ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ
ಕ.ಪ್ರ. ವಾರ್ತೆ , ಮಡಿಕೇರಿ/ಕೆಜಿಎಫ್ , ಏ.7
ಅತ್ಯಾಚಾರ ಪ್ರಕರಣಗಳ ಸರಣಿ ಮುಂದುವರಿದಿದ್ದು ಮಡಿಕೇರಿಯ ಬಳಿಯ ಗ್ರಾಮವೊಂದರಲ್ಲಿ ಹೆತ್ತ ತಂದೆಯೇ ಮಗಳ ಮೇಲೆ 2 ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದರೆ, ಕೆಜಿಎಫ್‌ನ ಬ್ಯಾಟರಾಯನಹಳ್ಳಿಯಲ್ಲಿ 7 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.
ಮಡಿಕೇರಿ ಬಳಿಯ ಗ್ರಾಮವೊಂದರ ನಿವಾಸಿ ತನ್ನ 15 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ. ಕೆಲ ದಿನಗಳ ಹಿಂದೆ ಪತ್ನಿ ಎದುರು ಮಗಳ ಶೀಲದ ಬಗ್ಗೆಯೇ ಚರ್ಚಿಸುತ್ತಿರುವಾಗ ಬಾಲಕಿ ಕಾಮುಕ ತಂದೆಯ ಬಣ್ಣ ಬಯಲು ಮಾಡಿದ್ದಾಳೆ. ಬಳಿಕ ತಾಯಿ ಹಾಗೂ ಮಗಳು ಮಡಿಕೇರಿಯ ಸಾಮಾಜಿಕ ಕಾರ್ಯಕರ್ತೆಯ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ತಂದೆ ತಲೆಮರೆಸಿಕೊಂಡಿದ್ದಾನೆ.
ಕೆಜಿಎಫ್‌ನ ಬ್ಯಾಟರಾಯನಹಳ್ಳಿಯಲ್ಲಿ ಅದೇ ಗ್ರಾಮದ ವ್ಯಕ್ತಿಯೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಾಲಕಿಯ ಹೆತ್ತವರು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾಗ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ತನ್ನ ಮಿತ್ರನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ವಿಷಯ ತಿಳಿದ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದು ಆರೋಪಿಯ ಹುಡುಕಾಟ ನಡೆಸಿದ್ದಾರೆ.