ಲಾರಿ-ಸ್ಕೂಟರ್ ಡಿಕ್ಕಿ: ಇಬ್ಬರು ಗಂಭೀರ
ಮೂಲ್ಕಿ: ಲಾರಿ ಡಿಕ್ಕಿಯಾಗಿ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಮೂಲ್ಕಿಯ ಬಪ್ಪನಾಡು ದೇವಸ್ಥಾನ ದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಸ್ಕೂಟರ್ ಸವಾರ ಅಹಮ್ಮದ್ ಮೊಯಿದ್ದೀನ್ ಹಾಗೂ ಸಹಸವಾರ ಅಕ್ಕ ಶರೀಫಮ್ಮ ತೀವ್ರ ಗಾಯಗೊಂಡು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಫಲಿಮಾರು ಕಡೆಯಿಂದ ಬರುತ್ತಿದ್ದ ಸ್ಕೂಟರ್ ಪರಸ್ಪರ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತ್ರೆಯಲ್ಲಿ ಇರಿತ: ಆರೋಪಿ ಸೆರೆ
ಮಂಗಳೂರು: ಸುರತ್ಕಲ್ ಸಸಿಹಿತ್ಲು ಭಗವತಿ ದೇವಸ್ಥಾನ ಜಾತ್ರೆಗೆ ಹೋಗಿದ್ದ ವೇಳೆ ದುಷ್ಕರ್ಮಿ ಚೂರಿಯಿಂದ ಪ್ರಶಾಂತ್ ಎಂಬವರಿಗೆ ಇರಿದು ಗಾಯಗೊಳಿಸಿದ್ದಾನೆ. ಆರೋಪಿ ಜೀವನ್ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ವಿನಾಕಾರಣ ಜಗಳಕ್ಕೆ ನಿಂತ ಜೀವನ್ ಚೂರಿಯಿಂದ ಇರಿದು ಕೊಲೆ ಮಾಡುತ್ತೇನೆ ಎಂದು ಹೇಳೆ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾನೆ. ಗೆಳೆಯರಾದ ಆತೀಶ್ ಮತ್ತು ನಾಗೇಶ್ ಗಾಯಗೊಂಡ ಪ್ರಶಾಂತ್ನನ್ನು ಆಸ್ಪತ್ರೆಗೆ ದಾಖಲಿಸಿದರು.
ಬಸ್ ಅಡ್ಡಗಟ್ಟಿ ಹಲ್ಲೆ
ಮಂಗಳೂರು: ಜಲ್ಲಿಗುಡ್ಡೆಯಿಂದ ಪಂಪ್ವೆಲ್ ಕಡೆಗೆ ಹೋಗುತ್ತಿದ್ದ ಪಿಟಿಸಿ ಬಸ್ಗೆ ಕಾರು ಅಡ್ಡ ಇಟ್ಟು ತಡೆದ ಇಬ್ಬರು ಚಾಲಕನಿಗೆ ಹಲ್ಲೆ ನಡೆಸಿದ್ದಾರೆ. ಇನ್ನುಳಿದು ಮೂವರು ಬಸ್ನ ಕಿಟಕಿ ಗಾಜುಗಳನ್ನು ಪುಡಿಗಟ್ಟಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದೆ. ಗಾಯಗೊಂಡ ರೋಹಿತ್ (27) ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಉಳ್ಳಾಲದಲ್ಲಿ 2 ಮೃತದೇಹ ಪತ್ತೆ
ಮಂಗಳೂರು: ಉಳ್ಳಾಲ ನೆಹರು ನಗರ ಮೂಡಾ ಸೈಟ್ ಕಡಲ ತೀರ ಬಳಿ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆಯಾಗಿದೆ. 40ರಿಂದ 45 ವಯಸ್ಸು, ಕುರುಚಲು ಗಡ್ಡ, ಕಪ್ಪು ಪ್ಯಾಂಟ್. ಶವ ಕೊಳೆತು ಹೋಗಿದೆ. ಸೊಂಟದಲ್ಲಿ ಕಪ್ಪು ನೂಲಿದೆ. ಮೊಗವೀರ ಪಟ್ಣ ಶಿವಾಜಿ ಜೀವರಕ್ಷಕ ಸಂಘದ ಸದಸ್ಯರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನದಿಯಲ್ಲಿ ಶವ
ಮಂಗಳೂರು: ಪೆರ್ಮನೂರು ಆದಂಕುದ್ರು ಪ್ರಿನ್ಸ್ ಮರಳು ಯಾರ್ಡ್ ಬಳಿಯ ನೇತ್ರಾವತಿ ನದಿ ತೀರದಲ್ಲಿ ಗಂಡಸಿನ ಶವ ಪತ್ತೆಯಾಗಿದೆ. ಎರಡು ದಿನದ ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದರೋಡೆಕೋರರಿಗೆ 10 ವರ್ಷ ಕಠಿಣ ಶಿಕ್ಷೆ
ಉಡುಪಿ: ಮಣಿಪಾಲದ ಯುವಕನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಐವರು ಆರೋಪಿಗಳಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
2011 ಜ.22ರಂದು ರಾತ್ರಿ 9.30ಕ್ಕೆ ಇಲ್ಲಿಗೆ ಸಮೀಪದ ಮೂಡುಪೆರಂಪಳ್ಳಿಯ ಹೊಯ್ಗೆಕುದ್ರು ಎಂಬಲ್ಲಿ ರೈಲ್ವೆ ಮೇಲ್ಸೇತುವೆ ಮೇಲೆ ಆರೋಪಿಗಳಾದ ಉಪ್ಪೂರು ಗ್ರಾಮದ ಪ್ರಜ್ವಲ್ ಸಾಲ್ಡಾನಾ (24), ಮೂಡುತೋನ್ಸೆ ಗ್ರಾಮದ ಗೌತಮ ಪೂಜಾರಿ (23), ಐರೋಡಿ ಗ್ರಾಮದ ರವೀಂದ್ರ (25), ಮೂಡುತೋನ್ಸೆ ಗ್ರಾಮದ ಚೇತನ ಪೂಜಾರಿ (21) ಮತ್ತು ಒಬ್ಬ ಬಾಲಾಪರಾಧಿ ಸೇರಿಕೊಂಡು ಅಮೀತ್ ಮಕ್ಕರ್ ಮತ್ತು ಮೇಘನಾ ಖಾರ್ವಿ ಎಂಬವರನ್ನು ಹೊಡೆದು, ಅಮೀತ್ನಲ್ಲಿದ್ದ ರು. 1 ಸಾವಿರ ನಗದು ಮತ್ತು ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದರು. ಮಾತ್ರವಲ್ಲ, ಅಮೀತ್ ಅವರನ್ನು ಹೊಡೆದು ಬೆದರಿಸಿ ಎಟಿಎಂ ಕಾರ್ಡ್ನ ಪಿನ್ ನಂಬರ್ ಪಡೆದು, ಅವರನ್ನು ಅಲ್ಲಿಯೇ ಬಿಟ್ಟು, ಅವರದ್ದೇ ಕಾರಿನಲ್ಲಿ ಸಂತೆಕಟ್ಟೆಯ ಎಟಿಎಂಗೆ ಹೋಗಿ ಅಮೀತ್ ಖಾತೆಯಿಂದ ರು. 18 ಸಾವಿರ ನಗದೀಕರಿಸಿದ್ದರು. ಮಾತ್ರವಲ್ಲ, ಹಿಂದಕ್ಕೆ ಬಂದು ಕಾರು ಮತ್ತು ಎಟಿಎಂ ಕಾರ್ಡನ್ನು ಅಮೀತ್ಗೆ ವಾಪಸ್ ನೀಡಿದ್ದರು.
ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರೇಂದ್ರ ಕುಮಾರ ಬಿ. ಗುಣಕಿ ಇವರು ಆರೋಪಿಗಳಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ ಪ್ರತಿ ಆರೋಪಿಗೆ ರು. 10,500 ದಂಡ ವಿಧಿಸಿದ್ದಾರೆ, ದೂರುದಾರರ ಪರವಾಗಿ ಸರ್ಕಾರಿ ವಕೀಲ ಟಿ.ಎಸ್. ಜಿತೂರಿ ವಾದಿಸಿದ್ದರು. ಪ್ರಕರಣವನ್ನು ಅಂದಿನ ಮಣಿಪಾಲ ಪೊಲೀಸ್ ಠಾಣಾಧಿಕಾರಿ ಎಚ್.ಡಿ. ಕುಲಕರ್ಣಿ ತನಿಖೆ ನಡೆಸಿದ್ದರು.
ಕಾರು ಚರಂಡಿಗೆ: ಚಾಲಕ ಗಂಭೀರ
ಉಪ್ಪಿನಂಗಡಿ: ಇಲ್ಲಿನ ಸಮೀಪದ ಪೆರಾಬೆ ಗ್ರಾಮದ ಕುಂತೂರು ಕೋಚಕಟ್ಟೆ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಚಾಲಕ ಗಂಭೀರ ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಗಾಯಗೊಂಡ ಚಾಲಕನನ್ನು ಕುಂತೂರು ಥೋಮಸ್ ಅವರ ಪುತ್ರ ಸಚಿನ್ (28) ಎಂದು ಗುರುತಿಸಲಾಗಿದ್ದು, ಆಲಂಕಾರಿನಿಂದ ಕುಂತೂರು ತನ್ನ ಮನೆಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಸಚಿನ್ ಅವರ ಕೈಗೆ ಗಂಭೀರ ಗಾಯವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಮಯದಲ್ಲಿ ಕಾರಿನಲ್ಲಿದ್ದ ಥೋಮಸ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಉದ್ಯಮಿಗೆ ವಂಚನೆ
ಮಂಗಳೂರು: ಪಾಲುದಾರಿಕೆಯಲ್ಲಿ ಉದ್ಯಮ ಆರಂಭಿಸುವುದಾಗಿ ಹೇಳಿ 13 ಲಕ್ಷ ಪಡೆದು, ಉದ್ಯಮ ಆರಂಭಿಸದೆ, ಹಣವನ್ನು ಮರಳಿಸದೆ ಮೋಸ ಮಾಡಲಾಗಿದೆ ಎಂದು ಅತ್ತಾವರದ ಅಜಿತ್ ಲಾಲ್ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಕೇರಳದ ಮೋಹನ್ ಶ್ಯಾಮ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರೈಲಿಗೆ ತಲೆಕೊಟ್ಟು ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆ
ಕುಂದಾಪುರ: ಅಸೋಡು ರೇಲ್ವೆ ಗೇಟಿನ ಸಮೀಪ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಅಸೋಡು ಗ್ರಾಮದ ನಾರಾಯಣ ಪೂಜಾರಿ ಎಂಬುವವರ ಪುತ್ರಿ ಸುಮಿತ್ರ (24) ಎಂದು ಗುರುತಿಸಲಾಗಿದೆ. ಅಸೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಕೆಗೆ ಇತ್ತೀಚೆಗೆ ವರನನ್ನು ನೋಡಿ ಮದುವೆಗೂ ತಯಾರಿ ನಡೆಸಲಾಗಿತ್ತು. ಇವಳು ಖಾಸಗಿಯಾಗಿ ಪದವಿ ಪರೀಕ್ಷೆ ಕಟ್ಟಿದ್ದು, ರಾತ್ರಿ 12 ಗಂಟೆಯವರೆಗೂ ಓದಿದ್ದಾಳೆ. ಮನೆಯವರು ಅವಳೊಂದಿಗೆ ಟಿ.ವಿ ನೋಡುತ್ತಿದ್ದರು. ಮನೆಮಂದಿ ಮಲಗಿದ ನಂತರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಎಂದಿನಂತೆ ಬೆಳಿಗ್ಗೆ ದನದ ಹಾಲನ್ನು ಕರೆಯಲು ಆಕೆಯನ್ನು ಎಬ್ಬಿಸಲು ಹೋದಾಗ ಆಕೆ ಮನೆಯೊಳಗೆ ಇಲ್ಲದನ್ನು ಗಮನಿಸಿ ಮನೆಯ ಸುತ್ತ ಮುತ್ತ ಹುಡುಕಾಡಿದರು. ಇಲ್ಲಿಂದ 200 ಮೀ. ದೂರದ ರೇಲ್ವೆ ಹಳಿಯಲ್ಲಿ ದೇಹದಿಂದ ತಲೆ ಬೇರ್ಪಟ್ಟ ಸ್ಥಿತಿಯಲ್ಲಿದ್ದ ಶವವನ್ನು ಪತ್ತೆಹಚ್ಚಲಾಯಿತು. 7.30ಕ್ಕೆ ಇಲ್ಲಿ ಹಾದು ಹೋಗುವ ರಾಜಧಾನಿ ಎಕ್ಸ್ಪ್ರೆಸ್ ಸಿಬ್ಬಂದಿ ನೀಡಿದ ಸಂದೇಶದಿಂದಾಗಿ ಅಸೋಡು ರೇಲ್ವೆ ಗೇಟಿನ ಸಿಬ್ಬಂದಿ ರೇಲ್ವೆ ಇಲಾಖೆಗೆ ಹಾಗೂ ಕುಂದಾಪುರ ಠಾಣೆಗೆ ದೂರು ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿ, ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಶವ ಬಿಟ್ಟುಕೊಡಲಾಯಿತು.