2ನೇ ಘಟಕ ಸ್ಥಗಿತ-ಪುನಾರಂಭ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 2ನೇ ಘಟಕವು ಭಾನುವಾರ ಬೆಳಗ್ಗೆ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತ್ತು. ಕೆಪಿಸಿ ಅಧಿಕಾರಿಗಳು ಮಧ್ಯಾಹ್ನದ ವೇಳೆಗೆ ದುರಸ್ತಿಗೊಳಿಸಿ ಪುನಾ ವಿದ್ಯುತ್ ಉತ್ಪಾದನೆಗೆ ತೊಡಗಿಸಿದರೆಂದು ಮೂಲಗಳು ಹೇಳಿವೆ. 2ನೇ ಘಟಕದಲ್ಲಿ ಕಂಡುಬಂದ ಸಣ್ಣ ಪ್ರಮಾಣದ ತೊಂದರೆಯನ್ನು ನಿವಾರಿಸಿದ ಅಧಿಕಾರಿಗಳು ಘಟಕವನ್ನು ಮಧ್ಯಾಹ್ನದ ವೇಳೆಗೆ ಪುನಾ ವಿದ್ಯುತ್ ಉತ್ಪಾದನೆಗೆ ತೊಡಗಿಸಿದರು.
ಬಡ ಬಾಲಕಿ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಿ
ವಿಟ್ಲ: ಮಾಣಿಲ ಗ್ರಾಮದ ಆರು ವರ್ಷದ ಶರಣ್ಯ ಎಂಬ ಪುಟ್ಟ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮೇ 13ಕ್ಕೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದೆ. ಆದರೆ, ಇವಳ ಚಿಕಿತ್ಸೆಗೆ ಬೇಕಾದ ಹಣ ಹೊಂದಿಸಲಾಗದೆ ಹೆತ್ತವರು ಕಂಗಾಲಾಗಿದ್ದಾರೆ. ಮಾಣಿಲ ಗ್ರಾಮದ ಮುಜೂರಿನ ನಾರಾಯಣ-ಸುಜಾತ ದಂಪತಿಗೆ ಇಬ್ಬರು ಮಕ್ಕಳು. ಮೂಲತಃ ಉಕ್ಕಿನಡ್ಕ ಸಮೀಪದ ಬಣ್ಪುತಡ್ಕದವರು. ಎರಡು ವರ್ಷಗಳ ಹಿಂದೆ ಮಾಣಿಲ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ. ಶರಣ್ಯ ಸದ್ಯ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. 2 ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದ್ದು ಶಸ್ತ್ರ ಚಿಕಿತ್ಸೆ ಮಾಡುವ ಅನಿವಾರ್ಯತೆ ಎದುರಾಗಿದೆ. ಸುವರ್ಣ ಆರೋಗ್ಯ ಚೈತನ್ಯ ಯೋಜನೆಯಡಿ ಈವರೆಗೆ ಚಿಕಿತ್ಸೆ ಉಚಿತವಾಗಿ ದೊರಕಿದೆ. ಆದರೆ ಶಸ್ತ್ರಚಿಕಿತ್ಸೆ ಸಂಪೂರ್ಣ ಉಚಿತವಾಗಿಲ್ಲ. ಹೀಗಾಗಿ ಈ ಬಡ ಕುಟುಂಬಕ್ಕೆ ನೆರವಾಗಲು ಬಯಸುವವರು ಮೊ. 8086136522. ಧನ ಸಹಾಯ ಮಾಡುವವರು ಶರಣ್ಯ ಹೆಸರಿನಲ್ಲಿರುವ ಮಾಣಿಲ ಕರ್ಣಾಟಕ ಬ್ಯಾಂಕ್ ಖಾತೆ ಸಂಖ್ಯೆ 5022500100386301, ಐಎಫ್ಎಸಿ ಸಂಖ್ಯೆ ಕೆಎಆರ್ಬಿ 0000502ಗೆ ಜಮೆ ಮಾಡಬಹುದು.
ಮುನೇಶ್ವರ ದೇವರ ವಾರ್ಷಿಕ ಮಹಾಪೂಜೋತ್ಸವ
ಸೋಮವಾರಪೇಟೆ: ನಗರದ ಮಹದೇಶ್ವರ ಬಡಾವಣೆಯಲ್ಲಿನ ಶ್ರೀ ಮುನೇಶ್ವರ ದೇವರ ವಾರ್ಷಿಕ ಮಹಾ ಪೂಜೋತ್ಸವವು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ನೆರವೇರಿತು. ಮಹದೇಶ್ವರ ಬಡಾವಣೆಯ ಸಾರ್ವಜನಿಕ ಉದ್ಯಾನವನದ ಸಮೀಪವಿರುವ ಶ್ರೀ ಮುನೇಶ್ವರ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಾಲಯ ಸಮಿತಿಯ ಪದಾಧಿಕಾರಿಗಳು ಇದ್ದರು.
ದಲಿತರ ಬಗ್ಗೆ ಸಿಬ್ಬಂದಿ ಉದ್ಧಟತನ: ಆರೋಪ
ಮಂಗಳೂರು: ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ತೊಂದರೆಗೀಡಾದ ದಲಿತರ ವಿರುದ್ಧ ಸಿಬ್ಬಂದಿಗಳು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ದಲಿತ ಮುಖಂಡರು ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಭಾನುವಾರ ನಡೆದ ಎಸ್ಸಿ ಎಸ್ಟಿ ಸಭೆಯಲ್ಲಿ ಆಗ್ರಹಿಸಿದರು.
ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಮರಾಠಿ ಸಂಘ ಜಿಲ್ಲಾ ಉಪಾಧ್ಯಕ್ಷ ಎಂ.ಎ.ನಾಯ್ಕ ಮಾತನಾಡಿ, ಪಡುವನ್ನೂರಿನಲ್ಲಿ ಲೋಕೇಶ್ ಮತ್ತು ಹರೀಶ್ ಎಂಬ ವಿದ್ಯಾರ್ಥಿಗಳಿಗೆ ಅವರದೇ ಸಮುದಾಯದವರು ಹಲ್ಲೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಾದ ಇವರಬ್ಬರಿಂದ ಹೇಳಿಕೆ ಪಡೆಯಲು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ತೆರಳಿದ್ದರು. ಆಸ್ಪತ್ರೆಯಲ್ಲಿ ಹೇಳಿಕೆ ಪಡೆಯುವಾಗ ಸಾಂತ್ವನ ಹೇಳುವುದು ಬಿಟ್ಟು ಜಾತಿ ನಿಂದಿಸಿ ಉದ್ಧಟತನ ಮಾಡಿದ್ದಾರೆ. ಇಂಥ ಪ್ರಕರಣ ಜಿಲ್ಲೆಯ ಇತರೆ ಪೊಲೀಸ್ ಠಾಣೆಗಳಲ್ಲೂ ಸಿಬ್ಬಂದಿಯಿಂದ ನಡೆಯುತ್ತಿದೆ. ಅಧಿಕಾರಿಗಳು ಉತ್ತಮರಾಗಿರುತ್ತಾರೆ ಎಂದು ಹೇಳಿದರು. ಈ ಬಗ್ಗೆ ವರದಿ ತರಿಸಿ ಶಿಸ್ತು ಕ್ರಮ ಜರುಗಿಸುವುದಾಗಿ ಎಸ್ಪಿ ಗೋಯಲ್ ಹೇಳಿದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಳೆದ 3 ತಿಂಗಳಿಂದ ಎಸ್ಸಿ ಎಸ್ಟಿ ಸಭೆ ನಡೆಯುತ್ತಿಲ್ಲ. ದಲಿತರಿಗೆ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದಲಿತ ಮುಖಂಡ ವಿಶ್ವನಾಥ ಅಲೆಕ್ಕಾಡಿ ಆರೋಪಿಸಿದರು.
ಅಲ್ಲಿನ ಎಸ್ಐಯನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನು ನಿಯಮಿತವಾಗಿ ಎಸ್ಸಿ ಎಸ್ಟಿ ಸಭೆ ನಡೆಯಲಿದೆ ಎಂದು ಎಸ್ಪಿ ಗೋಯಲ್ ಸ್ಪಷ್ಟಪಡಿಸಿದರು. ಅದೇ ರೀತಿ ಎಸ್ಸಿ ಎಸ್ಟಿ ಸಭೆಯ ನಡವಳಿ ನೀಡುವಂತೆ ಠಾಣಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು ಎಸ್ಪಿ.
ನಾಳೆ ಸುಳ್ಯದಲ್ಲಿ ಬಿಜೆಪಿ ಸಮಾವೇಶ
ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ತಯಾರಿಯ ಭಾಗವಾಗಿ ಭಾರತೀಯ ಜನತಾ ಪಕ್ಷದ ಸುಳ್ಯ ಮಂಡಲ ಸಮಿತಿ ವತಿಯಿಂದ ಕಾರ್ಯಕರ್ತರ ಬೃಹತ್ ಸಮಾವೇಶ ಏ.9ರಂದು ಕೇರಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಲಿದೆ. ಅಂದು ಅಪರಾಹ್ನ ಕಡಬದಲ್ಲಿಯೂ ಸಮಾವೇಶ ನಡೆಯಲಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಚಾರ ಸಮಿತಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಬೂತ್ ಹಾಗೂ ಗ್ರಾ.ಪಂ. ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು ಸುಳ್ಯದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ. ಸದಾನಂದ ಗೌಡ, ಶಾಸಕ ಎಸ್. ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಜಿಲ್ಲಾ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಗಣೇಶ್ ಕಾರ್ಣಿಕ್, ಪ್ರತಾಪಸಿಂಹ ನಾಯಕ್, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಎನ್. ಮನ್ಮಥ ಹಾಗೂ ಇನ್ನಿತರ ನಾಯಕರು ಸಮಾವೇಷದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಕೆಎಫ್ಡಿಸಿ ಅಧ್ಯಕ್ಷ ಎಸ್. ಎನ್. ಮನ್ಮಥ, ಕೃಪಾಶಂಕರ ತುದಿಯಡ್ಕ, ಪಿ. ಕೆ. ಉಮೇಶ್, ಪ್ರಕಾಶ್ ಹೆಗ್ಡೆ, ಸನತ್ ಅಡ್ಕಾರ್, ಸುಂದರಲಿಂಗಂ, ಕುಶಾಲಪ್ಪ ಪೆರುವಾಜೆ ಉಪಸ್ಥಿತರಿದ್ದರು.