ಮತದಾನ ಜಾಗೃತಿಯ ಮೈಮ್ ಶೋ ಸಿಡಿ ಬಿಡುಗಡೆ
ಮಂಗಳೂರು: ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ ಯೋಜನೆ(ಸ್ವೀಪ್) ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಲುವಾಗಿ ಜಿಲ್ಲಾಧಿಕಾರಿ ಹರ್ಷಗುಪ್ತ ಶುಕ್ರವಾರ ಮೈಮ್ ಶೋ ಸಿಡಿ ಬಿಡುಗಡೆಗೊಳಿಸಿದರು.
'ಮತದಾನ ನನ್ನ ಹಕ್ಕು ಅದನ್ನು ದುಡ್ಡಿಗಾಗಿ, ಸಾರಾಯಿಗಾಗಿ ಮಾರಲಾರೆ, ಬೆದರಿಕೆಗೆ ಮಣಿಯಲಾರೆ' ಎಂಬ ಮತದಾನದ ಹಕ್ಕಿನ ಮಹತ್ವದ ನಿಲುವನ್ನು ಮೈಮ್ ಶೋದಲ್ಲಿ ಪ್ರದರ್ಶಿಸಲಾಗಿದೆ.
ಈ ಸಂದರ್ಭ ಸ್ತ್ರೀಶಕ್ತಿ ಗುಂಪುಗಳ ಕಾರ್ಯಕರ್ತರಿಗೆ ಜಿಲ್ಲಾಧಿಕಾರಿ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸ್ವೀಪ್ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ಕಾಟಾಚಾರದ ಕಾರ್ಯಕ್ರಮವಾಗದೆ, ಪರಿಣಾಮಕಾರಿಯಾಗಿ ಅರ್ಹ ಮತದಾರರನ್ನು ತಲುಪುವ ಕೆಲಸವಾಗಲಿ. ಚುನಾವಣೆಯಲ್ಲಿ ಮತದಾನದ ಶೇಕಡವಾರು ಹೆಚ್ಚಳವಾಗುವ ಭರವಸೆಯಿದೆ. ಜಿಲ್ಲೆಯಲ್ಲಿ ಮಾದರಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಮಲ್ಟಿಫ್ಲೆಕ್ಸ್, ಬಸ್ಸು, ಇಲಾಖೆಗಳಲ್ಲಿ ಮೈಮ್‌ಶೋ ಸಿಡಿ ಪ್ರದರ್ಶನ: ಬಿಡುಗಡೆಗೊಂಡ ಮೈಮ್ ಶೋ ಸಿಡಿ ಪ್ರದರ್ಶನ ಅವಧಿ ಸುಮಾರು 10 ನಿಮಿಷ. ನಗರದ ಮಲ್ಪಿಫ್ಲೆಕ್ಸ್‌ಗಳಲ್ಲಿ ದೂರದ ಊರಿಗೆ ಸಂಚರಿಸುವ ಬಸ್ಸುಗಳಲ್ಲಿ ಹಾಗೂ ಟಿ.ವಿ. ಸೌಲಭ್ಯವಿರುವ ಎಲ್ಲಾ ಇಲಾಖೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಹೇಳಿದರು.
ಮನಪಾ ಆಯುಕ್ತ ಡಾ. ಹರೀಶ್ ಕುಮಾರ್ ಇದ್ದರು.