ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೀರಿಗೆ ಮಾರು ದೂರ ಪಯಣ..

Vishwanath S
Updated On : 7 Apr 2013, 11:41 am

ವಿಟ್ಲ: ಒಂದು ಲೋಟ ಕುಡಿಯುವ ನೀರಿಗೂ ಕಿಲೋ ಮೀಟರ್ ದೂರ ಹೋಗಬೇಕಾದ ಪರಿಸ್ಥಿತಿ ಮುರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳದ್ದು.
ತಾಲೂಕಿನ ಮುರುವದಲ್ಲಿರುವ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. 2003- 04ರಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಈ ಶಾಲೆ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದೆ.
 ಈ ಶಾಲೆಯಲ್ಲಿ ತೆರೆದ ಬಾವಿಯಿದ್ದರೂ ಸುಮಾರು ಏಳೆಂಟು ವರ್ಷಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ಬಳಕೆ ಹೆಚ್ಚಾದ ಹಿನ್ನಲೆಯಲ್ಲಿ ಈ ಬಾವಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಾ ಬಂದು ಇತ್ತೀಚೆಗೆ ನಿಂತ ನೀರು ತುಂಬಿ ದುರ್ನಾತ ಬೀರುತ್ತಿದೆ.
ಬಾವಿ ಬತ್ತುವ ಹಂತ: ಈ ನಿಟ್ಟಿನಲ್ಲಿ ಗ್ರಾ.ಪಂ. ಕಡೆಯಿಂದ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಅಂದಾಜು 3 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಿ ನೀರನ್ನು ಒದಗಿಸಲಾಯಿತು. ಆದರೆ ಶಾಲೆ ಸಮೀಪದ ಮನೆಗಳಿಗೆ ನಳ್ಳಿನೀರಿನ ವ್ಯವಸ್ಥೆ ಮಾಡಿದ ನಂತರ ಶಾಲೆಗೆ ನೀರು ಸರಿಯಾಗಿ ತಲುಪುತ್ತಿಲ್ಲ. ಪಕ್ಕದ ಸೊಸೈಟಿ ಬಳಿಯಿರುವ ಬಾವಿಯಿಂದ ಸದ್ಯ ನೀರೆತ್ತಲಾಗುತ್ತಿದೆಯಾದರೂ ಅದೂ ಬತ್ತುವ ಹಂತ ತಲುಪಿದೆ. ಇದರಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ.
ಅಡುಗೆಗೂ ಸಮಸ್ಯೆ: ಈ ಶಾಲೆಯಲ್ಲಿ ಸುಮಾರು 110 ವಿದ್ಯಾರ್ಥಿಗಳಿದ್ದಾರೆ. ಜೊತೆಗೆ ಮಕ್ಕಳಿಗೆ ಬಿಸಿಯೂಟವಿರುವ ಹಿನ್ನಲೆಯಲ್ಲಿ ಅಲ್ಲೇ ಪಕ್ಕದ ಮನೆಯ ಐತ್ತಪ್ಪ ನಾಯ್ಕ ನೀರು ನೀಡಿ ಸಹಕಾರ ಮಾಡುತ್ತಿದ್ದಾರೆ. ಜೊತೆಗೆ ಮಕ್ಕಳು ಮನೆಯಿಂದಲೇ ನೀರನ್ನು ತಂದು ಕುಡಿಯುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಶಾಲೆಯಲ್ಲಿ ಬಿಸಿಯೂಟದ ಯೋಜನೆ ಪ್ರಾರಂಭವಾದಾಗಿನಿಂದ ಮಕ್ಕಳ ಬಟ್ಟಲು, ಕೈ ಸೇರಿ ಅಡುಗೆ ಪಾತ್ರೆಗಳನ್ನು ತೊಳೆಯಲು ನೀರಿನ ಬಳಕೆ ಹೆಚ್ಚಾಗಿದೆ. ಶಾಲೆಯ ಬಾವಿ ನೀರು ಆರಿರುವ ಹಿನ್ನಲೆಯಲ್ಲಿ ಪಕ್ಕದ ಸೊಸೈಟಿ ಬಾವಿಗೆ ಒಪ್ಪಂದದ ಮೇರೆಗೆ ಪಂಪ್ ಅಳವಡಿಸಿ ನೀರು ತರಲಾಗುತ್ತಿದೆ. ಆದರೆ ಅದರಲ್ಲಿಯೂ ನೀರು ಬತ್ತುವ ಹಂತ ತಲುಪಿದೆ.
ಮನವಿಗೆ ಸ್ಪಂದನೆಯಿಲ್ಲ: ಶಾಲಾ ಸಂಚಾಲಕರಾದ ಮುರುವ ಮಹಾಬಲ ಭಟ್ ಪಂಚಾಯಿತಿಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯರಾದ ದಯಾನಂದ ನಾಯಕ್.
 ಇದರೊಂದಿಗೆ ಬರುವ ಶೈಕಕ್ಷಣಿಕ ವರ್ಷದಿಂದ ಎಂಟನೆಯ ತರಗತಿ ಪ್ರಾರಂಭವಾಗುತ್ತಿದೆ. ಗ್ರಾ.ಪಂ.ಗೆ ಪ್ರತ್ಯೇಕ ಮನವಿಗಳನ್ನು ನೀಡಿದರೂ ಗ್ರಾಮ ಸಭೆಗಳಲ್ಲಿ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆಯೂ ನಡೆದಿದ್ದು ಭರವಸೆಗಳು ಮಾತ್ರ ಬಂದದ್ದು ಹೊರತುಪಡಿಸಿ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಇನ್ನಾದರೂ ಇಲಾಖೆ ಇದರತ್ತ ಗಮನ ಹರಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿ ಗ್ರಾಮಸ್ಥರ ವಿನಂತಿ.

-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement