ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಯುವ ಉದ್ಯಮಿ ಬರ್ಬರ ಕೊಲೆ

Vishwanath S
Updated On : 9 Apr 2013, 11:20 am

ಮಂಗಳೂರು: ವಿದೇಶದಲ್ಲಿ ಕುಳಿತು ಆಬ್ಬರಿಸುತ್ತಿರುವ ಭೂಗತ ಪಾತಕಿಗಳ ಪ್ರತೀಕಾರಕ್ಕೆ ವೆಲೆನ್ಸಿಯಾ ಬಾರ್ ಮುಂದೆ ಮತ್ತೊಂದು ಹೆಣ ಬಿದ್ದಿದೆ.
 ಮಂಗಳಾ ಬಾರ್ ಮುಂಭಾಗದಲ್ಲಿ ಬಲ್ಮಠ ಆದಿನಾಥೇಶ್ವರ ರೋಡ್‌ಲೈನ್ಸ್ ಸಂಸ್ಥೆ ಉಸ್ತುವಾರಿ ಪಚ್ಚು ಯಾನೆ ಪ್ರಶಾಂತ (32) ಎಂಬರನ್ನು ಸೋಮವಾರ ಮಧ್ಯರಾತ್ರಿ ಗುಂಡು ಹಾರಿಸಿ, ತಲವಾರ್‌ಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದೆ.  
 ರೋಡ್‌ಲೈನ್ಸ್ ಮಾಲೀಕ ಸುಜಿತ್ ಆಳ್ವರ ಟೋಯೋಟಾ ಫಾರ್ಚೂನ್ ಕಾರಿನಲ್ಲಿ ಮಂಗಳಾ ಬಾರ್ ಎದುರು ರಾತ್ರಿ 11.40ಕ್ಕೆ ಕಾರು ಹತ್ತುತ್ತಿರುವ ವೇಳೆಗೆ ಗುಂಡಿಟ್ಟು ದಾಳಿ ಮಾಡಿದ್ದಾರೆ. ಆದರೂ ಕೀ ಬಳಸಿ ಕಾರು ಸ್ಟಾರ್ಟ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಜೀವಭಯದಿಂದ ಪ್ರಶಾಂತ್‌ಗೆ ಸಾಧ್ಯವಾಗಿಲ್ಲ. ಈ ವೇಳೆಗೆ 7,8 ಮಂದಿ ಹಂತಕರು ಕಾರಿನ ಗ್ಲಾಸ್ ಪುಡಿ ಮಾಡಿ ತಲವಾರ್, ಲಾಂಗ್ ಮಚ್ಚುಗಳಿಂದ ದಾಳಿ ನಡೆಸತೊಡಗಿದಾಗ ಕಾರು ಬಿಟ್ಟು ಹೊರಗೆ ಓಡಿದ್ದಾರೆ. ತಲೆ ಮೇಲೆ ತಲವಾರು ಬೀಸುತ್ತಿರುವಾಗ ಕೈ ಅಡ್ಡ ಹಿಡಿಯುತ್ತಿದ್ದ ಕಾರಣ ಅಂಗೈಗಳು ಕೊಚ್ಚಿ ಹೋಗಿವೆ. ಏಟು ಬೀಳುತ್ತಿದ್ದರೂ ಮಂಗಳಾ ಬಾರ್ ಮುಂಭಾಗದ ವರೆಗೆ ಓಡಿದ್ದಾರೆ. ಹಂತಕರು ಯದ್ವಾ ತದ್ವಾ ಹೊಡೆಯುತ್ತಲೇ ಬಂದಿದ್ದಾರೆ. ಬಿದ್ದ ಮೇಲೆ ತಲೆಗೆ ಕಲ್ಲೆತ್ತಿ ಹಾಕಿ ಪರಾರಿಯಾಗಿದ್ದಾರೆ. ಕಾರು ಸಂಪೂರ್ಣ ರಕ್ತಸಿಕ್ತವಾಗಿದ್ದು, ರಕ್ತದೋಕುಳಿ ಕಾರಿನ ಹೊರಗೂ ಹರಿದಿದೆ. ಕಾರಿನ ಕೀ ಶವದ ಪಕ್ಕ ಪತ್ತೆಯಾಗಿದೆ. 9 ಎಂಎ ಪಿಸ್ತೂಲ್ ಬುಲೆಟ್‌ಗಳು ಸ್ಥಳದಲ್ಲಿ ಪತ್ತೆಯಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆದಿದೆ. ಪ್ರಶಾಂತ್ ಸೋಮವಾರ ಪೊಳಲಿ ಜಾತ್ರೆಗೆ ತೆರಳಿದ್ದರು. ರಾತ್ರಿ 11 ಗಂಟೆಗೆ ಪ್ರಶಾಂತ್ ಮೊಬೈಲ್‌ಗೆ ಕರೆ ಬಂದಿದೆ. ಬರುತ್ತಿದ್ದೇನೆ ಎಂದು ಹೇಳಿದ ಪ್ರಶಾಂತ್ ಕಾರು ಹತ್ತಿ ವೆಲೆನ್ಸಿಯಾಕ್ಕೆ ತೆರಳಿದ್ದರು. ವೆಲೆನ್ಸಿಯದಲ್ಲಿ ಪ್ರಶಾಂತನಿಗೆ ಗೆಳೆತಿ ಇದ್ದು, ಅಲ್ಲಿಗೆ ಆಗಾಗ ಹೋಗುತ್ತಿದ್ದರು. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
15 ಮಂದಿವಿಚಾರಣೆ
ಮಂಗಳೂರು:  ಪ್ರಶಾಂತ್ ಯಾನೆ ಪಚ್ಚು ಕೊಲೆಗೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು 15 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಬಳಸಿದ ವಾಹನ ಕ್ವಾಲಿಸ್ ಅಥವಾ ಸುಮೊ ಎಂಬದು ಇನ್ನೂ ತಿಳಿದು ಬಂದಿಲ್ಲ. ಮಂಗಳಾ ಬಾರ್ ಎದುರುಗಡೆಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಮೂಡಿ ಬಂದಿರಬಹುದು ಎಂಬ ಆಸೆ ಇದ್ದಿತ್ತಾದರೂ ಪೊಲೀಸರು ಇಂಥ ಯಾವುದೇ ಸೀಡಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಪ್ರತೀಕಾರದ ಕೊಲೆಗಳು
2009ರ ಮೇ 1ರಂದು ಬಿಜೈ ರಾಜ ಹಣಕಾಸು ವಿಚಾರಕ್ಕೆ ಸಂಬಂಧಿಸಿ ತನ್ನ ಕ್ರೈಂ ಗುರು ಪಾಂಡು ಪೈಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕಂಠಮಟ್ಟ ಕುಡಿಸಿ ಹತ್ಯೆ ಮಾಡಿದ್ದ.
  ಜೈಲ್‌ಗೆ ಹೋದ ಬಳಿಕ ಜಾಮೀನು ಪಡೆದು ಹೊರಬಂದಿದ್ದ. 2012ರ ಡಿಸೆಂಬರ್ 1ರ ನಡುರಾತ್ರಿ ಫಳ್ನೀರು ವೆಸ್ಟ್‌ಗೇಟ್ ಕಟ್ಟಡ ಡ್ಯಾನಿಶ್ ಹೊಟೇಲ್ ಎದುರು ಬಿಜೈ ರಾಜ ಯಾನೆ ಶೈಲೇಶ್‌ನನನ್ನು ರವಿಪೂಜಾರಿ ಸೂಚನೆಯಂತೆ ಪ್ರದೀಪ್ ಮೆಂಡನ್ ಗ್ಯಾಂಗ್ ಕಗ್ಗೊಲೆ ನಡೆಸಿ ಪರಾರಿಯಾಗಿತ್ತು. ಮೆಂಡನ್ ಮತ್ತು ಇತರ ಆರೋಪಿಗಳು ಈಗ ಮಡಿಕೇರಿ ಜೈಲ್‌ನಲ್ಲಿದ್ದಾರೆ.ಇದರ ಮುಂದುವರಿದ ಭಾಗವಾಗಿ ವಿಕ್ಕಿ ಶೆಟ್ಟಿ ಇಶಾರೆಯಂತೆ ಈಗ ಪ್ರಶಾಂತ್ ಕೊಲೆಯಾಗಿದೆ.
ಪಚ್ಚು ಪಾತ್ರ ಏನು ?
ಪ್ರಶಾಂತ್, ಮರಕಡದ ಸುಂದರ ಎಂಬವರ ಪುತ್ರ. ಬಿಜೈ ರಾಜನ ಕೊಲೆಯಲ್ಲಿ ಪ್ರಶಾಂತ್ ಪಾತ್ರ ಇದೆ ಎನ್ನುವುದು ವಿಕ್ಕಿ ಶೆಟ್ಟಿ ತಿಳಿದುಕೊಂಡು ಹತ್ಯೆ ನಡೆಸಿದ್ದಾನೆ.
  ಕೊಲೆಗೆ ಮುನ್ನ ಹಂತಕರ ಜತೆ ಪಾರ್ಟಿ ಮಾಡಿರುವುದು ಮತ್ತು ಹಣಕಾಸು ನೆರವು ಒದಗಿಸಿರುವುದು. ತಪ್ಪಿಸಿಕೊಳ್ಳಲು ವಾಹನವನ್ನು ಪಚ್ಚು ನೀಡಿದ್ದಾನೆ ಎಂಬ ಆರೋಪ ಇದೆ. ಅವರು ಕೊಲೆ ಮಾಡಿದ್ದಾರೆ ಎಂದು ಗೊತ್ತಿರಲಿಲ್ಲ, 'ಕೇವಲ ಲಿಫ್ಟ್ ನೀಡಿದ್ದೇನೆ, ಹತ್ಯೆಯಲ್ಲಿ ನನ್ನ ಪಾತ್ರ ಇಲ್ಲ' ಎಂದು ಪೊಲೀಸರ ಬಳಿ ವಿಚಾರಣೆ ವೇಳೆ ಪಚ್ಚು ಹೇಳಿದ್ದ ಎಂದು ಆತನ ಗೆಳೆಯರು ಹೇಳುತ್ತಾರೆ. ಆದರೆ ಆಡಳಿತ ಪಕ್ಷದವರ ಪ್ರಭಾವ ಪಚ್ಚು ಮೇಲೆ ಇದ್ದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪೊಲೀಸರ ವೈಫಲ್ಯ ?
ಬಿಜೈ ರಾಜ ಕೊಲೆ ಪ್ರಕರಣದಲ್ಲಿ ಪೊಲೀಸರು ಪ್ರಭಾವಕ್ಕೆ ಮಣಿಯದೆ ಸೂಕ್ತ ರೀತಿಯಲ್ಲಿ ತನಿಖೆ ಮಾಡಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲ. ಬಂಧಿಸಿ ಜೈಲ್‌ನಲ್ಲಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು.ಆದರೆ ತನಿಖೆಯಿಂದ ಹೊರಬಂದರೂ ಭೂಗತ ಪಾತಕಿಯ ಜಾಲದಿಂದ ಬದುಕುಳಿಯಲು ಸಾಧ್ಯವಾಗಿಲ್ಲ.
ನಗರದಲ್ಲಿ ಪೊಲೀಸರ ಧಾರಾಳಿಯಾಗುತ್ತಿದ್ದು, ಬಾರ್, ಪಬ್, ಇಸ್ಪಿಟ್, ಜುಗಾರಿ, ಬೆಟ್ಟಿಂಗ್ ಮತ್ತು ಕ್ರಿಮಿನಲ್ ರಾಜಾರೋಶವಾಗಿ ನಡೆಯುತ್ತಿದೆ. ಪೊಲೀಸರು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ನನ್ನ ಹುಡುಗರೇ ಕೊಂದರು: ವಿಕ್ಕಿ
ತನ್ನ ಆತ್ಮೀಯ ಬಿಜೈ ರಾಜನನ್ನು ಕೊಂದವರನ್ನು ಎಂದಿಗೂ ಬಿಡುವುದಿಲ್ಲ ಎಂದು ರಾಜನ ಕೊಲೆಯಾದ ಮರುದಿನ ಸುದ್ದಿವಾಹಿನಿಗೆ ಕರೆ ಮಾಡಿ ಹೇಳಿದ್ದ. ಸೋಮವಾರ ಮತ್ತೆ ಮಾಧ್ಯಮಕ್ಕೆ ಕರೆ ಮಾಡಿ ತಾನೇ ಕೊಂದಿರುವುದಾಗಿ ತಿಳಿಸಿದ್ದಾನೆ. ರಾಜನ ಕೊಲೆಯಲ್ಲಿ ಪ್ರಶಾಂತ್ ಸಹಕಾರ ನೀಡಿದ್ದ, ಪೊಲೀಸರ ತನಿಖೆಯಲ್ಲಿ ಹೊರಬರಲಿಲ್ಲ. ಆದರೆ ಆತನ ಸಹಕಾರ ಎಷ್ಟಿತ್ತು ಎನ್ನುವುದು ನನಗೆ ಗೊತ್ತಾಗಿದೆ. ಘಟನೆ ನಡೆದ ದಿನವೇ ಮುಹೂರ್ತ ರೆಡಿ ಮಾಡಿದ್ದೆ. ಕಾಲ ಈಗ ಕೂಡಿಬಂತು ಎಂದು ಗುಡುಗಿದ್ದಾನೆ.
ವಿಕ್ಕಿ ಶೆಟ್ಟಿ, ರಾಜ ಸ್ನೇಹ
ಬ್ಯಾಂಕಾಂಕ್‌ನ ಡಾನ್ ವಿಕ್ಕಿ ಶೆಟ್ಟಿ. ಚೋಟಾರಾಜನ್ ಬಣದವರ ಹತ್ಯೆಯಲ್ಲಿ ವಿಕ್ಕಿ ಪಾತ್ರ ದೊಡ್ಡದಿದೆ.ಬ್ಯಾಂಕಾಕ್‌ನ ಭರತ್ ನೇಪಾಳಿ ಹತ್ಯೆಯಲ್ಲಿಯೂ ವಿಕ್ಕಿ ಶೆಟ್ಟಿ ಹೆಸರಿದೆ. 7 ವರ್ಷದ ಹಿಂದೆ ಮುಂಬೈ ಪೊಲೀಸರು ವಿಕ್ಕಿ ಶೆಟ್ಟಿ  ಬೆನ್ನು ಬಿದ್ದಾಗ ತಪ್ಪಿಸಿಕೊಂಡು ಮಂಗಳೂರಿಗೆ ಬಂದಿದ್ದ. ಬಿಜೈ ಪ್ಲ್ಯಾಟ್‌ನಲ್ಲಿದ್ದಾಗ ಬಿಜೈ ರಾಜ ಯಾನೆ ಶೈಲೇಶ್ ಗೆಳತನ ಬಳೆದಿತ್ತು.
ಗಾಯದ ಲೆಕ್ಕ ಮಾಡಿ
ಬಿಜೈ ರಾಜನನ್ನು ಪ್ರದೀಪ್ ಮೆಂಡನ್ ಗ್ಯಾಂಗ್ ಕೊಚ್ಚಿ ಕೊಂದ ಗಾಯಗಳಿಗಿಂತ ಹೆಚ್ಚಿನ ಗಾಯ ಪ್ರಶಾಂತ್ ದೇಹದಲ್ಲಿ ಆಗಿರಬೇಕು ಎಂಬ ಹಠಕ್ಕೆ ಕೊಚ್ಚಿ, ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ದೇಹದ ಮೇಲಿನ ಗಾಯದ ಲೆಕ್ಕ ಪೊಲೀಸರು ತೆಗೆಯಲಿ ಎಂದು ವಿಕ್ಕಿ ಶೆಟ್ಟಿ ಕರೆ ಮಾಡಿ ಹೇಳಿದ್ದಾನೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement