ರಾಷ್ಟ್ರಪತಿ ಪುತ್ರ ಅಭಿಜಿತ್ ರಾಜ್ಯದ ಮಂದಿರಗಳಿಗೆ ಭೇಟಿ
ಕ.ಪ್ರ. ವಾರ್ತೆ , ಮೈಸೂರು/ಚಾ.ಜನಗರ , ಏ.7
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಹಾಗೂ ಪಶ್ಚಿಮ ಬಂಗಾಳದ ಕಾಂಗ್ರೆಸ್ ಸಂಸದ ಅಭಿಜಿತ್ ಮುಖರ್ಜಿ ಮತ್ತು ಅವರ ಕುಟುಂಬದವರು ಭಾನುವಾರ ಜಿಲ್ಲೆಗಳ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅಭಿಜಿತ್ ಕುಟುಂಬ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಸಿದ್ದಲಿಂಗೇಶ್ವರಸ್ವಾಮಿ, ಚನ್ನಿಪುರದ ವೀರಭದ್ರಸ್ವಾಮಿ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇಗುಲ, ಬಳಿಕ ರಾಮಸಮುದ್ರ ಸಮೀಪದ ಹರಳುಕೋಟೆ ಜನಾರ್ದನಸ್ವಾಮಿ ಮತ್ತು ಆಂಜನೇಯಸ್ವಾಮಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ವಿವಿಧೆಡೆ ಕಳೆದೆರಡು ವರ್ಷಗಳಿಂದ ಮಳೆ-ಬೆಳೆಯಲ್ಲದೆ ಬರದ ಪರಿಸ್ಥಿತಿ ತಲೆದೋರಿದೆ. ಜತೆಗೆ ದೇಶದಲ್ಲಿ ಆಂತರಿಕವಾಗಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುವ ಸಲುವಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿದರು.
ಅಭಿಜಿತ್, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಶನಿವಾರ ರಾತ್ರಿ ಮೈಸೂರಿಗೆ ಆಗಮಿಸಿದರು. ಭಾನುವಾರ ವಿವಿಧ ಧಾರ್ಮಿಕ ಸ್ಥಳಗಳ ಭೇಟಿಯ ಬಳಿಕ ಬಿಆರ್ಟಿಯ ಕೆ.ಗುಡಿಯಲ್ಲಿ ವಾಸ್ತವ್ಯ ಹೂಡಲಿದ್ದು, ಸೋಮವಾರ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿ, ಮಂಡ್ಯದ ಮೇಲುಕೋಟೆ ದೇವಸ್ಥಾನದ ಸೇರಿದಂತೆ ಕರ್ನಾಟಕ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.