ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಮಳಲಿ
ಕನ್ನಡಪ್ರಭ ವಾರ್ತೆ , ಮೈಸೂರು , ಏ.7
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏ. 20ರಂದು ನಡೆಯಲಿರುವ ಅಖಿಲ ಕರ್ನಾಟಕ ಪ್ರಥಮ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮೈಸೂರು ವಿವಿಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಮಳಲಿ ವಸಂತಕುಮಾರ್ ಆಯ್ಕೆಯಾಗಿದ್ದಾರೆ.
ವಚನ ವಿಭೂತಿ, ಸಹಸ್ರ ಪುಟಗಳು, ವಚನ ವರ್ತಮಾನ ಮತ್ತಿತರ ಕೃತಿಗಳನ್ನು ರಚಿಸಿರುವ ಡಾ, ಮಳಲಿ ಅವರನ್ನು ಆಧುನಿಕ ವಚನಕಾರರೆಂದು ಕರೆಯುವುದಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಮೈಸೂರು ವಿವಿಯಲ್ಲಿ ಎಂಎ ಮುಗಿಸಿ, ಮದ್ರಾಸ್ನಲ್ಲಿ ಎಂ.ಫಿಲ್ ಪಡೆದವರು. ನಂತರ ಮಹಾರಾಜ ಹಾಗೂ ಯುವರಾಜ ಕಾಲೇಜಿನ ಅಧ್ಯಾಪಕರಾಗಿ, ಮಂಡ್ಯ ಹಾಗೂ ಹಾಸನದ ಸ್ನಾತಕೋತ್ತರ ಕೇಂದ್ರಗಳ ಸಂಯೋಜಕರಾಗಿ ಅದರ ಬೆಳಣಿಗೆಗೆ ಕಾರಣರಾಗಿದ್ದಾರೆ. ಕುವೆಂಪು ಅವರ ನಾಟಕಗಳನ್ನು ಕುರಿತು ಪಿಎಚ್.ಡಿ ಪಡೆದಿದ್ದಾರೆ. ಪ್ರಸ್ತುತ ವಿಶ್ರಾಂತ ಪ್ರಾಧ್ಯಾಪಕರಾಗಿದ್ದರೂ ಮೈಸೂರು ವಿವಿಯಲ್ಲಿ ಎಂ.ಫಿಲ್ ತರಗತಿಗೆ ಬೋಧಿಸುತ್ತಿದ್ದಾರೆ.
ಹಾಸನ ಜಿಲ್ಲೆಯ ಮಳಲಿ ಇವರ ಹುಟ್ಟೂರು. ತಂದೆ ಪಟೇಲ್ ಚಿಕ್ಕೇಗೌಡ, ತಾಯಿ ದೇವಮ್ಮ. ಇವರ ತವರೂರಿನಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಆಯ್ಕೆಯಾಗಿರುವುದು ವಿಶೇಷ. ಹಾಸನದ ಜಿಲ್ಲಾ ವಚನ ಸಾಹಿತ್ಯ ಪರಿಷತ್ ಹಾಗೂ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಏ. 20ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಸಮ್ಮೇಳನ ನಡೆಯಲಿದ್ದು, ಇದರ ಅಧ್ಯಕ್ಷರಾಗಿ ಡಾ. ಮಳಲಿ ವಸಂತಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ ಅಧ್ಯಕ್ಷ ತಿ. ರಾಮಕೃಷ್ಣಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ನಾಯಕರಹಳ್ಳಿ ಮಂಚೇಗೌಡ ತಿಳಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಸಮ್ಮೇಳನ ಉದ್ಘಾಟಿಸುವರು.