ಪ್ರಾಣಿ ಬಾಧೆ ನಿವಾರಣೆಗೆ ವರಾಹ ಶಾಂತಿ
ಸುಬ್ರಹ್ಮಣ್ಯ: ಕೃಷಿ ಭೂಮಿಗೆ ಕಂಡುಬರುವ ವಿವಿಧ ಪ್ರಾಣಿಗಳ ಬಾಧೆ ನಿವಾರಣೆಗೆ ಲೋಕ ಕಲ್ಯಾಣಾರ್ಥವಾಗಿ ಇತ್ತೀಚೆಗೆ ಸುಳ್ಯ ತಾಲೂಕಿನ ಗುತ್ತಿಗಾರಿನ ವಳಲಂಬೆ ಕರುವಜೆ ಕೇಶವ ಜೋಯಿಸರ ಕೃಷಿ ಭೂಮಿಯಲ್ಲಿ ವರಾಹ ಶಾಂತಿ ನಡೆಯಿತು.
ಕೃಷಿಗೆ ಕಾಡುಪ್ರಾಣಿಗಳ ಹಾಗೂ ವಿವಿಧ ಕೀಟ ಬಾಧೆಗಳಿಂದ ಅಪಾರ ನಷ್ಟ ಸಂಭವಿಸುತ್ತಿದೆ. ಇದರ ನಿಯಂತ್ರಣಕ್ಕೆ ವಿವಿಧ ಪ್ರಯತ್ನ ಮಾಡಲಾಗುತ್ತಿದೆಯಾದರೂ ವೇದಗಳ ಮೂಲಕವೂ ಪರಿಹಾರ ತಿಳಿಸಲಾಗಿದೆ. ಬೋಧಾಯನ ಸೂತ್ರದಲ್ಲಿ ವರಾಹ ಶಾಂತಿ ಮೂಲಕ ಪರಿಹಾರ ಸೂಚಿಸಲಾಗಿದೆ. ಹೀಗಾಗಿ ಕರುವಜೆ ಕೇಶವ ಜೋಯಿಸರು ಲೋಕ ಕಲ್ಯಾಣಾರ್ಥವಾಗಿ ಈ ಶಾಂತಿ ಹವನ ನಡೆಸಿದರು. ಯಜ್ಞದ ಮೂಲಕ ಇವುಗಳ ನಿಯಂತ್ರಣ ಸಾಧ್ಯವಿದೆ , ಇದರ ಜತೆಗೆ ಧಾನ್ಯಗಳು, ಫಸಲು ಕೂಡಾ ಹೆಚ್ಚಾಗಲಿದೆ ಎಂದು ಕರುವಜೆ ಕೇಶವ ಜೋಯಿಸರು ಹೇಳುತ್ತಾರೆ.
ಈ ಹವನದಲ್ಲಿ ಒಟ್ಟು 12 ಬಗೆಯ ದ್ರವ್ಯಗಳನ್ನು ಬಳಸಲಾಗಿದೆ. ಈ ಹವನದ ಪ್ರಸಾದವನ್ನು ಕೃಷಿ ಭೂಮಿಗೆ ಬಳಸುವುದರಿಂದ ಕೃಷಿ ಭೂಮಿಯಲ್ಲಿ ಕಂಡುಬರುವ ಅರಶಿನ ರೋಗ ಮೊದಲಾದ ರೋಗಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ ಕೇಶವ ಜೋಯಿಸರು.