ಪುತ್ತೂರು: ಮರ ಅಕ್ರಮ ಸಾಗಾಟ ಪತ್ತೆ
ಪುತ್ತೂರು: ಪುತ್ತೂರು ಉಪವಿಭಾಗದ ಅರಣ್ಯಾಧಿಕಾರಿಗಳು ಗುರುವಾರಕೆಯ್ಯೂರು ಗ್ರಾಮದ ಕೈಕಂಬ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಮರ ಸಾಗಾಟ ಪ್ರಕರಣ ಪತ್ತೆ ಮಾಡಿ ಮರ ಮತ್ತು ಸಾಗಾಟಕ್ಕೆ ಬಳಸಿದ ಪಿಕ್‌ಅಪ್ ವಾಹನ ವಶಪಡಿಸಿಕೊಂಡಿದ್ದಾರೆ.
ನರಿಮೊಗರು ಶಾಖಾ ಉಪ ವಲಯ ಅರಣ್ಯಾಧಿಕಾರಿ ಕೆ.ವೆಂಕಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕಿರಾಲ್‌ಬೋಗಿ ಜಾತಿಯ 4 ದಿಮ್ಮಿಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಳ್ಳಲಾದ ಮರ ಮತ್ತು ಸಾಗಾಟಕ್ಕೆ ಬಳಸಿದ ಪಿಕ್‌ಅಪ್ ವಾಹನದ ಒಟ್ಟು ಮೌಲ್ಯ ರು. 2 ಲಕ್ಷ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಆರೋಪಿಗಳು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಅರಣ್ಯ ರಕ್ಷಕರಾದ ಮೋಹನ ಜಿ , ವೈ.ನಾರಾಯಣ ಮತ್ತು ವಾಹನ ಚಾಲಕ ಅಶೋಕ್ ಇದ್ದರು.
ಪುತ್ತೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.