ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ವಸಂತ ಬಂಗೇರ
ಬೆಳ್ತಂಗಡಿ: ಪಕ್ಷದ ವರಿಷ್ಠರ ಆದೇಶದ ಮೇರೆಗೆ ಸ್ಪರ್ಧೆಗೆ ಇಳಿದಿದ್ದೇನೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಅಸಮಾಧಾನ ನಿವಾರಣೆಯಾದ ರೀತಿಯನ್ನು ಅವರು ವಿವರಿಸಿದರು.
ಟಿಕೆಟ್ ಘೋಷಣೆಗೆ ಮೊದಲು ಅಸಮಾಧಾನಗಳಿದ್ದರೂ ಸೋಮವಾರ ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಲಾಗಿದೆ. ಪಕ್ಷ ಎಂದರೆ ನನಗೆ ಮನೆ ಸಮಾನ. ಅಲ್ಲಿ ಭಿನ್ನಮತ, ಅಭಿಪ್ರಾಯ ವ್ಯತ್ಯಾಸ ಸ್ವಾಭಾವಿಕ. ಇದೆಲ್ಲಾ ನಿವಾರಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಗ್ರಾಮ ಭೇಟಿಗೆ ಮುಂದಾಗುತ್ತೇವೆ.
ಏ.11 ರಂದು ಕಾಂಗ್ರೆಸ್ ಚುನಾವಣೆ ಕಚೇರಿ ಉದ್ಘಾಟನೆ. ಎ.15 ರಂದು ಮೆಸ್ಕಾಂ ಕಚೇರಿ ಬಳಿಯ ಮಂಜುನಾಥೇಶ್ವರ ಕಲಾಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ 12.15ಕ್ಕೆ ನಾಮಪತ್ರ ಸಲ್ಲಿಕೆ ನಡೆಯಲಿದೆ ಎಂದರು.
ತೀವ್ರವಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ನಮ್ಮ ಒಗ್ಗಟ್ಟು ಪ್ರದರ್ಶನಕ್ಕಲ್ಲ. ಕಾಂಗ್ರೆಸ್ ಅಭ್ಯರ್ಥಿಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. 10- 15 ದಿನ ಭಿನ್ನಾಭಿಪ್ರಾಯ ಇದ್ದದ್ದು ಹೌದು. ಈ ಎಲ್ಲಾ ನಿವಾರಣೆಯಾಗಿದೆ ಎಂದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಗೌಡ, ಜಿಲ್ಲಾ ಕಾಂಗ್ರೆಸ್ ಪಕ್ಷದ ಸಾಹುಲ್ ಹಮೀದ್, ಜಿ.ಪಂ. ಸದಸ್ಯ ಶೈಲೇಶ್ ಕುಮಾರ್ ಇದ್ದರು.