ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಚಿಕ್ಕಮಗಳೂರಿನ ವಿದ್ಯಾರ್ಥಿ ಸಮುದ್ರಪಾಲು

Vishwanath S
Updated On : 8 Apr 2013, 11:32 am

ಮಂಗಳೂರು: ಮಂಗಳೂರಿನಲ್ಲಿ ಪರೀಕ್ಷೆಗೆ ಬರೆಯಲು ಬಂದ ಚಿಕ್ಕಮಗಳೂರಿನ ವಿದ್ಯಾರ್ಥಿ ಆಕಾಶ್ ಕಡೂರ್ (17)ಸಮುದ್ರ ಪಾಲಾದ ಘಟನೆ ಭಾನುವಾರ ಸಂಭವಿಸಿದೆ. ಚಿಕ್ಕಮಗಳೂರು ಜವಾಹರ್ ನವೋದಯ ವಿದ್ಯಾಲಯ ವಿದ್ಯಾರ್ಥಿಯಾದ ಈತ ಸ್ನೇಹಿತರ ಜತೆ ಪಣಂಬೂರು ಬೀಚ್‌ನಲ್ಲಿ ಈಜಲು ನೀರಿಗೆ ಇಳಿದಿದ್ದ. ನೀರಿನಲ್ಲಿ ಅಪಾಯದಲ್ಲಿ ಸಿಲುಕಿದ ಈತನನ್ನು ಜೀವರಕ್ಷಕ ತಂಡ ಸಾಹಸದಿಂದ ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸಿತು. ಅಷ್ಟರಲ್ಲಿ ದಾರಿ ಮಧ್ಯೆ ಮೃತಪಟ್ಟ ಎಂದು ಪಣಂಬೂರು ಪೊಲೀಸರಿಗೆ ದೂರು ನೀಡಲಾಗಿದೆ. ಆಕಾಶ್ 35 ಮಂದಿ ಸ್ನೇಹಿತರ ಜತೆ ಎಇಇಇ ಪರೀಕ್ಷೆಗೆ ಮಂಗಳೂರಿಗೆ ಆಗಮಿಸಿದ್ದನು. ಈ ಹಿಂದೆ, ಪಣಂಬೂರು ಬೀಚ್‌ನಲ್ಲಿ 2009ರಲ್ಲಿ ನೀರಿಗಿಳಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿತ್ತು.

ಪುತ್ತೂರು: ವ್ಯಕ್ತಿ ನಾಪತ್ತೆ
ಪುತ್ತೂರು:
ಒಂದೂವರೆ ತಿಂಗಳ ಹಿಂದೆ ತನ್ನ ಪತಿ ನಾಪತ್ತೆಯಾಗಿರುವ ಕುರಿತು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರದ ಮಹಿಳೆಯೊಬ್ಬರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಹಾಲಿದಾನ ಬಾರೆಬಟ್ಟು ನಿವಾಸಿ ಶೇಷಪ್ಪ ನಾಯ್ಕ (32) ನಾಪತ್ತೆಯಾಗಿದ್ದು, ಅವರ ಪತ್ನಿ ಗೀತಾ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಫೆ. 18ರಂದು ಬೆಳಗ್ಗೆ ತನ್ನ ಪತಿ ಶೇಷಪ್ಪ ನಾಯ್ಕ ಅವರು ಒಳಮೊಗ್ರು ಗ್ರಾಮದ ಕೈಕಾರ ಅಂಗನವಾಡಿ ಕೇಂದ್ರಕ್ಕೆ ಮಗುವನ್ನು ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟು ತನ್ನ ಮೊಬೈಲ್ ನಂಬರ್‌ನ್ನು ನೀಡಿ ಮಧ್ಯಾಹ್ನ ಮಗುವನ್ನು ಕರೆದುಕೊಂಡು ಹೋಗಲು ಅಂಗನವಾಡಿಯವರಲ್ಲಿ ತಿಳಿಸುವಂತೆ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ ಎಂದು ಗೀತಾ ತಿಳಿಸಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ವ್ಯಕ್ತಿಯ ಮಾಹಿತಿ ಇದ್ದಲ್ಲಿ ಸಂಪ್ಯ ಪೊಲೀಸ್ ಠಾಣೆಗೆ, ದೂ. 08251- 232102, 9480805363 ಗೆ ಮಾಹಿತಿ ನೀಡುವಂತೆ ಸಂಪ್ಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.

ಹೊಟೇಲ್ ಉದ್ಯಮಿ ದಂಪತಿ ನಾಪತ್ತೆ
ಪುತ್ತೂರು:
ಪುತ್ತೂರಿನ ಹೊಟೇಲ್ ಉದ್ಯಮಿಯೊಬ್ಬರು ತನ್ನ ಪತ್ನಿಯೊಂದಿಗೆ ದಿಢೀರ್ ನಾಪತ್ತೆಯಾಗಿದ್ದು, ಇದರಿಂದಾಗಿ ಆ ಹೊಟೇಲ್‌ನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದವರು ಕಂಗಾಲಾಗಿದ್ದಾರೆ. ಪುತ್ತೂರಿನ ಎಂ.ಟಿ. ರಸ್ತೆಯಲ್ಲಿರುವ ಪೂಜಾ ಹೊಟೇಲ್ ನಡೆಸುತ್ತಿದ್ದ, ಪ್ರಸ್ತುತ ಪುತ್ತೂರು ಪೇಟೆಯ ಹೊರವಲಯದ ಬನ್ನೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೊಂದಿದ್ದ, ಮೂಲತಃ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ನಿವಾಸಿ ಪ್ರಕಾಶ್ ಮೂರ್ತಿ ನಾಪತ್ತೆಯಾದವರು.
ಏ. 3ರಂದು ರಾತ್ರಿ ಹೊಟೇಲ್‌ನಿಂದ ಮನೆಗೆ ಹೋಗಿದ್ದ ಪ್ರಕಾಶ್ ಮೂರ್ತಿ ಅವರು ಮರುದಿನ ಹೊಟೇಲ್‌ಗೆ ಬಂದಿರಲಿಲ್ಲ. ಇದರಿಂದಾಗಿ ಆತಂಕಿತರಾದ ಹೊಟೇಲ್ ಕಾರ್ಮಿಕರು ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸುವ ಪ್ರಯತ್ನ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ. ಬಳಿಕ ಕಾರ್ಮಿಕರು ಅವರ ಬಾಡಿಗೆ ಮನೆಗೆ ತೆರಳಿ ಪರಿಶೀಲಿಸಿದಾಗ ಅವರ ಪತ್ನಿಯೂ ಮನೆಯಲ್ಲಿರಲಿಲ್ಲ. ಇದರಿಂದಾಗಿ ಅವರಿಬ್ಬರು ಜೊತೆಯಾಗಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪೂಜಾ ಹೊಟೇಲ್‌ನಲ್ಲಿ 5 ಮಂದಿ ಮಹಿಳೆಯರೂ ಸೇರಿ ಒಟ್ಟು 35 ಮಂದಿ ಕಾರ್ಮಿಕರಿದ್ದು, ಕಳೆದ ಎರಡು ತಿಂಗಳಿನಿಂದ ಅವರಿಗೆ ಸಂಬಳ ನೀಡಿರಲಿಲ್ಲ ಎನ್ನಲಾಗುತ್ತಿದ್ದು , ಸಾಲ ಬಾಧೆಯೇ ಅವರ ನಾಪತ್ತೆಗೆ ಕಾರಣ ಎಂಬ ಪ್ರಚಾರ ಹರಡಿದೆ. ನಾಪತ್ತೆಯ ಕುರಿತು ಹೊಟೇಲ್ ಕಾರ್ಮಿಕರು ಪುತ್ತೂರು ನಗರ ಪೊಲೀಸರಿಗೆ ಮೌಖಿಕ ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಅಪಘಾತ: ಲಾರಿ ಚಾಲಕ ಗಂಭೀರ
ಕಾಪು:
ಇಲ್ಲಿನ ಕೊಪ್ಪಲಂಗಡಿ ಬಳಿ ರಾಹೆ 66ರಲ್ಲಿ ಸ್ಕಾರ್ಪಿಯೋ, ಲಾರಿ ಮತ್ತು ಬೃಹತ್ ಕಂಟೈನರ್ ಮಧ್ಯೆ ಶನಿವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕ ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಭಟ್ಕಳದಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಸ್ಕಾರ್ಪಿಯೋ ಕಾರು, ವಿರುದ್ಧ ದಿಕ್ಕಿನಿಂದ ಬಂದ ಈ ಎರಡು ವಾಹನಗಳಿಗೆ ಡಿಕ್ಕಿ ಹೊಡೆಯಿತು. ಈ ಸಂದರ್ಭ ಲಾರಿ ಚಾಲಕ ಅರ್ಧ ಗಂಟೆಗೂ ಮಿಕ್ಕಿ ಲಾರಿಯೊಳಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾನೆ. ನುಜ್ಜುಗುಜ್ಜಾದ ಲಾರಿಯಲ್ಲಿ ಸಿಲುಕಿಕೊಂಡ ಚಾಲಕನನ್ನು ಸಾರ್ವಜನಿಕರು ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದೆರಡು ವಾಹನಗಳ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ.

ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು
ವಿಟ್ಲ:
ಮರದಿಂದ ಬಿದ್ದು ಗಾಯಗೊಂಡಿದ್ದ ಪೆರಾಜೆ ಗ್ರಾಮದ ವ್ಯಕ್ತಿಯೊಬ್ಬ ಭಾನುವಾರ ಬೆಳಗ್ಗೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಪೆರಾಜೆ ಗ್ರಾಮದ ಕೊಡಂಗೆ ನಿವಾಸಿ ಬಾಬು ಪೂಜಾರಿ ಎಂಬವರ ಪುತ್ರ ದಯಾನಂದ (23) ಮಾ. 31ರಂದು ನೇರಳೆ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಟ್ಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement