ಆಸ್ತಿ ತೆರಿಗೆಯಲ್ಲಿ ವಿನಾಯಿತಿ
ಮಂಗಳೂರು: ರಾಜ್ಯದ ಕಾಯಂ ನಿವಾಸಿ ಮಾಜಿ ಸೈನಿಕರು ಹಾಗೂ ಅವಲಂಬಿತರಿಗೆ ಅವರ ಸ್ವಂತ ಹೆಸರಿನಲ್ಲಿ ಮನೆ, ಆಸ್ತಿಯ ತೆರಿಗೆಯಲ್ಲಿ ಸರ್ಕಾರ ಶೇ. 50 ವಿನಾಯಿತಿ ನೀಡಿದೆ. ವಿನಾಯಿತಿಗೆ ಪ್ರಮಾಣ ಪತ್ರ ಪಡೆಯಲು ಮಿಲಿಟರಿ ಸೇವಾ ಪುಸ್ತಕ, ಮಾಜಿ ಸೈನಿಕರ ಗುರುತಿನ ಚೀಟಿ, ಕಾಯಂ ನಿವಾಸಿ ಪ್ರಮಾಣ ಪತ್ರ, ಮನೆ ಜಮೀನಿನ ಖಾತಾ ಪ್ರಮಾಣ ಪತ್ರದ ದಾಖಲಾತಿಯೊಂದಿಗೆ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉರ್ವಸ್ಟೋರ್ ಸಲ್ಲಿಸಬಹುದು.
ಬೀಡಿ ಮಜೂರಿ ಹೆಚ್ಚಳ
ಪುತ್ತೂರು: ಏ.1ರಿಂದ ಬೀಡಿ ಮಜೂರಿ ಹೆಚ್ಚಳವಾಗಿದ್ದು, ಕಾರ್ಮಿಕರ ಪಾಲಿಗೆ ಸಂತೋಷ ನೀಡಿದೆ. ಪ್ರತಿ ಸಾವಿರ ಬೀಡಿಗೆ ಈಗಿರುವ ದರದಿಂದ ರು. 13.65 ಹೆಚ್ಚುವರಿಯಾಗಿದೆ ಎಂದು ತಿಳಿದು ಬಂದಿದೆ.
ಪ್ರತಿ ಸಾವಿರ ಬೀಡಿಗೆ ಈ ಹಿಂದೆ 116.20 ಪೈಸೆ ಮಜೂರಿಯಿತ್ತು. ಇದೀಗ ಪ್ರತಿ ಸಾವಿರ ಬೀಡಿಗೆ 13.65 ಪೈಸೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಸಾವಿರ ಬೀಡಿಗೆ ರು. 139.73 ಪೈಸೆ ಲಭ್ಯವಾಗಲಿದೆ. ಈ ಪೈಕಿ ರು. 13 ಭವಿಷ್ಯ ನಿಧಿಗೆ ಕಡಿತಗೊಂಡು ಕಾರ್ಮಿಕರ ಕೈಗೆ ರು. 113.73 ಸಿಗಲಿದೆ. ಬೀಡಿ ಪಾಸ್ ಪುಸ್ತಕ ಹೊಂದಿರುವ ಕಾರ್ಮಿಕರಿಗೆ ಮಾತ್ರ ಈ ದರ ನೀಡಲಾಗುವುದು ಎನ್ನಲಾಗಿದೆ.
ಪಾಸ್ ಪುಸ್ತಕ ಹೊಂದಿಲ್ಲದ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಪ್ರತಿ ಸಾವಿರ ಬೀಡಿಗೆ ರು. 140ರಿಂದ 150 ಸಿಗಲಿದೆ ಎಂದು ಬೀಡಿ ಕಾರ್ಮಿಕ ಸಂಘಟನೆಯ ಮೂಲಗಳಿಂದ ತಿಳಿದುಬಂದಿದೆ.
ಇಂದಿನಿಂದ ಪ್ರಬಂಧ ಮಂಡನೆ
ಮಂಗಳೂರು: ಶ್ರೀದೇವಿ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಎಂಬಿಎ ವಿಭಾಗ 2 ದಿನಗಳ ರಾಷ್ಟ್ರೀಯ ಪ್ರಬಂಧ ಮಂಡನೆ ಕಾರ್ಯಕ್ರಮ ಎ.5 ಮತ್ತು 6ರಂದು ಕಾಲೇಜಿನ ಪಿಜಿ ಬ್ಲಾಕ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ.ದಿಲೀಪ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 5ರಂದು ಬೆಳಗ್ಗೆ 10ಕ್ಕೆ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ನಿರ್ದೇಶಕ ರೆ.ಫಾ.ಜೋಸೆಫ್ ಜೆ.ಲೋಬೋ ಉದ್ಘಾಟಿಸಲಿದ್ದು, ಕಾಲೇಜು ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸುವರು. 6ರಂದು ಸಂಜೆ 4.30ಕ್ಕೆ ಸಮಾರೋಪದಲ್ಲಿ ಡಾ.ನಾರಾಯಣ ಕಾಯರ್‌ಕಟ್ಟೆ ಪಾಲ್ಗೊಳ್ಳುವರು. ಕಾರ್ಯಾಗಾರದಲ್ಲಿ 250 ಮಂದಿ ವಿದ್ಯಾರ್ಥಿಗಳು ಭಾಗವಹಿಸುವರು ಎಂದರು.
ನಾಳೆ ವಿದ್ಯುತ್ ವ್ಯತ್ಯಯ
ಮಂಗಳೂರು: ಕೆಪಿಟಿಸಿಎಲ್ ವತಿಯಿಂದ ಕೇಮಾರ್ 220 ಕೆ.ವಿ. ಸ್ವೀಕರಣಾ ಕೇಂದ್ರದಲ್ಲಿ ವಿವಿಧ ಕಾಮಗಾರಿ ಪ್ರಯುಕ್ತ 6ರಂದು ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಮೂಡುಬಿದಿರೆ ಮತ್ತು ಗುರುಪುರ ಉಪಕೇಂದ್ರದಿಂದ ವಿದ್ಯುತ್ ವಿತರಣೆಯಾಗುವ ಪ್ರದೇಶಗಳಿಗೆ ಅನಿವಾರ್ಯತೆ ಇದ್ದಲ್ಲಿ ಸರದಿಯಂತೆ ವಿದ್ಯುತ್ ನಿಲುಗಡೆ ಮಾಡಲಾಗುವುದು.
ನಿಲುಗಡೆ ಪ್ರದೇಶಗಳು: ಮೂಡುಬಿದಿರೆ ಉಪಕೇಂದ್ರದಿಂದ ಹೊರಡುವ ಶಿರ್ತಾಡಿ, ಕಡಂದಲೆ, ನಿಡ್ಡೋಡಿ, ಬೆಳುವಾಯಿ, ಮೂಡುಬಿದಿರೆ, ಕೋಟೆಬಾಗಿಲು, ತೋಡಾರು ಫೀಡರ್‌ಗಳಿಂದ ಸರಬರಾಜಾಗುವ ಎಲ್ಲಾ ಪ್ರದೇಶಗಳು ಮತ್ತು ಗುರುಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಗುರುಪುರ, ಕೈಕಂಬ, ಕುಪ್ಪೆಪದವು, ಅದ್ಯಪಾಡಿ, ಅಡ್ಡೂರು ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಪ್ರದೇಶಗಳು.