ಆತ್ಮೀಯ ಧಾಟಿಯಲ್ಲಿ ರಚಿಸಿದ ಸಾಹಿತ್ಯ ಹೊಸ
ಪುತ್ತೂರು: ಸಾಹಿತ್ಯ ಪ್ರಕಾರದ ಚೌಕಟ್ಟನ್ನು ಮೀರಿ ಆತ್ಮೀಯ ಧಾಟಿಯಲ್ಲಿ ರಚಿಸಿದ ಸಾಹಿತ್ಯ ಹೊಸ ಓದುಗರನ್ನು ತಲುಪಲು ಸಾಧ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಪುತ್ತೂರು ಘಟಕದ ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ ಅಭಿಪ್ರಾಯಪಟ್ಟರು.
ಅವರು ಪುತ್ತೂರಿನ ಅನುರಾಗ ವಠಾರದಲ್ಲಿ ಕೆನರಾ ಬ್ಯಾಂಕ್ನ ನಿವೃತ್ತ ಪ್ರಬಂಧಕ ನಲ್ಕ ಗೋಪಾಲಕೃಷ್ಣ ಆಚಾರ್ ಅವರ 'ನನ್ನ ಯಾತ್ರೆ ಮತ್ತು ಪ್ರವಾಸಗಳು' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಗೋಪಾಲಕೃಷ್ಣ ಆಚಾರ್ಯರು ಇಂತಹ ಬರವಣಿಗೆ ಮೂಲಕ ಕೃತಿಯನ್ನು ನಿರ್ಮಿಸಿ ಹೊಸ ಓದುಗರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ ಆಚಾರ್ಯರ ಪ್ರವಾಸಾನುಭವಗಳ ಈ ಟಿಪ್ಪಣಿಗಳಲ್ಲಿ ಭವ್ಯ ಭಾರತದ ಚಿತ್ರ ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ.ವಿ.ಬಿ. ಅರ್ತಿಕಜೆ ಮಾತನಾಡಿ, ಲೇಖಕರು ಮಾನವೀಯ ಸಂಬಂಧಗಳನ್ನು ಪ್ರವಾಸ ಕಥನದಲ್ಲಿ ಹೇಳಿರುವುದು ಪ್ರಸ್ತುತ ಎಂದರು.
ಈ ಸಂದರ್ಭದಲ್ಲಿ ಲೇಖಕ ಗೋಪಾಲಕೃಷ್ಣ ಆಚಾರ್ 10 ಪುಸ್ತಕಗಳನ್ನು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಅವರಿಗೆ ಹಸ್ತಾಂತರಿಸುವ ಮೂಲಕ ಕರ್ನಾಟಕ ಸಂಘಕ್ಕೆ ನೀಡಿದರು. ಪ್ರೊ. ಹರಿನಾರಾಯಣ ಮಾಡಾವು ಕೃತಿ ಪರಿಚಯ ಮಾಡಿದರು.
ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ಎ.ವಿ.ನಾರಾಯಣ, ನಿವೃತ್ತ ಮುಖ್ಯ ಶಿಕ್ಷಕ ಬಿ. ಐತ್ತಪ್ಪ ನಾಯ್ಕ ಉಪಸ್ಥಿತರಿದ್ದರು.
ನಲ್ಕ ಗೋಪಾಲಕೃಷ್ಣ ಆಚಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉದಯ ಆಚಾರ್ ವಂದಿಸಿದರು. ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.