ಕಂದಕ ಮುಚ್ಚದಿದ್ದರೆ ಪ್ರತಿಭಟನೆ ಎಚ್ಚರಿಕೆ
ಸುಬ್ರಹ್ಮಣ್ಯ: ಕೋಡಿಕಜೆ-ಕಲ್ಲಜಡ್ಕ ರಸ್ತೆ ಸಂಪರ್ಕ ವಿಚಾರವಾಗಿ ಅರಣ್ಯ ಇಲಾಖೆಯವರು ವಿವಾದಿತ ರಸ್ತೆ ಸಂಪರ್ಕವನ್ನು ಕಡಿತಗೊಳಿಸುವ ವಿಚಾರದಲ್ಲಿ ರಸ್ತೆಗೆ ತೆಗೆದ ಕಂದಕವನ್ನು ಉಪ ಅರಣ್ಯ ವಲಯಾಧಿಕಾರಿ ಮತ್ತು ಫಾರೆಸ್ಟ್ ಗಾರ್ಡ್ ಎದುರು ಬಲತ್ಕಾರವಾಗಿ ಮುಚ್ಚಿರುವ ಮತ್ತು ಮುಚ್ಚಿಸಲು ನೇತೃತ್ವ ವಹಿಸಿದವರ ವಿರುದ್ಧ ಅರಣ್ಯ ಕಾಯಿದೆ ಪ್ರಕಾರ ಕೇಸು ದಾಖಲಿಸಬೇಕು ಮತ್ತು ಇಲ್ಲಿಗೆ ವಿಶೇಷ ಸಿಬ್ಬಂದಿ ನೇಮಕ ಮಾಡಿ ಅರಣ್ಯ ರಕ್ಷಣೆಯನ್ನು ಮಾಡಬೇಕು. ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಗ್ರಾ.ಪಂ. ಉಪಾಧ್ಯಕ್ಷ ಶಿವರಾಮ ರೈ ಎಚ್ಚರಿಸಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಡಿಕಜೆ- ಕಲ್ಲಜಡ್ಕ ಮತ್ತು ಮಾನಾಡು ಪ್ರದೇಶಕ್ಕೆ ರಸ್ತೆ ಸಂಪರ್ಕ ಬಹಳ ವರ್ಷಗಳ ಹಿಂದಿನಿಂದಲೇ ಇತ್ತು. ಆದರೆ ಅದು ದುರಸ್ತಿ ಮಾಡದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಗಿತ್ತು. ಖಾಸಗಿ ವ್ಯಕ್ತಿಗಳು ರಸ್ತೆಯ ಪ್ರದೇಶ ಅತಿಕ್ರಮಣ ಮಾಡಿ ಸಮಸ್ಯೆ ಉಂಟಾಗಿತ್ತು. ಕೋಡಿಕಜೆಗೆ ಪಂಚಾಯಿತಿ ವತಿಯಿಂದ ಅರಣ್ಯ ವ್ಯಾಪ್ತಿ ಬಿಟ್ಟು ರಸ್ತೆ ನಿರ್ಮಾಣ ಮಾಡಲಾಗಿತ್ತು.ದೇವರಗದ್ದೆ ವ್ಯಾಪ್ತಿಯ ಹೊಳೆಗೆ ಈಗಾಗಲೇ ಸೇತುವೆ ನಿರ್ಮಾಣದ ಹಂತದಲ್ಲಿದ್ದು, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಈ ಮಧ್ಯೆ ಐನೆಕಿದು ಭಾಗದ ಕೆಲವು ವ್ಯಕ್ತಿಗಳು ಮತ್ತು ಸುಬ್ರಹ್ಮಣ್ಯದ ಕೆಲವರ ನಾಯಕತ್ವದಲ್ಲಿ ಕೋಡಿಕಜೆ ಪ್ರದೇಶದಿಂದ ವಲಯಾರಣ್ಯಾಧಿಕಾರಿ ಕಚೇರಿಯ ಹಿಂಬದಿಯ ತನಕ ಯಂತ್ರಗಳ ಸಹಾಯದಿಂದ ದಟ್ಟ ಅರಣ್ಯದಲ್ಲಿದ್ದ ಮರ- ಗಿಡಗಳನ್ನು ಕಡಿದು ಈ ರಸ್ತೆ ಹತ್ತಿರವಾಗುತ್ತದೆ ಎಂದು ರಸ್ತೆ ನಿರ್ಮಿಸಿದ್ದಾರೆ ಎಂದರು.
ದೂರಿದರೂ ಪ್ರಯೋಜನವಾಗಿಲ್ಲ: ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅದರಂತೆ ಅರಣ್ಯ ಅಧಿಕಾರಿಗಳು ಈ ರಸ್ತೆಯನ್ನು ಮೂರು ಬಾರಿ ಮುಚ್ಚಿದರೂ ಮತ್ತೆ ಅಧಿಕಾರಿಗಳ ಸಮ್ಮುಖದಲ್ಲಿ ತೆರೆದು ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅನವಶ್ಯಕವಾಗಿ ಇಲ್ಲಿ ಗೊಂದಲ ಸೃಷ್ಟಿಸಿ, ಚುನಾವಣಾ ಸಂದರ್ಭ ರಾಜಕೀಯ ಲಾಭ ಗಳಿಸಲು, ಸ್ವಲಾಭ ಪಡೆದು ಮತಗಳಿಸಲು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.
ಈ ರೀತಿ ಮಾಡುವ ಬದಲು ಈಗಾಗಲೇ ಇರುವ ಬಹು ಹತ್ತಿರದ ಮತ್ತು ಬಹು ವರ್ಗದ ಜನತೆಗೆ ಉಪಯೋಗವಾಗುವ ಮತ್ತು ಬಳಕೆಯಲ್ಲಿರುವ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಲಿ. ಬದಲಾಗಿ ರಾಜಕೀಯ ನಾಟಕ ಮಾಡುವುದನ್ನು ಮತ್ತು ಆರೋಪ ಹೊರಿಸುವುದನ್ನು ನಿಲ್ಲಿಸಲಿ ಎಂದು ಹೇಳಿದರು. ಗ್ರಾ.ಪಂ. ಸದಸ್ಯರಾದ ಕೃಷ್ಣಮೂರ್ತಿ ಭಟ್ ಮತ್ತು ಲಕ್ಷ್ಮೀ, ರಸ್ತೆ ಹೋರಾಟ ಸಮಿತಿಯ ಕಾರ್ಯದರ್ಶಿ ಶೇಷಕುಮಾರ, ನೋಣಪ್ಪ ಗೌಡ, ವಿವೇಕಾನಂದ ಉಪಸ್ಥಿತರಿದ್ದರು.