ಉತ್ತರ ಕನ್ನಡ ಮೀನುಗಾರರ ರಕ್ಷಣೆ
ಉಡುಪಿ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 7 ಮಂದಿ ಮೀನುಗಾರರನ್ನು ಉಡುಪಿಯ ಕರಾವಳಿ ಕಾವಲು ಪಡೆ ಪೊಲೀಸರು ರಕ್ಷಿಸಿದ್ದಾರೆ.
ರಕ್ಷಿಸಲ್ಪಟ್ಟ ಮೀನುಗಾರರು ಪ್ರಚೋತ ಕುಮಟೇಕರ (19), ಸುದೇಶ ಸದಾನಂದ ಜುವೇಕರ (40), ಸೂರಜ್ (24), ಶುಭಂ ಚಂದ್ರಕಾಂತ ಕಿರ್ಲೋಸ್ಕರ (21) ಪ್ರಶಾಂತ ಮಹಾದೇವ ಜುವೇಕರ (45), ನಿತ್ಯಾನಂದ ಮೋಹನ ಚಂಡೇಕರ (19), ಅರವಿಂದ ಪಂಡರಿನಾಥ ಟಕ್ಕರ(20). ಅವರು ಗಿಲ್ನೆಟ್,ಪಾತಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ದೇವಬಾಗ ಗ್ರಾಮದಿಂದ 10 ನಾಟಿಕಲ್ ಮೈಲಿ ದೂರದಲ್ಲಿ ಅಂಜುದೀವ ದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ದೋಣಿಯ ಎಂಜಿನ್ ಕೆಟ್ಟು ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ತಕ್ಷಣ ಅವರು ಉಡುಪಿ ಮತ್ತು ಕಾರವಾರದ ಕರಾವಳಿ ಕಾವಲು ಪಡೆಯ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಎರಡೂ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿದ್ದು, ಬೋಟನ್ನು ದೇವಭಾಗ ದಡಕ್ಕೆ ಎಳೆದು ತಂದಿದ್ದಾರೆ.