ಕೆರೆಯಲ್ಲಿ ಮುಳುಗಿ ಮೂವರ ಸಾವು
ರಾಯಚೂರು: ಕೆರೆಯೊಂದರಲ್ಲಿ ಬಟ್ಟೆ ತೊಳೆಯಲು ತೆರಳಿದ ತಾಯಿ ಹಾಗೂ ಇಬ್ಬರು ಮಕ್ಕಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಮಾನವಿ ಪಟ್ಟಣದ ಹೊರವಲಯದ ಚೀಕಲಪರ್ವಿ ರಸ್ತೆಯ ಗುಡ್ಡದ ಪಕ್ಕದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ. ಮಾನವಿ ಪಟ್ಟಣದ ಜನತಾ ಕಾಲೋನಿಯ ದುರುಗಮ್ಮ (28) ಮತ್ತು ಆಕೆಯ ಮಕ್ಕಳಾದ ಯಂಕಮ್ಮ (9), ಲಿಂಗಪ್ಪ (6) ಮೃತಪಟ್ಟವರು. ತಾಯಿ ಬಟ್ಟೆ ತೊಳೆಯುವಾಗ ಕಡಿಮೆ ನೀರಿರುವಲ್ಲಿ ಮಕ್ಕಳು ಸ್ನಾನ ಮಾಡುತ್ತಿದ್ದರು. ನಂತರ ಆಳವಿರುವೆಡೆ ಹೋಗಿ ಮುಳುಗಿದ್ದಾರೆ. ಇದನ್ನು ಕಂಡು ದುರುಗಮ್ಮ ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದು, ಮೂವರು ನೀರಿನ ಸುಳಿಗೆ ಸಿಲುಕೆ ಕೊನೆಯುಸಿರೆಳೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಆಕಸ್ಮಿಕ: 70 ಲಕ್ಷದ ಹತ್ತಿ ಭಸ್ಮ
ಧಾರವಾಡ: ಇಲ್ಲಿಗೆ ಸಮೀಪದ ಬೇಲೂರು ಎಚ್ಪಿಸಿಎಲ್ ರೋಡ್ನ ರಾಜೇಶ್ ಕೊಟೆನ್ ಜಿನ್ನಿಂಗ್ ಫ್ಯಾಕ್ಟರಿಗೆ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹತ್ತಿ ಸುಟ್ಟು ಭಸ್ಮವಾಗಿದೆ. ನಾರಾಯಣ ವಿ. ಕೊಪರ್ಡೆ ಎಂಬವರಿಗೆ ಸೇರಿದ್ದ ಈ ಕಂಪನಿಯು ಕಚ್ಚಾ ಹತ್ತಿಯನ್ನು ಜಿನ್ನಿಂಗ್ ಮಷಿನ್ಗೆ ಹಾಕಿ ಉತ್ತಮ ಗುಣಮಟ್ಟದ ಹತ್ತಿ ತಯಾರಿಸುವ ಸಂದರ್ಭದಲ್ಲಿ ಕಲ್ಲಿನ ಚೂರೊಂದು ಮಷಿನ್ನಲ್ಲಿ ಸಿಲುಕಿ ಕಿಡಿ ಹೊತ್ತಿಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ಸುಮಾರು 310 ಕ್ವಿಂಟಲ್ ಹತ್ತಿ, 800 ಕ್ವಿಂಟಲ್ ಕಚ್ಚಾ ಅರಳೆ ಸೇರಿದಂತೆ ಅಂದಾಜು ರು. 70 ಲಕ್ಷ ಹಾನಿಯಾಗಿದೆ.
ಸೌದಿಯಲ್ಲಿ 'ನಿತಕಾತ್' ಕಾನೂನು ಅನುಷ್ಠಾನ 2 ತಿಂಗಳು ಮುಂದಕ್ಕೆ
ಮಂಗಳೂರು: ಸೌದಿಯಲ್ಲಿ ಉದ್ಯೋಗದಲ್ಲಿರುವ ಭಾರತೀಯರ ಸಂಕಷ್ಟಕ್ಕೆ ಕಾರಣವಾದ ಸೌದಿ ಅರೇಬಿಯಾ ಸರ್ಕಾರ ಜಾರಿಗೆ ತರುವ ನಿತಕಾತ್(ಸ್ವದೇಶೀಕರಣ)ಕಾನುನಿನ ಕಟ್ಟುನಿಟ್ಟು ಅನುಷ್ಠಾನವನ್ನು 2 ತಿಂಗಳ ಕಾಲ ಅಲ್ಲಿನ ಸರ್ಕಾರ ಮುಂದೂಡಿದೆ. ರಿಯಾದ್ ರಾಜ್ಯಪಾಲ ಪ್ರಿನ್ಸ್ ಖಾಲೀದ್ ಇದನ್ನು ಪ್ರಕಟಿಸಿದ್ದು, ಸೌದಿಯಲ್ಲಿ ಉದ್ಯೋಗದಲ್ಲಿರುವ ಕರಾವಳಿ ಸೇರಿದಂತೆ ರಾಜ್ಯದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಸೌದಿಯಲ್ಲಿ ಉದ್ಯೋಗದಲ್ಲಿರುವವರು ಈ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ಭಾರತಕ್ಕೆ ವಾಪಾಸ್ ಬರಬೇಕು. ಹಿಂದಿರುಗಲು ವೀಸಾ ಸುಲಭವಾಗಿ ಸಿಗುವುದಿಲ್ಲ. ಹಾಗಾಗಿ ಈ ನಿಯಮವನ್ನು ಸಡಿಲಿಸುವಂತೆ ಉಡುಪಿ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತು ಶಾಸಕ ಯು.ಟಿ. ಖಾದರ್ ಸೌದಿಗೆ ತೆರಳಿ ಅಲ್ಲಿನ ರಾಯಭಾರಿಯನ್ನು ಆಗ್ರಹಿಸಿದ್ದರು. ಭಾರತೀಯರ ಹಿತಾಸಕ್ತಿ ಲಕ್ಷ್ಯದಲ್ಲಿರಿಸಿ ಜೂ.9ರ ವರೆಗೆ ಅನುಷ್ಠಾನವನ್ನು ಮುಂದಕ್ಕೆ ಹಾಕಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಶಂಕರನಾರಾಯಣ: ಇಲ್ಲಿನ ಎಡಮೊಗೆ ಗ್ರಾಮದ ಕುಂದ್ಲಮನೆ ಎಂಬಲ್ಲಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ಮೃತರು ಸೋಮನ್ (50), ಅವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಗುರುವಾರ ಮನೆಯ ಹತ್ತಿರದಲ್ಲಿರುವ ಗದ್ದೆಯಲ್ಲಿ ವಿಷವನ್ನು ಸರಾಯಿಗೆ ಸೇರಿಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಬಾವ ಜಗದೀಶ್ ಎಂಬವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.