ಹಿಂದೆ ಸಿಪಿಎಂ, ಸೋಶಿಯಲಿಸ್ಟ್ ಸ್ಪರ್ಧೆ, ಈಗ ನೇರ ಕಾಂಗ್ರೆಸ್-ಬಿಜೆಪಿ ಮಧ್ಯೆ
ಮಂಗಳೂರು: ಜಿಲ್ಲೆಯ ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಗೆ 1957ರ ಆರಂಭದ ದಿನಗಳಲ್ಲಿ ಎದಿರೇಟು ನೀಡಿದ್ದು ಸಿಪಿಎಂ, ಸೋಶಿಯಲಿಸ್ಟ್, ಜನತಾದಳ, ಜನಸಂಘ. ನಂತರದಲ್ಲಿ ಶುರುವಾದ್ದು ಬಿಜೆಪಿ-ಕಾಂಗ್ರೆಸ್ ನೇರ ಸಂಘರ್ಷ.
57ರ ಕಮ್ಯುನಿಸ್ಟ್ ಬೇರು: ಕಾಂಗ್ರೆಸ್ಗೆ 1957ರಲ್ಲೇ ಸಿಪಿಎಂ ಎದುರಾಗಿತ್ತು. 57 ಮತ್ತು 62ರಲ್ಲಿ ಆಗ ಮಂಗಳೂರು ದಕ್ಷಿಣದಿಂದ ಶಾಂತರಾಮ ಪೈ ಕಾಂಗ್ರೆಸ್ಗೆ ಎದಿರಾಳಿ. ಆದರೆ ಗೆಲವು ಸಾಧ್ಯವಾಗಲಿಲ್ಲ. ಕಾಂಗ್ರೆಸ್ಗೆ ಸಿಪಿಎಂ ಬೆನ್ನುಬಿಡದ ಸ್ಪರ್ಧೆ ನೀಡಿದ್ದು ಉಳ್ಳಾಲದಲ್ಲಿ. ಅಲ್ಲಿ ಕೂಡ 1957ರಿಂದ. 1962ರಲ್ಲಿ ಕೃಷ್ಣ ಶೆಟ್ಟಿ ಮತ್ತು 83ರಲ್ಲಿ ರಾಮಚಂದ್ರ ರಾವ್ ಸಿಪಿಎಂ ಶಾಸಕರಾಗಿದ್ದರು.
ಬಳಿಕ 72, 78, 85, 89ರ ವರೆಗೆ ಕಾಂಗ್ರೆಸ್-ಸಿಪಿಎಂ ನೇರ ಹಣಾಹಣಿ ನಡೆದಿತ್ತು. 1972ರಲ್ಲಿ ಬಿ.ವಿ. ಕಕ್ಕಿಲ್ಲಾಯ ಬಂಟ್ವಾಳದಲ್ಲಿ ಕಾಂಗ್ರೆಸ್ ನೇರ ಸ್ಪರ್ಧೆಯಲ್ಲಿ ಮೊದಲ ಸಿಪಿಎಂ ಶಾಸಕ. 1978ರಲ್ಲಿ ವಿಟ್ಲದಲ್ಲಿ ಬಿ.ವಿ. ಕಕ್ಕಿಲ್ಲಾಯ ಜನತಾ ಪಾರ್ಟಿಗೆ ಸ್ಪರ್ಧೆ ನೀಡಿ ಶಾಸಕರಾಗಿದ್ದರು.
ಸೋಶಿಯಲಿಸ್ಟ್ಗೆ ಮಣೆ: ಸುರತ್ಕಲ್ ಕ್ಷೇತ್ರದಲ್ಲಿ 1962ರಲ್ಲಿ ಸಂಜೀವ ಐಕಳ, 67ರಲ್ಲಿ ಪಿ.ವಿ.ಐತಾಳ್ ಕಾಂಗ್ರೆಸ್ ಎದುರು ಸ್ಪರ್ಧಿಸಿ ಸೋಶಿಯಲಿಸ್ಟ್ ಶಾಸಕರಾಗಿದ್ದರು. 1957ರಲ್ಲೇ ಕಾಂಗ್ರೆಸ್ಗೆ ಎದುರಾಳಿ ಸೋಶಿಯಲಿಸ್ಟ್ ಪಾರ್ಟಿ. ಬೇರೆ ಕ್ಷೇತ್ರಗಳಲ್ಲಿ ನೇರ ಪೈಪೋಟಿ ನೀಡಲು ಸೋಶಿಯಲಿಸ್ಟ್ ಪಾರ್ಟಿಗೆ ಸಾಧ್ಯವಾಗಿಲ್ಲ.
ಸ್ವತಂತ್ರರ ಸಾಮರ್ಥ್ಯ: ಸ್ವತಂತ್ರ ಅಭ್ಯರ್ಥಿಗಳ ನೇರ ಸ್ಪರ್ಧೆಯನ್ನು ಕಾಂಗ್ರೆಸ್ಗೆ ಎದುರಿಸಬೇಕಾಗಿ ಬಂದದ್ದು ಸುರತ್ಕಲ್, ಬೆಳ್ತಂಗಡಿ, ಸುಳ್ಯ ಹಾಗೂ ಮೂಡುಬಿದಿರೆಯಲ್ಲಿ.
ಬೆಳ್ತಂಗಡಿಯಲ್ಲಿ 1957ರಲ್ಲಿ ರಮಾನಾಥ ಶೆಟ್ಟಿ, 62ರಲ್ಲಿ ಜಿನರಾಜ ಹೆಗ್ಡೆ, 67ರಲ್ಲಿ ಜೆ.ಬಿ.ಪಿರೇರ ಕಾಂಗ್ರೆಸ್ಗೆ ಸ್ಪರ್ಧೆ ನೀಡಿದ್ದರು. ಇವರಾರೂ ಶಾಸಕರಾಗಿ ಆಯ್ಕೆಯಾಗಲಿಲ್ಲ. ಸುಳ್ಯದಲ್ಲಿ 1967ರಲ್ಲಿ ಸ್ವತಂತ್ರ ಅಭ್ಯರ್ಥಿ ರಾಮಚಂದ್ರ ಕಾಂಗ್ರೆಸ್ ಎದುರು ಜಯಿಸಿದ ಶಾಸಕ.
ಮೂಡುಬಿದಿರೆಯಲ್ಲಿ 1962ರಲ್ಲಿ ಗೋಪಾಲ ಸಾಲ್ಯಾನ್, 67ರಲ್ಲಿ ರತನ ಕುಮಾರ್ ಕಾಂಗ್ರೆಸ್ ಮಣಿಸಿದ ಸ್ವತಂತ್ರ ಶಾಸಕರು. ಸುರತ್ಕಲ್ನಲ್ಲಿ 1972ರಲ್ಲಿ ಕಾಂಗ್ರೆಸ್ ಎದುರು ಗೆದ್ದ ಸ್ವತಂತ್ರ ಅಭ್ಯರ್ಥಿ ರತನ್ ಕುಮಾರ್ ಶಾಸಕರಾದರು.
ಜನತಾ ಪಕ್ಷ ಅಸ್ತಿತ್ವ: ಜಿಲ್ಲೆಯ ಮಂಗಳೂರು ದಕ್ಷಿಣದಲ್ಲಿ ಶಾರದಾ ಆಚಾರ್ ಕಾಂಗ್ರೆಸ್ಗೆ ಸ್ಪರ್ಧಿ. ಸುರತ್ಕಲ್ನಲ್ಲಿ 1978, 83ರಲ್ಲಿ ಜೆ.ಆರ್.ಪಾಯಸ್ ಕಾಂಗ್ರೆಸ್ ಎದುರು ಸ್ಪರ್ಧಿಸಿದ್ದರು. 89ರಲ್ಲಿ ಲೋಕಯ್ಯ ಶೆಟ್ಟಿ ಕಾಂಗ್ರೆಸ್ಗೆ ಪ್ರಬಲ ಸ್ಪರ್ಧೆ ನೀಡಿದ್ದರು.
85ರಲ್ಲಿ ಸುಬ್ಬಯ್ಯ ಶೆಟ್ಟಿ ಕಾಂಗ್ರೆಸ್ ಎದುರಾಳಿ. ಸುಳ್ಯದಲ್ಲಿ 78ರಲ್ಲಿ ರಾಮಚಂದ್ರ ಜನತಾಪಾರ್ಟಿ ಶಾಸಕ. ಮೂಡುಬಿದಿರೆಯಲ್ಲಿ 83ರಲ್ಲಿ ಅಮರನಾಥ ಶೆಟ್ಟಿ ಜನತಾ ಪಾರ್ಟಿಯಿಂದ ಕಾಂಗ್ರೆಸ್ಗೆ ಸಡ್ಡುಹೊಡೆದಿದ್ದರು.
ಜನಸಂಘ ಅಸ್ತಿತ್ವಕ್ಕೆ ಬಂದ ನಂತರ ಪ್ರಥಮ ಸ್ಪರ್ಧೆ 1967ರಲ್ಲಿ ಪುತ್ತೂರಿನಲ್ಲಿ ರಾಮಭಟ್ ಅವರು ಕಾಂಗ್ರೆಸ್ಗೆ ತೀವ್ರ ಪೈಪೋಟಿ ನೀಡಿದ್ದರು. 72ರಲ್ಲಿ ಮಂಗಳೂರು ದಕ್ಷಿಣದಲ್ಲಿ ಜನಸಂಘದಿಂದ ಸಿ.ಜೆ.ಕಾಮತ್ ಕಾಂಗ್ರೆಸ್ಗೆ ಎದುರಾಳಿ.
ಜೆಡಿಎಸ್, ಬಿಜೆಪಿ ಶಕೆ: ಕಾಂಗ್ರೆಸ್ಗೆ ಬಿಜೆಪಿ ನೇರ ಸ್ಪರ್ಧೆ ಒಡ್ಡಿದ್ದು 1978ರಲ್ಲಿ ರಾಮಭಟ್ ಶಾಸಕರಾಗಿ ಪುತ್ತೂರಿನಲ್ಲಿ. ಅದೇ ವೇಳೆ ಬಂಟ್ವಾಳದಲ್ಲಿ ರುಕ್ಮಯ ಪೂಜಾರಿ ಸ್ಪರ್ಧಿಸಿ ಸೋತರು. ನಂತರ 83ರಿಂದ ಬಿಜೆಪಿ ಜಿಲ್ಲೆಯಲ್ಲಿ ಖಾತೆ ತೆರೆಯಲು ಶುರು ಮಾಡಿತು. ಮಂಗಳೂರು ದಕ್ಷಿಣದಲ್ಲಿ ಧನಂಜಯ ಕುಮಾರ್ ಗೆಲವು, ವಿಟ್ಲದಲ್ಲಿ ರುಕ್ಮಯ ಪೂಜಾರಿ, ಬೆಳ್ತಂಗಡಿಯಲ್ಲಿ ವಸಂತ ಬಂಗೇರ ಗೆದ್ದಿದ್ದರು. 85ರಲ್ಲಿ ಸುರತ್ಕಲ್ನಲ್ಲಿ ಜನತಾದಳದ ಸುಬ್ಬಯ್ಯ ಶೆಟ್ಟಿ ಸ್ಪರ್ಧಿಸಿದ್ದರು.
85ರಲ್ಲಿ ಸುಳ್ಯದಲ್ಲಿ ಬಾಕಿಲ ಹುಕ್ರಪ್ಪ ಬಿಜೆಪಿಯಲ್ಲಿ ಸ್ಪರ್ಧಿಸಿದರೂ ಸೋತರು. ಸುರತ್ಕಲ್ನಲ್ಲಿ 94ರಲ್ಲಿ ಬಿಜೆಪಿಯ ಕುಂಬ್ಳೆ ಸುಂದರ ರಾವ್ ಕಾಂಗ್ರೆಸ್ ಎದುರು ಸ್ಪರ್ಧಿಸಿ ಗೆದ್ದಿದ್ದರು.
ಉಳ್ಳಾಲದಲ್ಲಿ ಬಿಜೆಪಿ ಎದುರಾಳಿಯಾದ್ದು 1994ರಲ್ಲಿ. ಮೂಡುಬಿದಿರೆಯಲ್ಲಿ 2008ರಲ್ಲಿ ಜಗದೀಶ್ ಅಧಿಕಾರಿ ಸ್ಪರ್ಧಿಸಿದರೂ ಸೋತಿದ್ದರು. 89, 99, 2004ರಲ್ಲಿ ಜನತಾದಳದಿಂದ ಅಮರನಾಥ ಶೆಟ್ಟಿ ಕಾಂಗ್ರೆಸ್ಗೆ ಪೈಪೋಟಿ ನೀಡಿದ್ದರು.
-ಆತ್ಮಭೂಷಣ್