ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಸರ್ಕಾರಿ ಶಾಲೆ ಬಳಿ ಖಾಸಗಿ ಶಾಲೆಗೆ ಅನುಮತಿ ಇಲ್ಲ'

Vishwanath S
Updated On : 5 Apr 2013, 11:04 am

ಮಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಸರ್ಕಾರಿ ಶಾಲೆಗಳಿರುವ ಪ್ರದೇಶದಲ್ಲಿ ಖಾಸಗಿ ಶಾಲೆ ಆರಂಭಿಸಲು ಅನುಮತಿ ಇಲ್ಲ ಎಂದು ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಸಂಯೋಜಕ ಶಿವಪ್ರಕಾಶ್ ಹೇಳಿದ್ದಾರೆ.
ನಗರದ ಪುರಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ ವಲಯ ಸಮಿತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ 'ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವಲ್ಲಿ ನಮ್ಮ ಪಾತ್ರ' ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಜಿಲ್ಲೆಯ 35 ಶಾಲೆಗಳಲ್ಲಿ 6ನೇ ತರಗತಿಯಿಂದ ಆಂಗ್ಲ ಭಾಷೆಯಲ್ಲಿ ಬೋಧನೆ ಪ್ರಾರಂಭಿಸಲಾಗಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಕಾರಣಕ್ಕೆ 5 ಶಾಲೆಗಳು ಮುಚ್ಚಿವೆ. ಇದನ್ನೇ ಪ್ರಚಾರ ಮಾಡುವುದು ಸರಿಯಲ್ಲ ಎಂದರು.
ಸರ್ಕಾರಿ ಶಾಲೆ ಇರುವಲ್ಲಿ ಖಾಸಗಿ ಶಾಲೆ ತೆರೆಯಲು ಸರ್ಕಾರಿ ಶಾಲೆಗಳ ಮುಖ್ಯಗುರುಗಳು ನಿರಕ್ಷೇಪಣಾ ಪತ್ರ ನೀಡುತ್ತಾರೆ. ಇದು ಸರಿಯಲ್ಲ. ಖಾಸಗಿ ಶಾಲೆಗಳು ಲಾಬಿ ಮಾಡಿ ನಿರಕ್ಷೇಪಣಾ ಪತ್ರ ಪಡೆಯುವುದರಿಂದ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದರು. ಜಿಲ್ಲೆಯ 932 ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳು ಇವೆ. ಇಲ್ಲಿಗೆ ಮಕ್ಕಳನ್ನು ಆಕರ್ಷಿಸಲು ಶಾಲೆಯ ಬಾಹ್ಯಾಕರ್ಷಣೆ ಹೆಚ್ಚಿಸಬೇಕು, ಶಿಕ್ಷಕರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು ಎಂದರು.
ಸಂಘದ ದಕ್ಷಿಣ ವಲಯ ಅಧ್ಯಕ್ಷ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಬಲ್ಮಠ ಶಿಕ್ಷಕಿಯರ ಸಂಸ್ಥೆ ಪ್ರಾಂಶುಪಾಲೆ ರಾಜಲಕ್ಷ್ಮೀ ಹಾಗೂ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ಸಮದ್‌ರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement