಖರೀದಿಸಿ ಮಾ.31ರಂದು ಗೃಹಪ್ರವೇಶ ಮಾಡಿದ್ದರು.  ಸೋಮವಾರ ರಾತ್ರಿ ಹಳೆ ಬಾಡಿಗೆ ಮನೆಯಲ್ಲಿ ಮಲಗುತ್ತೇನೆ ಎಂದು ಹೋದವರು ವಾಪಸ್ ಬಂದಿರಲಿಲ್ಲ. ಹುಡುಕುತ್ತ ಹೋದವರಿಗೆ ಬಾವಿ ಬಳಿ ಚಪ್ಪಲಿ ಕಾಣಿಸಿತ್ತು. ರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ವಲೇರಿಯನ್ ಚಿಕ್ಕಮಗಳೂರು ಕೊಪ್ಪದಲ್ಲಿ ವಾಸವಾಗಿದ್ದು, ಅಲ್ಲಿನ ಆಸ್ತಿ ಮಾರಾಟ ಮಾಡಿ ಒಂದು ವರ್ಷದ ಹಿಂದೆ ಮಂಗಳೂರಿಗೆ ಬಂದು ನೆಲೆಸಿದ್ದರು. ವರ್ಷದಿಂದ ಬಿಕರ್ನಕಟ್ಟೆ ಜಯಶ್ರೀಗೇಟ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಪ್ಲ್ಯಾಟ್ ಖರೀದಿಸಿದ್ದರು.

ಡಾ.ಬೆಟ್ಟ ಪಿ. ವೆಂಕಪ್ಪಯ್ಯ ದಂಪತಿ ದೇಹದಾನ
ಸುಳ್ಯ:
ಇಲ್ಲಿನ ಡಾ. ಬೆಟ್ಟ ಪಿ. ವೆಂಕಪ್ಪಯ್ಯ ಮತ್ತು ಪಿ.ವಿ. ಭವಾನಿ ದಂಪತಿ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆ ಬಿಜೈಗೆ ತಮ್ಮ ಮರಣಾನಂತರ ದೇಹದಾನ ಮಾಡುವುದಾಗಿ ಘೋಷಿಸಿ, ಒಪ್ಪಂದ ಮಾಡಿಕೊಂಡಿದ್ದಾರೆ. ಡಾ. ಬೆಟ್ಟ ಪಿ. ವೆಂಕಪ್ಪಯ್ಯ (77), ಪಿ.ವಿ. ಭವಾನಿ (72) ದಂಪತಿ ಸುಳ್ಯ, ಮರ್ಕಂಜ, ಪುತ್ತೂರಿನಲ್ಲಿ ವೈದ್ಯ ವೃತ್ತಿ ಮಾಡಿದ್ದು, ವೃತ್ತಿಯೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ಜನ ಸೇವೆ ಮಾಡುತ್ತಿದ್ದಾರೆ.  20 ವರ್ಷಗಳ ಹಿಂದೆಯೇ ದೇಹದಾನ ಮಾಡುವ ವಿಚಾರ ಹೊಂದಿದ್ದು, ಪತ್ನಿಯ ನಿರ್ಧಾರವನ್ನು ಬೆಂಬಲಿಸಿ, ದೇಹದಾನದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಡಾ. ಬೆಟ್ಟ ಪಿ. ವೆಂಕಪ್ಪಯ್ಯ ತಿಳಿಸಿದ್ದಾರೆ.

ರಬ್ಬರ್ ಕಳವು
ಬೆಳ್ತಂಗಡಿ:
ಗುರುವಾಯನಕೆರೆ ರಬ್ಬರ್ ಖರೀದಿ ಕೇಂದ್ರದಿಂದ ಸುಮಾರು ರು. 1,25,000 ಮೌಲ್ಯದ ರಬ್ಬರನ್ನು ಕಳವುಗೈಯ್ಯಲಾಗಿದೆ. ಸೋಮವಾರ ರಾತ್ರಿ ವಾಹನದಲ್ಲಿ ಬಂದ ನಾಲ್ವರಲ್ಲಿ ಓರ್ವ ಕೇಂದ್ರದಲ್ಲಿದ್ದ ರಕ್ಷಕನಿಗೆ ಚೂರಿ ತೋರಿಸಿ ಬೆದರಿಸಿ ಆತನನ್ನು ಕಟ್ಟಡದ ಹಿಂದೆ ಕರೆದುಕೊಂಡು ಹೋದ ಎನ್ನಲಾಗಿದೆ. ಬಳಿಕ ಇನ್ನುಳಿದ ಮೂವರು ಕಟ್ಟಡದ ಷಟರ್ ಮುರಿದು ಒಳಗಿದ್ದ ರಬ್ಬರ್ ಕಟ್ಟುಗಳನ್ನು ವಾಹನದಲ್ಲಿ ತುಂಬಿಸಿದ್ದಾರೆ. ಕೆಲವು ಕಟ್ಟುಗಳು ಹೊರಗೆಯೇ ಉಳಿದಿವೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಪ್ಪಿದ ಬೆಂಕಿ ಅನಾಹುತ
ಬೆಳ್ತಂಗಡಿ:
ಪತ್ರಕರ್ತರೊಬ್ಬರ ಸಮಯೋಚಿತ ವರ್ತನೆಯಿಂದ ಎಟಿಎಂ ಕೇಂದ್ರ ಬೆಂಕಿಗಾಹುತಿಯಾಗುವುದು ತಪ್ಪಿದೆ. ಭಾನುವಾರ ಮುಸ್ಸಂಜೆ ಪತ್ರಕರ್ತರೊಬ್ಬರು ಹಣ ತೆಗೆಯಲು ಅಳದಂಗಡಿಯ ಬ್ಯಾಂಕ್‌ವೊಂದರ ಎಟಿಎಂಗೆ ಹೋದಾಗ ಯಂತ್ರದ ಹಿಂದುಗಡೆ ಹೊಗೆ ಸಹಿತ ಬೆಂಕಿ ಕಂಡುಬಂತು. ಕೂಡಲೆ ಅವರು ಶಾಖಾ ಪ್ರಬಂಧಕರಿಗೆ ಫೋನಾಯಿಸಿ ವಿಷಯ ತಿಳಿಸಿದರು. ಕೂಡಲೆ ಬಂದ ಪ್ರಬಂಧಕರು ತಕ್ಷಣ ಅದನ್ನು ನಿವಾರಿಸುವ ಕ್ರಮ ಕೈಗೊಂಡರು. ಯಾವಾಗಲೂ ಇರುವ ಎಟಿಎಂ ರಕ್ಷಕ ಅಂದು ರಜೆಯಲ್ಲಿದ್ದು ಬೇರೊಬ್ಬರನ್ನು ನಿಯಮಿಸಿದ್ದರು. ಆತ ಸೊಳ್ಳೆ ಬತ್ತಿ ಉರಿಸಿ ಎಲ್ಲಿಗೋ ಹೊರಟು ಹೋಗಿದ್ದ. ಬತ್ತಿ ಉರಿದು ಸನಿಹದ ಕೆಲ ವಸ್ತುಗಳಿಗೆ ತಗಲುವ ಹಂತದಲ್ಲಿತ್ತು. ಆ ಸಂದರ್ಭ ಬಂದ ಪತ್ರಕರ್ತನ ಸಮಯೋಚಿತ ವರ್ತನೆಯಿಂದ ಎಟಿಎಂ ಮಾತ್ರವಲ್ಲದೆ ಸನಿಹದ ಬ್ಯಾಂಕಿನ ಶಾಖೆ ಬೆಂಕಿಗಾಹುತಿಯಾಗುವುದು ತಪ್ಪಿದೆ.

ಸ್ಕೂಟರ್‌ಗೆ ಕಾರು ಡಿಕ್ಕಿ: ವಿದ್ಯಾರ್ಥಿಗೆ ಗಾಯ
ಪುತ್ತೂರು:
ಸ್ಕೂಟರ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ವಿದ್ಯಾರ್ಥಿಯೊಬ್ಬ ಗಾಯಗೊಂಡ ಘಟನೆ ಸೋಮವಾರ ಪುತ್ತೂರು ಪೇಟೆಯ ಹೊರ ವಲಯದ ನೆಹರೂನಗರ ಎಂಬಲ್ಲಿ ಸಂಭವಿಸಿದೆ.  ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ, ಪುತ್ತೂರಿನ ಪ್ರಧಾನ ಅಂಚೆ ಕಚೇರಿ ಬಳಿಯ ನಿವಾಸಿ ಶರೂನ್ ಫೆರ್ನಾಂಡಿಸ್ ಗಾಯಗೊಂಡವರು.  ವಿವೇಕಾನಂದ ಕಾಲೇಜಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸ್ಕೂಟರ್ ಮತ್ತು ನೆಹರೂ ನಗರದಲ್ಲಿ ಮುಖ್ಯ ರಸ್ತೆ ಕಡೆಗೆ ತಿರುಗುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.

ಹೆಂಚು ಕಳವು: ಆರೋಪಿ ಪೊಲೀಸ್ ವಶಕ್ಕೆ
ಪುತ್ತೂರು:
ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಮನೆಯೊಂದರ ಬಳಿ ಇರಿಸಲಾಗಿದ್ದ ಹೆಂಚುಗಳನ್ನು ಕಳವುಗೈದು ಮಾರಾಟ ಮಾಡಲು ಯತ್ನಿಸಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದ ಆರೋಪಿಯನ್ನು ಪೊಲೀಸರು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ ಪರಿಣಾಮ ನಿಡ್ಪಳ್ಳಿಯ ತರವಾಡು ಮನೆಯಿಂದ ಕಳವಾಗಿದ್ದ ದೈವಗಳ ಮುಖವಾಡಗಳು ಪತ್ತೆಯಾಗಿವೆ.  ಬೆಟ್ಟಂಪಾಡಿಯ ಚಂದ್ರಹಾಸ ರೈ ಎಂಬವರ ಮನೆಯಿಂದ ಹಂಚು ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿ ಕಾಸರಗೋಡಿನ ದೇಲಂಪಾಡಿ ಗ್ರಾಮದ ಅಡೂರು ನಿವಾಸಿ ಹರೀಶ್ ಎಂಬಾತನನ್ನು ಸ್ಥಳೀಯರೇ ಹಿಡಿದು ಸಂಪ್ಯ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಆರೋಪಿಯನ್ನು ನ್ಯಾಯಾಲಕ್ಕೆ ಹಾಜರುಪಡಿಸಿದ ವೇಳೆ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿ ಹರೀಶ್ ಇನ್ನಷ್ಟು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದ್ದರು. ಆ ವೇಳೆ ನಿಡ್ಪಳ್ಳಿಯ ಕಳವು ಪ್ರಕರಣ ಬೆಳಕಿಗೆ ಬಂದಿದೆ.  ಈ ಹಿಂದೆ  ನಿಡ್ಪಳ್ಳಿ ಗ್ರಾಮದ ತರವಾಡು ಮನೆಯಿಂದ ದೈವಗಳ ಎರಡು ಮುಖವಾಡಗಳು ಕಳವಾಗಿತ್ತು. ಆರೋಪಿ ಹರೀಶ್ ನಿಡ್ಪಳ್ಳಿಯಿಂದ ದೈವಗಳ ಮುಖವಾಡವನ್ನು ತಾನೇ ಕಳವು ಮಾಡಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದು, ಅದನ್ನು ಕಾಸರಗೋಡಿನ ಗುಜರಿ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ವಿಚಾರಣೆಯ ವೇಳೆ ತಿಳಿಸಿದ್ದ. ಆತ ನೀಡಿದ ಮಾಹಿತಿಯಂತೆ ಸಂಪ್ಯ ಪೊಲೀಸರು ಅಲ್ಲಿಗೆ ತೆರಳಿ ಮುಖವಾಡಗಳನ್ನು ಗುಜರಿ ಅಂಗಡಿಯಿಂದ ವಶಪಡಿಸಿಕೊಂಡಿದ್ದಾರೆ ತಿಳಿದು ಬಂದಿದೆ.

ಲಾರಿ ಡಿಕ್ಕಿ; ಬೈಕ್ ಸವಾರ ಪಾರು
ವಿಟ್ಲ:
ಕುದ್ದುಪದವಿನ ಪೆರುವಾಯಿಯ ರಸ್ತೆಯ ತಿರುವಿನಲ್ಲಿ ಬೈಕ್ ಲಾರಿಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಮಧ್ಯಾಹ್ನದ ವೇಳೆ ನಡೆದಿದೆ. ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕುದ್ದುಪದವಿನಿಂದ ಪೆರುವಾಯಿಗೆ ಸಾಗುವ ರಸ್ತೆಯಲ್ಲಿ ಆದಾಳ ಬಿಲ್ಲಂಪದವು ಮಧ್ಯೆ ಇರುವ ತಿರುವಿನಲ್ಲಿ ಪೆರುವಾಯಿ ಕಡೆಯಿಂದ ಬರುತ್ತಿದ್ದ ಪುಣಚ ಕಡೆಯ ಟಿಪ್ಪರ್ ಲಾರಿಗೆ ಕುದ್ದುಪದವು ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಅಡ್ಯನಡ್ಕ ನಿವಾಸಿ ಮೋನು ಎಂದು ತಿಳಿದು ಬಂದಿದ್ದು, ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ. ಇನ್ನೊಂದು ಘಟನೆಯಲ್ಲಿ ಕುದ್ದುಪದವು ಸಮೀಪದ ಮರಕ್ಕಿಣಿ ಪಳ್ಳಿಯ ಮುಂಭಾಗದಲ್ಲಿ ಕಾಸರಗೋಡು ಮೂಲದ ಬೈಕ್‌ನ ಟೈಯರ್ ಒಡೆದ ಪರಿಣಾಮ ಸವಾರರಿಬ್ಬರು ಬೈಕಿನಿಂದ ಎಸೆಯಲ್ಪಟ್ಟ ಘಟನೆಯೂ ಮಂಗಳವಾರ ನಡೆದಿದೆ. ಸವಾರರು ಅಪಾಯದಿಂದ ಪಾರಾಗಿದ್ದಾರೆ.

ಬೈಕ್ ಸವಾರ ಯುವಕಗೆ ತಂಡ ಹಲ್ಲೆ, ಬೆದರಿಕೆ
ಮಂಗಳೂರು:
ರಾಣಿಪುರದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಮುಗಿಸಿ ಬೈಕ್ ನಲ್ಲಿ ಬರುತ್ತಿದ್ದ ಯುವಕನ ಮೇಲೆ ತೊಕ್ಕೊಟ್ಟು ಮಯಾ ಬಜಾರ್ ಬಳಿ ಯುವಕರ ಗುಂಪು ಹಲ್ಲೆ ನಡೆಸಿದೆ.  ನಿತ್ಯಾಧರ ನಗರ ನಿವಾಸಿ ನೆಲ್ಸನ್ (21) ಪೆಟ್ಟು ತಿಂದವರು.  ನೆಲ್ಸನ್ ಮೊಬೈಲ್‌ಗೆ ಸೋಮವಾರ ರಾತ್ರಿ ಕರೆ ಮಾಡಿದ ದುಷ್ಕರ್ಮಿಗಳು ಅಶ್ಲೀಲವಾಗಿ ನಿಂದಿಸಿ, ತಾಖತ್ ಇದ್ದರೆ ತೊಕ್ಕೊಟ್ಟಿಗೆ ಬರುವಂತೆ ಹೇಳಿದ್ದಾರೆ. ಅದರಂತೆ ಬೈಕ್‌ನಲ್ಲಿ ರಾಖಿ ಜತೆ ತೊಕ್ಕೊಟ್ಟಿಗೆ ಬಂದ ನೆಲ್ಸನ್‌ಗೆ ರಾಬರ್ಟ್, ಸಂದೇಶ, ವಿನೋದ್ ಕುಂಪಲ, ಪ್ರಶಾಂತ್, ಪ್ರವೀಣ್, ನವೀನ್ ಹಲ್ಲೆ ನಡೆಸಿದರು.

ಚೆಕ್ ಕದ್ದು ಹಣ ಪಡೆದ ಮಹಿಳೆ ವಿರುದ್ಧ ದೂರು
ಮಂಗಳೂರು:
ಚೆಕ್ ಕಳವು ಮಾಡಿ ನಕಲಿ ಸಹಿ ಮಾಡಿ ಕಾರ್ಪೊರೇಶನ್ ಬ್ಯಾಂಕ್‌ನಿಂದ ಹಣ ನಗದೀಕರಿಸಿದ ನತಶಾ ಟೆಲ್ಲಿಸ್ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕಣ ದಾಖಲಾಗಿದೆ.  ನತಶಾ ಟೆಲ್ಲಿಸ್ ಎಂಬಾಕೆ ಮರ್ಥಾ ಡಿಸೋಜ ಎಂಬ ಖಾತೆದಾರ ಚೆಕ್ ಕಳವು ಮಾಡಿ, ಸಹಿ ನಕಲು ಮಾಡಿ ಸುಝೀರ್ ಡಿಸೋಜ ಹೆಸರಲ್ಲಿ 6,500 ಹಣ ನಗದೀಕರಿಸಿದ್ದರು. ಈ ಬಗ್ಗೆ ಮರ್ಥಾ ಡಿಸೋಜ ರಾಮಭವನ ಕಾರ್ಪೊರೇಶನ್ ಬ್ಯಾಂಕ್‌ಗೆ ದೂರು ನೀಡಿದ್ದು, ಮುಖ್ಯಪ್ರಬಂಧಕ ಎಚ್.ಎಂ.ಶಾಸ್ತ್ರಿ ಉರ್ವ ಪೊಲೀಸರಿಗೆ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಉರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನೆಯ ಬಿಗ ಮುರಿದು ನಗ, ನಗದು ಕಳವು
ಕಾರ್ಕಳ:
ತಾಲೂಕಿನ ಕುಂಟಲ್ಪಾಡಿ ನಿವಾಸಿ, ಜೆಡಿಎಸ್ ಮುಖಂಡ ಮಹಮ್ಮದ್ ಅಕ್ರಮ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಸುಮಾರು ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮಾ.13ರಂದು ಅವರು ಮನೆಗೆ ಬೀಗ ಹಾಕಿ ದುಬೈಗೆ ಹೋಗಿದ್ದು, ಮಂಗಳವಾರ ಬೆಳಗ್ಗೆ ಅತ್ತೆ ಮನೆಗೆ ಬಂದಾಗ ಮನೆ ಬೀಗವನ್ನು ಮುರಿದು ಚಿನ್ನಾಭರಣ ಹಾಗೂ ನಗದು ದೋಚಿರುವುದು ಬೆಳಕಿಗೆ ಬಂದಿದೆ.

ಬೆಂಕಿ ಆಕಸ್ಮಿಕ: ಮಹಿಳೆ ಸಾವು
ಹಿರಿಯಡ್ಕ:
ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆ ಮೃತಪಟ್ಟ ಘಟನೆ ಕುಕ್ಕೇಹಳ್ಳಿಯಲ್ಲಿ ನಡೆದಿದೆ. ಸುಶೀಲಾ ನಾಯ್ಕ (63) ಮೃತರು. ವಾರದ ಹಿಂದೆ ಮನೆಯಲ್ಲಿ ಸಂಜೆ ವಿದ್ಯುತ್ ಇಲ್ಲದಿದ್ದಾಗ ಸುಶೀಲಾ ಅವರು ಚಿಮಣಿ ದೀಪ ಹೊತ್ತಿಸಿ ಮಲಗಿದ್ದರು. ಆಗ ಆಕಸ್ಮಿಕವಾಗಿ ಪ್ಲಾಸ್ಟಿಕ್ ಡಬ್ಬದ ಮೇಲಿಟ್ಟ ಚಿಮಣಿ ದೀಪವು ಉರುಳಿ ಬಿದ್ದು ಅವರ ಸೀರೆಗೆ ಬೆಂಕಿ ತಗುಲಿ, ಕುತ್ತಿಗೆಯಿಂದ ಎರಡೂ ಕಾಲಿನ ಮೊಣಗಂಟಿನವರೆಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ ಸುಶೀಲ ಮೃತಪಟ್ಟಿದ್ದಾರೆ ಎಂಬುದಾಗಿ ಕೃಷ್ಣ ನಾಯ್ಕ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಟಿಪ್ಪರ್ ಡಿಕ್ಕಿ: ವ್ಯಕ್ತಿ ಸಾವು
ಪಡುಬಿದ್ರಿ:
ನಂದಿಕೂರು ಗ್ರಾಮದ ಅಡ್ವೆ ಎಂಬಲ್ಲಿರುವ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ ಸೈಟ್ ಬಳಿ ಟಿಪ್ಪರ್ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಶರೀಫ್ ಕನ್‌ಸ್ಟ್ರಕ್ಷನ್ ಕಂಪೆನಿಯ ಸೂಪರ್‌ವೈಸರ್ ಆಗಿರುವ ಮೊಯಿದ್ದೀನ್ (60) ಮೃತರು. ಅವರು ಮಂಗಳವಾರ ಬೆಳಗ್ಗೆ ಹೊಸದಾಗಿ ನಿರ್ಮಾಣ ಮಾಡಿದ ಟಾರು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿರುವಾಗ ಟಿಪ್ಪರ್ ಚಾಲಕ ಕೃಷ್ಣಪ್ಪ ಪೂಜಾರಿಯು ಯಾವುದೇ ಸೂಚನೆ ನೀಡದೇ ವಾಹನವನ್ನು ಹಿಮ್ಮಖವಾಗಿ ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೊಯಿದ್ದೀನ್ ಅವರ ಮೇಲೆ ಟಿಪ್ಪರ್ ಚಕ್ರ ಹರಿದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಗಮನಿಸಿ ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂಬುದಾಗಿ ವಿಕ್ಟರ್ ರೆಬೆಲ್ಲೋ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಾರು ಡಿಕ್ಕಿ: ವ್ಯಕ್ತಿ ಮೃತ
ಕೋಟ:
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯೊಬ್ಬರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಕೋಳನಕಲ್ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ. ಸದಾಶಿವ ಶೆಟ್ಟಿ (59) ಮೃತರು. ಅವರು ಕಿಶೋರ್ ಶೆಟ್ಟಿ ಎಂಬವರೊಂದಿಗೆ ಸುಗೋಡಿಯಿಂದ ಬಿದ್ಕಲ್‌ಕಟ್ಟೆಯತ್ತ ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಕೋಳನಕಲ್ ಕ್ರಾಸ್ ಎಂಬಲ್ಲಿ ಗಾವಳಿ ಕಡೆಯಿಂದ ಬಂದ ಕಾರು ಸದಾಶಿವ ಶೆಟ್ಟಿ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಪರಿಣಾಮ ತೀವ್ರ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಿಶೋರ್ ಶೆಟ್ಟಿ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement