ಡಾ.ಪಂಡಿತಾರಾಧ್ಯ ಶ್ರೀಗಳಿಗೆ ಧ್ವನಿ ಶ್ರೀರಂಗ ಪ್ರಶಸ್ತಿ ಪ್ರದಾನ
ದುಬೈ: ಕನ್ನಡ ರಂಗಭೂಮಿಯ ಬೆಳವಣಿಗೆಗಾಗಿ ದುಡಿಯುತ್ತಿರುವ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಇತ್ತೀಚೆಗೆ 'ಧ್ವನಿ ಶ್ರೀರಂಗ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ದುಬೈನ ಎಮಿರೇಟ್ಸ್ ಥಿಯೇಟರ್ಸ್‌ನಲ್ಲಿ ಇತ್ತೀಚೆಗೆ ಧ್ವನಿ ಪ್ರತಿಷ್ಠಾನದ 28ನೇ ವಾರ್ಷಿಕೋತ್ಸವ ಮತ್ತು ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ಅವರು ಶ್ರೀಗಳಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿದ ಶ್ರೀಗಳು, ಸಕಲ ಕನ್ನಡ ರಂಗಕರ್ಮಿಗಳ ಪರವಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದಾಗಿ ಹೇಳಿದರು. ಅಲ್ಲದೆ, ದುಬೈನಲ್ಲಿ ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ನಡೆಸುತ್ತಿರುವ ರಂಗಚಟುವಟಿಕೆಗಳು ಶ್ಲಾಘನೀಯ ಎಂದರು.
ಇದೇ ವೇಳೆ ಬಸವರಾಜು ಅವರಿಗೂ ಮೈಸೂರು ಪೇಟ ತೋಡಿಸಿ, ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಉದ್ಯಮಿ ಶ್ರೀನಿವಾಸ ಶ್ರೀರಂಗಂ, ಅರಬ್ ಉಡುಪಿ ಗ್ರೂಪ್ ಹೊಟೇಲ್‌ನ ನಿರ್ದೇಶಕ ಸತೀಶ್ ವೆಂಕಟರಮಣ, ಫಾರ್ಚುನ್ ಗ್ರೂಪ್ ಹೊಟೇಲ್‌ನ ಆಡಳಿತ ನಿರ್ದೇಶಕ ಪ್ರವೀಣ ಶೆಟ್ಟಿ, ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಪಾಲ್ಗೊಂಡಿದ್ದರು. ಇದೇ ಸಮಾರಂಭದಲ್ಲಿ ಗೋಪಿನಾಥ್ ಅವರ 'ಪೋಂ ಪೋಂ ರೈಲು' ಕಥಾ ಸಂಕಲನವನ್ನು ಡಾ.ಪಂಡಿತಾರಾಧ್ಯ ಶಿವಾಚಾರ್ಯರು ಬಿಡುಗಡೆ ಮಾಡಿದರು.