ಗುರುವಿನ ಸಾರಥ್ಯದಲ್ಲಿ ವಿದ್ಯಾರ್ಥಿ ಗೆಲವು ಸಾಧ್ಯ: ಅರ್ಜುನ್ ದೇವಯ್ಯ
ಮಂಗಳೂರು: 'ಸಾಧನೆಯೆಂಬ ರಥಕ್ಕೆ ಗುರುವು ಸಾರಥಿಯಾದಾಗ ವಿದ್ಯಾರ್ಥಿಯ ಗೆಲವು ಸಾಧ್ಯ' ಎಂದು ಅಂತಾರಾಷ್ಟ್ರೀಯ ಅಥ್ಲೇಟ್ ಅರ್ಜುನ್ ದೇವಯ್ಯ ತೆಥಮಡು ಹೇಳಿದ್ದಾರೆ.
ಗುರುವಾರ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ್ ವಿಭಾಗ ಮಟ್ಟದ ಸಾಂಸ್ಕೃತಿಕ ಉತ್ಸವ 'ಸಂಭ್ರಮ' ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಯ ಸಾಧನೆಯ ಗೆಲವಿನಲ್ಲಿ ಗುರುವಿನ ಪಾತ್ರ ಹಿರಿದು. ವಿದ್ಯಾರ್ಥಿಯಲ್ಲಿನ ಪ್ರತಿಭೆಯನ್ನು ಹೊರಹೊಮ್ಮಲು ಗುರುಗಳ ಮಾರ್ಗದರ್ಶನ ಅಗತ್ಯ ಎಂದರು.
ಹಣ ಎಲ್ಲವೂ ಅಲ್ಲ: ಶಿಕ್ಷಣ ಬದುಕಲು ಕಲಿಸಿದರೆ ಸಾಲದು, ಸಮಾಜದಲ್ಲಿ ಬದುಕು ಸಾಗಿಸುವ ಬಗೆಯನ್ನು ತಿಳಿಸಿಕೊಡಬೇಕು. ಜೀವನದಲ್ಲಿ ಹಣ ಮುಖ್ಯವೇ ಹೊರತು ಹಣವೇ ಎಲ್ಲವೂ ಅಲ್ಲ. ಸಾರ್ವಜನಿಕ ಮತ್ತು ವೈಯುಕ್ತಿಕ ಬದುಕಿನ ಮಜಲುಗಳು ವಿಭಿನ್ನವಾಗಿರುತ್ತದೆ ಎಂದರು.
ಮೊಬೈಲ್, ಕಂಪ್ಯೂಟರ್, ಮೆಸೇಜ್ ಇವುಗಳಲ್ಲಿ ಕಾಲಕಳೆಯುವ ವಿದ್ಯಾರ್ಥಿಗಳು ತಮ್ಮ ನಿಲುವು ಬದಲಾಯಿಸಿ ಇತರ ಚಟುವಟಿಕೆಯಲ್ಲಿ ತೊಡಗಬೇಕು. ಸೋಂಬೇರಿತನವನ್ನು ಹೊಡೆದೊಡಿಸಿ ತಮ್ಮಲ್ಲಿರುವ ಪ್ರತಿಭಾ ಶಕ್ತಿ ಹೊರಹೊಮ್ಮಿಸಿ. ಎಷ್ಟೇ ವಯಸ್ಸಾದರೂ ಮಗುವಿನ ಮನಸ್ಸು ಕಳೆದುಕೊಳ್ಳಬಾರದು. ಇದರಿಂದ ಜೀವನವಿಡೀ ಸಂತೋಷ ಕಳೆದುಕೊಂಡಂತೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ, ಶಿಕ್ಷಣದೊಂದಿಗೆ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಬೆಳವಣಿಗೆ ಹೊಂದಿದರೆ ಪರಿಪೂರ್ಣತೆ ಸಾಧ್ಯ. ಉತ್ತಮ ವಿದ್ಯಾರ್ಥಿಗಳಿಂದ ಸಮಾಜದಲ್ಲಿ ಉತ್ತಮ ಪ್ರಜೆಗಳು ಹುಟ್ಟಿಕೊಳ್ಳುತ್ತಾರೆ ಎಂದರು.
ಕುಲಸಚಿವ ಪ್ರೊ.ಪಿ.ಎಸ್. ಯಡಪಡಿತ್ತಾಯ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ.ಎ.ಎಂ.ಎ. ಖಾದರ್, ವಿದ್ಯಾರ್ಥಿ ಸಂಘದ ಪ್ರಶಾಂತ್ ಕುಮಾರ್, ಪ್ರವೀಣ್ ಮತ್ತಿತರರು ಇದ್ದರು.