ವಿದ್ಯುತ್ ಕಡಿತ ಮುಂದುವರಿದರೆ ಬಂದ್
ಮಂಗಳೂರು: ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುವ ವಿರುದ್ಧ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟಕರು ಪಾಂಡೇಶ್ವರ ಮೆಸ್ಕಾಂ ಎದುರು ಸೋಮವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಎಸ್ಎಸ್ಎಲ್ಸಿ, ಪದವಿ ಪರೀಕ್ಷೆಗಳು ನಡೆಯುತ್ತಿದ್ದು, ರಾತ್ರಿ ಮತ್ತು ಬೆಳಗ್ಗಿನ ಹೊತ್ತು ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಂಧಕಾರಕ್ಕೆ ಸಿಲುಕಿದೆ. ಕಡಬದ ಕೊಯ್ಲ ಗ್ರಾಮದ 20 ಅಡಿಕೆ ಬೆಳೆಗಾರರ ಪಂಪುಸೆಟ್ ಕಿತ್ತು ಹಾಕಿ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಕಾರರು ಕಚೇರಿಯೊಳಗೆ ಬಂದು ನೇರವಾಗಿ ಮಾತನಾಡುವಂತೆ ವ್ಯವಸ್ಥಾಪಕರು ಅಧಿಕಾರಿಗಳ ಬಳಿ ಹೇಳಿ ಕಳುಹಿಸಿದರೂ ಪಟ್ಟು ಬಿಡದ ರೈತರು, 'ನಾವಿದ್ದಲ್ಲಿಗೆ ಬರಲಿ, ನಾವು ರೈತರು, ಬಿಸಿಲಿನ ತಾಪ ಗೊತ್ತಿದೆ, ಎಸಿಯಲ್ಲಿ ಕುಳಿತ ಅವರಿಗೂ ರೈತರ ಕಷ್ಟ ಅರಿವಾಗಲಿ' ಎಂದರು.
ಹೊರಗೆ ಬಂದ ವ್ಯವಸ್ಥಾಪಕರು, ಮುಖಂಡರಲ್ಲಿ ಮಾತುಕತೆ ನಡೆಸಿದರು.
ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಹಗಲು ಮತ್ತು ರಾತ್ರಿ ವಿದ್ಯುತ್ ಕಡಿತ ತಪ್ಪಿಸಲು ಪ್ರಯತ್ನಿಸುತ್ತೇವೆ. ಅಡಿಕೆ ಬೆಳೆಗಾರರನ ಪ್ರಕರಣದಲ್ಲಿ ಮಂಗಳವಾರ ಸಂಜೆಯೊಳಗೆ ಮೆಸ್ಕಾಂ ತಾಂತ್ರಿಕ ನಿರ್ದೇಶಕರ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಕಣಗಲ್ ಮೂರ್ತಿ, ಉಡುಪಿ ಜಿಲ್ಲಾ ಘಟಕದ ಶಶಿಧರ ಶೆಟ್ಟಿ, ರವಿಕಿರಣ ಪುಣಚ, ಪ್ರಶಾಂತ್ ಶೆಟ್ಟಿ, ಐತಪ್ಪ ಪೂಜಾರಿ, ಕಾರ್ಮಿಕ ಸಂಘದ ಸುದತ್ತ್ ಜೈನ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದಿನಕರ ಶೆಟ್ಟಿ, ಶಶಿಧರ ಶೆಟ್ಟಿ, ನಿಡ್ಡೋಡಿ ಬಳಕೆದಾರರ ವೇದಿಕೆ, ಜಮಾಅತೆ ಇಸ್ಲಾಮಿ ಹಿಂದ್ ಯುವ ಘಟಕ ಮುಂತಾದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೇಡಿಕೆಗಳು...
- ದ.ಕ., ಉಡುಪಿ ಜಿಲ್ಲೆಯಲ್ಲಿ ಯಾವತ್ತೂ ವಿದ್ಯುತ್ ಕಡಿತಗೊಳಿಸಬಾರದು. -ಅನಿವಾರ್ಯ ವಿದ್ಯುತ್ ಕಡಿತವಿದ್ದರೆ ವೇಳಾಪಟ್ಟಿ ಮೊದಲೇ ಬಿಡುಗಡೆಗೊಳಿಸಬೇಕು.
- ಮಕ್ಕಳಿಗೆ ಪರೀಕ್ಷೆ ಸಮಯವಾಗಿದ್ದು, ರಾತ್ರಿ ಹಾಗೂ ಬೆಳಗ್ಗಿನ ಹೊತ್ತು ವಿದ್ಯುತ್ ಕಡಿತಗೊಳಿಸಬಾರದು.
- ಜೋಗದಿಂದ ಹಿಂದಿನಂತೆ ಅವಿಭಜಿತ ಜಿಲ್ಲೆಗೆ ವಿದ್ಯುತ್ ಸರಬರಾಜು ಮಾಡಬೇಕು.
- ಕಾನೂನು ಬಾಹಿರವಾಗಿ ಸ್ಥಾಪಿತವಾದ ಯುಪಿಸಿಎಲ್ ಜಿಲ್ಲೆಯಿಂದ ಸ್ಥಳಾಂತರಿಸಬೇಕು.
- ರೈತರ ಪಂಪ್ಸೆಟ್ಗಳನ್ನು ಕೀಳಬಾರದು.
- ರೈತರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ವಾಪಾಸ್ ಪಡೆಯಬೇಕು.