ಮನೆಗೆ ನುಗ್ಗಿ ವೃದ್ಧೆಗೆ ಹಲ್ಲೆ; ಚಿನ್ನದ ಸರ ದರೋಡೆ
ಉಪ್ಪಿನಂಗಡಿ: ಅಂಗವಿಕಲ ಮಗಳೊಂದಿಗೆ ವಾಸವಾಗಿರುವ ವೃದ್ಧೆಯ ಮನೆಗೆ ನೀರು ಕೇಳುವ ನೆಪದಲ್ಲಿ ಬಂದ ಅಪರಿಚಿತರು ವೃದ್ಧೆಗೆ ಹಲ್ಲೆಗೈದು, ವೃದ್ಧೆಯ ಕತ್ತಿನಲ್ಲಿದ್ದ ಎರಡು ಪವನ್ ತೂಕದ ಚಿನ್ನದ ಸರವನ್ನು ದರೋಡೆಗೈದ ಘಟನೆ ಆದಿತ್ಯವಾರ ನಸುಕಿನಲ್ಲಿ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ಹಳೇ ಗೇಟು ಎಂಬಲ್ಲಿ ಹೆದ್ದಾರಿ ಬದಿಯ ಮನೆಯೊಂದರಲ್ಲಿ ದಿವಂಗತ ನೇಮಿರಾಜ್ ಜೈನ್ ಎಂಬವರ ಪತ್ನಿ ಎಂಭತ್ತರ ಹರೆಯದ ವೃದ್ಧೆ ಸುಶೀಲಮ್ಮ ತನ್ನ ಪೋಲಿಯೋ ಪೀಡಿತೆಯಾಗಿ ಕಾಲ ಬಲಹೀನತೆಗೆ ತುತ್ತಾದ ಮಗಳೊಂದಿಗೆ ವಾಸವಾಗಿದ್ದು, ಆದಿತ್ಯವಾರ ನಸುಕಿನಲ್ಲಿ ಬೈಕೊಂದರಲ್ಲಿ ಬಂದ ಮೂವರು ತರುಣರು, ನೀರು ಕೇಳುವ ನೆಪದಲ್ಲಿ ಮನೆಯ ಬಾಗಿಲು ಬಡಿದಿದ್ದಾರೆ. ಮಾನವೀಯತೆಯಿಂದ ಮನೆಯ ಬಾಗಿಲು ತೆರೆದು ನೀರು ಕೊಡೋಣವೆಂದು ಹಿಂತಿರುಗಿದ ವೃದ್ಧೆಯ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಎರಡು ಪವನ್ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆಗಳತ್ತ ಗಮನ ಹರಿಸಿದ ದರೋಡೆಕೋರರು, ವೃದ್ಧೆ ಮೇಲೆ ಹಲ್ಲೆ ನಡೆಸಿ, ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಕಿತ್ತುಕೊಳ್ಳಲು ಮುಂದಾದಾಗ ವೃದ್ಧೆಯ ಕೂಗು ಕೇಳಿಸಿಕೊಂಡ ದಾರಿ ಹೋಕರೊಬ್ಬರು ಸಹಾಯಕ್ಕಾಗಿ ಬೊಬ್ಬೆ ಹೊಡೆದದನ್ನು ಕಂಡು ದರೋಡೆಕೋರರು ಪರಾರಿಯಾದರೆನ್ನಲಾಗಿದೆ.
ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಲಾಯಿತಾದರೂ ಪರಾರಿಯಾದ ದರೋಡೆಕೋರರನ್ನು ಪತ್ತೆಹಚ್ಚಿ ಹಿಡಿಯಲು ವಿಫಲತೀ ಸಾಧಿಸಲಾಯಿತು.