ಚುನಾವಣೆಗೆ ಗುಜರಾತ್ ಮಾದರಿ: ಡೀವಿ
ಸುಳ್ಯ: ಕರ್ನಾಟಕದ ವಿಧಾನ ಸಭಾ ಚುನಾವಣೆಗೆ ಗುಜರಾತ್ ಮಾದರಿಯಾಗಿದೆ. ಗುಜರಾತ್ ಫಲಿತಾಂಶದಂತೆ ಇಲ್ಲೂ ಪುನರಾವರ್ತನೆಯಾಗುತ್ತದೆ. ಎಲ್ಲ ಅಪಪ್ರಚಾರಗಳನ್ನು ಮೀರಿ ಮೋದಿ ಹೇಗೆ ಗೆಲವು ಸಾಧಿಸಿದರೋ ಅದೇ ರೀತಿ ಇಲ್ಲೂ ಬಿಜೆಪಿ ಮತ್ತೆ ಅಧಿಕಾರ ಬರುತ್ತದೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.
ಭಾರತೀಯ ಜನತಾ ಪಕ್ಷದ ಸುಳ್ಯ ಮಂಡಲ ಸಮಿತಿ ವತಿಯಿಂದ ಮಂಗಳವಾರ ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಪೂರ್ವ ತಯಾರಿಗಾಗಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಮಾವೇಶವನ್ನು ಉದ್ಘಾಟಿಸಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಲೋಚನಾ ಜಿ. ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಶಾಸಕ ಹಾಗೂ ಅಭ್ಯರ್ಥಿ ಎಸ್. ಅಂಗಾರ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಎ.ವಿ. ತೀರ್ಥರಾಮ, ಪ್ರಚಾರ ಸಮಿತಿ ಅಧ್ಯಕ್ಷ ಎನ್.ಎ. ರಾಮಚಂದ್ರ, ನ. ಸೀತಾರಾಮ ಮಾತನಾಡಿದರು.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್. ಮನ್ಮಥ, ಜಿ.ಪಂ. ಸದಸ್ಯರಾದ ಆಶಾ ತಿಮ್ಮಪ್ಪ, ನವೀನ್ ಕುಮಾರ್ ಮೇನಾಲ, ಸಾವಿತ್ರಿ ಶಿವರಾಮ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪುಲಸ್ಯ ರೈ, ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಪಕ್ಷದ ವಿವಿಧ ಘಟಕಗಳ ನಾಯಕರಾದ ಜಯರಾಮ ಹಾಡಿಕಲ್ಲು, ಪುಷ್ಪಾವತಿ ಬಾಳಿಲ, ವಿ. ಸಂಜಯಕುಮಾರ್, ಆನಂದ ಬೆಟ್ಟಂಪಾಡಿ, ಭಾಗೀರಥಿ ಮುರುಳ್ಯ, ಕೆ.ಎಂ. ಬಾಬು, ಕೂಸಪ್ಪ ಗೌಡ ಮುಗುಪ್ಪು, ಅಬ್ದುಲ್ ಕುಂಞ ನೇಲ್ಯಡ್ಕ, ಸುಮತಿ ನಾರಾಯಣ, ಸುಂದರ ಲಿಂಗಂ ಇದ್ದರು.
ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಶೆಟ್ಟಿ ಕಡಬ ಸ್ವಾಗತಿಸಿ, ಪಿ.ಜಿ.ಎಸ್.ಎನ್. ಪ್ರಸಾದ್ ವಂದಿಸಿದರು. ಯುವ ಮೋರ್ಚಾ ಅಧ್ಯಕ್ಷ ಮುರಳಿಕೃಷ್ಣ ಚಳ್ಳಂಗಾರು ಕಾರ್ಯಕ್ರಮ ನಿರೂಪಿಸಿದರು. ಸಮಾವೇಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಹಲವು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.