30 ಕಿ.ಮೀ. ವ್ಯಾಪ್ತಿಯಲ್ಲಿ ಒಂದೇ ದಿನ ಆರು ಸಾವು
ಮಂಗಳೂರು: ನಗರದಲ್ಲಿ ಟ್ಯಾಂಕರ್ ಮತ್ತು ಖಾಸಗಿ ಬಸ್ಗಳು ಹಂತಕರಾಗಿ ಪರಿವರ್ತನೆಯಾಗಿದೆ. ನಗರದಿಂದ 30 ಕಿ.ಮೀ. ವ್ಯಾಪ್ತಿಯಲ್ಲಿ ಗುರುವಾರ ಒಂದೇ ದಿನ ಮೂರು ಅಪಘಾತಗಳಲ್ಲಿ 6 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಬಸ್ ಬೇ ಇದ್ದರೂ ರಸ್ತೆ ಮಧ್ಯದಲ್ಲಿಯೇ ಬಸ್ಗಳನ್ನು ನಿಲ್ಲಿಸುತ್ತಾರೆ. ದ್ವಿಚಕ್ರ ವಾಹನಗಳೆಂದರೆ ಇವರ ಪಾಲಿಗೆ ಇರುವೆಗಳಿಗೆ ಸಮ. ಕರ್ಕಶವಾಗಿ ಹಾರ್ನ್ ಹಾಕುತ್ತ, ನಗರ ಮಧ್ಯದಲ್ಲಿ ಯಮದೂತರಂತೆ ಆಗಮಿಸುವ ಬಸ್, ಟ್ಯಾಂಕರ್ಗಳು ನೇರೆ ಮೇಲಿನ ಲೋಕಕ್ಕೆ ಟಿಕೆಟ್ ನೀಡುತ್ತಿದ್ದಾರೆ.
ಸಹೋದರರ ದಾರುಣ ಸಾವು: ನಗರ ಹೊರವಲಯದ ಎಕ್ಕೂರಿನಲ್ಲಿ ಗುರುವಾರ ಬಸ್ ಡಿಕ್ಕಿ ಹೊಡೆದು ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರು ದಾರುಣವಾಗಿ ಮೃತಪಟ್ಟಿದ್ದಾರೆ.
ತೊಕ್ಕೊಟ್ಟು ನಿವಾಸಿ ಉಮ್ಮರ್ ರಶೀದ್ (22) ಮತ್ತು ಮಹಮ್ಮದ್ ನೌಶಾದ್ (25) ಮೃತಪಟ್ಟವರು. ನೌಶಾದ್ ಬಂದರ್ನಲ್ಲಿ ಕಾರ್ಮಿಕರಾಗಿದ್ದರೆ, ರಶೀದ್ ಮೆಡಿಕಲ್ನಲ್ಲಿ ಉದ್ಯೋಗಿಯಾಗಿದ್ದರು. ಶಾರದಾ ಬಸ್ ತೊಕ್ಕೊಟ್ಟಿನಿಂದ ಮಂಗಳೂರಿನತ್ತ ಬರುತ್ತಿತ್ತು. ಇಬ್ಬರು ಬೈಕ್ನಲ್ಲಿ ಮಂಗಳೂರಿನತ್ತ ಆಗಮಿಸುತ್ತಿದ್ದರು. ಎಕ್ಕೂರು ಬಳಿ ಬಸ್ ಬೈಕ್ಗೆ ಡಿಕ್ಕಿ ಹೊಡೆಯಿತು.
ರಸ್ತೆ ಮಧ್ಯೆ ಇಬ್ಬರು ಯುವಕರ ಮೃತದೇಹ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುವುದು ಎದೆ ಬಿರಿಯುವಂತಿತ್ತು. ಟ್ಯಾಂಕರ್ ಮತ್ತು ಖಾಸಗಿ ಬಸ್ಗಳು ಮಂಗಳೂರಿನಲ್ಲಿ ಇದೀಗ ಅತಿ ಹೆಚ್ಚು ಬಲಿಗಳನ್ನು ಪಡೆಯುತ್ತಿವೆ.
ಟ್ಯಾಂಕರ್ ಡಿಕ್ಕಿ: ಮಾಜಿ ಯೋಧ ಬಲಿ: ಇನ್ನೊಂದು ಅಪಘಾತದಲ್ಲಿ, ಉಳ್ಳಾಲ ಸೇತುವೆ ಬಳಿ ಟ್ಯಾಂಕರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ತೊಕ್ಕೊಟ್ಟು ಕೆರೆ ಬೈಲು ಕಲ್ಲಾಪು ನಿವಾಸಿ, ಮಾಜಿ ಯೋಧ ಕರ್ನೇಲಿಯೋ ಡಿಸೋಜ (55)ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ ನೋಂದಣಿಯ ಟ್ಯಾಂಕರ್ ಉಳ್ಳಾಲದಿಂದ ಮಂಗಳೂರಿನತ್ತ ಧಾವಿಸುತ್ತಿದ್ದು ಎಡಬದಿಯಲ್ಲಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಸೇತುವೆ ಮಧ್ಯೆ ಅಪಘಾತ ನಡೆದ ಹಿನ್ನೆಲೆಯಲ್ಲಿ ಸ್ವಲ್ಪ ಹೊತ್ತು ಸಂಚಾರಕ್ಕೆ ಅಡಚಣೆಯಾಯಿತು. ಸ್ಥಳೀಯರ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಕೆರೆಬೈಲ್ನಲ್ಲಿ ವೆಲ್ಡಿಂಗ್ ಶಾಪ್ ನಡೆಸುತ್ತಿದ್ದ ಕರ್ನೇಲಿಯೋ, ಮಂಗಳೂರಿಗೆ ತೆರಳುತ್ತಿದ್ದರು. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗರ್ಭಿಣಿ ಸಹಿತ ಮೂವರ ಸಾವು: ಮಂಗಳೂರು ಗಡಿ ಪ್ರದೇಶದ ಕೇರಳ ಕುಂಬ್ಳೆಯಲ್ಲಿ ಗುರುವಾರ ಬೆಳಗ್ಗೆ 9.30ಕ್ಕೆ ಹೆರಿಗೆಗೆಂದು ರಿಕ್ಷಾದಲ್ಲಿ ತೆರಳುತ್ತಿದ್ದ ಗರ್ಭಿಣಿ ಸಹಿತ ಮೂವರು ಬಸ್ ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟಿದ್ದಾರೆ. ಪೈವಳಿಕೆ ಕಾಯರಕಟ್ಟೆಯ ಬಬಿತಾ (25), ತಾಯಿ ಜಾನಕಿ (48), ಪತಿ ರಾಮ (35) ಮೃತಪಟ್ಟವರು. ರಿಕ್ಷಾ ಚಾಲಕ ಹ್ಯಾರಿಸ್ (27) ಚಿಂತಾಜನಕ ಸ್ಥಿತಿಯಲ್ಲಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.