ಗೇರುಕಟ್ಟೆ ಗಂಗಯ್ಯ ಶೆಟ್ಟಿಗೆ 'ಯಕ್ಷಮಂಗಳ' ಪ್ರಶಸ್ತಿ
ಮಂಗಳೂರು: ಕಟೀಲು ಮೇಳದ ಹಿರಿಯ ಬಣ್ಣದ ವೇಷಧಾರಿಯಾಗಿ ಪ್ರಸಿದ್ಧರಾದ ಗೇರುಕಟ್ಟೆ ಗಂಗಯ್ಯ ಶೆಟ್ಟಿಗೆ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ 'ಯಕ್ಷಮಂಗಳ ಪ್ರಶಸ್ತಿ' ಪ್ರಕಟಿಸಲಾಗಿದೆ. ಏ.20ರಂದು ವಿ.ವಿ.ಯ ಮಂಗಳ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಂಗಯ್ಯ ಶೆಟ್ಟಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ರು. 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ. ಕಟೀಲು ಮೇಳದಲ್ಲಿ 40 ವರ್ಷ ತಿರುಗಾಟ ಪೂರೈಸಿದ್ದು, ಹಿರಣ್ಯಾಕ್ಷ, ಕೌಂಡ್ಲಿಕ, ಮಹಿಷಾಸುರ, ನರಕಾಸುರ, ಮೈರಾವಣ, ರಾವಣ, ಕುಂಭಕರ್ಣ, ಶುಂಭ, ಮಧು-ಕೈಟಭ ಮೊದಲಾದ ವೇಷಗಳಿಂದ ಪ್ರಸಿದ್ಧರು. ಮಹಿಷಾಸುರ ಮತ್ತು ರುದ್ರಭೀಮ ಇವರಿಗೆ ಹೆಚ್ಚಿನ ಕೀರ್ತಿ ತಂದುಕೊಟ್ಟಿದೆ. ಮೇಳದ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿ ಸಂಘಟನೆಯ ಅನುಭವ ಇವರದು. ಹವ್ಯಾಸಿ ಕಲಾವಿದರಿಗೆ ತರಬೇತಿ ನೀಡಿ ಬಣ್ಣದ ವೇಷ ಪರಂಪರೆ ಮುಂದುವರಿಯುವಂತೆ ಪ್ರೇರೇಪಿಸುತ್ತಿದ್ದಾರೆ. ರುದ್ರರಮಣೀಯವಾದ ಸೃಜನಶೀಲ ಬಣ್ಣಗಾರಿಕೆ, ಗಂಭೀರ ಶೈಲಿಯ ಔಚಿತ್ಯಪೂರ್ಣ ಮಾತುಗಾರಿಕೆ ಮತ್ತು ಬಣ್ಣದ ವೇಷಗಾರಿಕೆಯ ಮೂಲಕ ಕಲಾ ಸಂಪ್ರದಾಯದ ಸ್ಪಷ್ಟ ಅರಿವಿನಿಂದ ಗಂಗಯ್ಯ ಶೆಟ್ಟಿ ಯಕ್ಷಗಾನ ರಂಗಭೀಮಿಯ ಶ್ರೇಷ್ಠ ಕಲಾವಿದರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಬಳಿಕ ಕಟೀಲು ಮೇಳದ ಆಯ್ದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.