ಕನ್ನಡ ತಂತ್ರಾಂಶ ಸಮಸ್ಯೆ ನೀಗಿಸಿದ ಕೆ.ಪಿ.ರಾವ್ ಶ್ರಮ
ಮಂಗಳೂರು: ಆಂಗ್ಲ ಸಾಫ್ಟ್ವೇರ್ನಲ್ಲಿ ಕನ್ನಡ ತಂತ್ರಾಂಶ ಸಮಸ್ಯೆಯನ್ನು ಮೊದಲಾಗಿ ನೀಗಿಸಿದ್ದಲ್ಲದೆ, ಕಂಪ್ಯೂಟರ್ಗೆ ಭಾರತೀಯ ಭಾಷೆ ಅಳವಡಿಸಿದ ನಾಡೋಜ ಕೆ.ಪಿ.ರಾವ್ ಶ್ರಮ ಶ್ಲಾಘನೀಯ ಎಂದು ಭಾರತೀಯ ಕಂಪ್ಯೂಟರ್ ತಂತ್ರಾಂಶ ಸಮಿತಿ ಸದಸ್ಯ, ಅಂಕಣಕಾರ ಡಾ.ಯು.ಬಿ.ಪವನಜ ಹೇಳಿದ್ದಾರೆ.
ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಮಂಗಳವಾರ ಭಾರತೀಯ ಭಾಷಾ ಪಿತಾಮಹ ನಾಡೋಜ ಕೆ.ಪಿ. ರಾವ್ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
1970ರಲ್ಲಿ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಅಚ್ಚಿನ ಮೊಳೆ ಜೋಡಿಸುತ್ತಿದ್ದರು. ಆಗ ಕೆ.ಪಿ.ರಾವ್ ಬಳಿ ಸಿಂಧೂ ಲಿಪಿ ಸಂಶೋಧನೆ ಕುರಿತ ಪುಸ್ತಕ ಮುದ್ರಣಕ್ಕೆ ಒಬ್ಬರು ಬಂದಿದ್ದರು. ಆಗ ಅಚ್ಚಿನ ಮೊಳೆ ಜೋಡಿಸುವ ಬದಲು ಕಂಪ್ಯೂಟರ್ನಲ್ಲಿ ಯಾಕೆ ಲಿಪಿ ಸಂಶೋಧಿಸಬಾರದು ಎಂದು ಯೋಚಿಸಿ ಲಿಪಿ ಅನ್ವೇಷಣೆಗೆ ಕೆ.ಪಿ.ರಾವ್ ಮುಂದಾದರು. ಭಾರತೀಯ ಭಾಷೆಯನ್ನು ಕಂಪ್ಯೂಟರ್ ಅಕ್ಷರಕ್ಕೆ ಅಳವಡಿಸಿದವರಲ್ಲಿ ಮೊದಲಿಗರು ಕೆ.ಪಿ.ರಾವ್ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಡೋಜ ಕೆ.ಪಿ.ರಾವ್, ಈಗ ಗಣಕಯಂತ್ರ ಎಲ್ಲರ ಬಳಿಗೆ ಬಂದಿದ್ದು, ಗಣಕಯಂತ್ರದೊಡಗಿನ ತನ್ನ ಒಡನಾಟವನ್ನು ಮೆಲುಕು ಹಾಕಿದರು.
ಭಾಷಾ ಸಂವಹನಕ್ಕೆ ಕಂಪ್ಯೂಟರ್ ಉತ್ತಮ ಮಾಧ್ಯಮವಾಗಿದ್ದು, ಗಣಕದಲ್ಲಿ ಭಾರತೀಯ ಭಾಷೆಗಳನ್ನು ಅಭಿವೃದ್ಧಿಪಡಿಸಿರುವುದು ವಿಶೇಷ ಕೊಡುಗೆಯಾಗಿದೆ. ಆದಷ್ಟು ಆಂಗ್ಲ ಸಾಫ್ಟ್ವೇರ್ನಲ್ಲಿ ಕನ್ನಡ ತಂತ್ರಾಂಶ ಬಳಕೆಯ ವಿವಿಧ ಸಮಸ್ಯೆಗಳನ್ನು ನೀಗಿಸಬೇಕು. ಸಾಧ್ಯವಾದಷ್ಟು ಹೊಸತನಕ್ಕೆ ತೆರೆದುಕೊಳ್ಳಬೇಕು. ತನ್ನ ಈ ಸಾಧನೆಗೆ ಆಗ ಹಂಪಿ ವಿವಿ ಪ್ರೋತ್ಸಾಹ ನೀಡಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ತಾನು ಅಭಿವೃದ್ಧಿಪಡಿಸಿದ ಕನ್ನಡ ತಂತ್ರಾಂಶಕ್ಕೆ ಪೇಟೆಂಟ್ ಮಾಡದೆ ಮುಕ್ತವಾಗಿ ಬಿಟ್ಟಿದ್ದೇನೆ ಎಂದು ಹೇಳಿದರು.
ವಿಕಿ ಪೀಡಿಯಾ ಸಂಪಾದಕರಾಗಿ!: ವಿಕಿ ಪೀಡಿಯಾಗೆ ಮಾಹಿತಿ ಅಪ್ಲೋಡ್ ಮಾಡುವ ಕುರಿತು ಮಾತನಾಡಿದ ಡಾ.ಯು.ಬಿ.ಪವನಜ, ಭಾರತೀಯ ಭಾಷೆಯಲ್ಲಿ ವಿಕಿ ಪೀಡಿಯಾಕ್ಕೆ ಮಾಹಿತಿ ಅಪ್ಲೋಡ್ ಮಾಡುವವರ ಸಂಖ್ಯೆ 2 ಸಾವಿರ. ಕನ್ನಡದಲ್ಲಿ 350 ಮಂದಿ ಇದ್ದು, 13 ಸಾವಿರ ಲೇಖನಗಳನ್ನು ಹಾಕಲಾಗಿದೆ. ನಿರಂತರ ಕಾರ್ಯನಿರ್ವಹಿಸುವರರು ಮೂರೇ ಮಂದಿ. 2003ರಲ್ಲಿ ವಿಕಿ ಪೀಡಿಯಾ ವಿಶ್ವಕೋಶ ಪ್ರಾರಂಭವಾಗಿದ್ದು, ತಾನು 5ನೇ ಸಂಪಾದಕ. ವಿಕಿ ಪೀಡಿಯಾಗೆ ಮಾಹಿತಿಯನ್ನು ನಿಖರ ದಾಖಲೆ ಸಹಿತ ಅಪ್ಲೋಡ್ ಮಾಡಿದರೆ ಸಂಶೋಧನಾ ಚಟುವಟಿಕೆಗೆ ಸಹಾಯ ವಾಗುತ್ತದೆ. ಕನ್ನಡದಲ್ಲಿನ ಅನೇಕ ಮಹತ್ವದ ಸಂಗತಿಯನ್ನು ವಿಕಿ ಪೀಡಿಯಾದಲ್ಲಿ ಅಳವಡಿಸಬಹುದು. ಇದಕ್ಕಾಗಿ ಅಲ್ಲಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಭಂಡಾರಿ ಫೌಂಡೇಶನ್ ಟ್ರಸ್ಟ್ ನಿರ್ದೇಶಕ ಪ್ರಭಾಕರ ಅವರು ಕೆ.ಪಿ.ರಾವ್ರನ್ನು ಸನ್ಮಾನಿಸಿದರು. ಇದೇ ಸಂದರ್ಭ 'ಸ್ಟೂಡೆಂಟ್ಸ್ ವಿಕಿ ಕ್ಲಬ್'ಗೆ ಚಾಲನೆ ನೀಡಲಾಯಿತು. ಕಾಲೇಜಿನ ಡಾ. ಬಿ.ಎನ್. ಕರ್ಕೇರ, ಪ್ರಾಂಶುಪಾಲ ಉಮೇಶ್ ಭೂಷಿ, ಸಂಶೋಧನಾ ಡೀನ್ ಡಾ.ಲೆನಿಹಾನ್ ಹಾಜರಿದ್ದರು.