'ಜೀತದಾಳುಗಳ ಬಿಡುಗಡೆ ಮಾಡಿಸಿ'
ನವದೆಹಲಿ: ಕರ್ನಾಟಕದ ಬೆಳಗಾವಿ ಜಿಲ್ಲೆಯ ನಾಗನೂರಿನಲ್ಲಿ ಜೀತದಾಳುಗಳಾಗಿ ದುಡಿಯುತ್ತಿರುವ 97 ಮಂದಿಯನ್ನು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಕೇಂದ್ರ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂಬ ಬಗ್ಗೆ ಇನ್ನು 3 ವಾರಗಳಲ್ಲಿ ವರದಿ ಸಲ್ಲಿಸುವಂತೆ ಅದು ಸೂಚನೆ ನೀಡಿದೆ. ಬೆಳಗಾವಿಯ ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಆಯೋಗ ಆದೇಶಿಸಿದೆ. ಆಯೋಗವೇ ಸ್ವಯಂ ಪ್ರಕರಣ ದಾಖಲಿಸಿಕೊಂಡು ಈ ಬಗ್ಗೆ ತನಿಖೆ ನಡೆಸುತ್ತಿದೆ.ಇದೇ ವೇಳೆ ಬಿಜೆಪಿಯ ವಿರೋಧದ ಹೊರತಾಗಿಯೂ ಕೇಂದ್ರ ಸರ್ಕಾರ ಕೇಂದ್ರ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರನ್ನಾಗಿ ಎನ್‌ಐಎ ಮುಖ್ಯಸ್ಥ ಶರದ್ ಸಿ ಸಿನ್ಹಾ ಅವರನ್ನು ನೇಮಕ ಮಾಡಿದೆ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ 6 ಮಂದಿ ಸಮಿತಿ ಇವರ ಹೆಸರನ್ನು ಅಂತಿಮಗೊಳಿಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದಾರೆ. ಈ ಸಮಿತಿಯಲ್ಲಿ ಪ್ರಧಾನಿ, ಲೋಕಸಭಾ ಸ್ಪೀಕರ್, ರಾಜ್ಯಸಭೆಯ ಉಪ ಸಭಾಪತಿ, ಗೃಹ ಸಚಿವ, ಲೋಕಸಭೆ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕರು ಇದ್ದಾರೆ. ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರು ಸಿನ್ಹಾ ಅವರ ನೇಮಕವನ್ನು ವಿರೋಧಿಸಿ ಪ್ರಧಾನಿಗೆ ಪ್ರತ್ಯೇಕವಾಗಿ ನೋಟ್ ಕೊಟ್ಟಿದ್ದರು.