ಪುತ್ತೂರಿಗೆ ಮಠಂದೂರು; ಬೆಳ್ತಂಗಡಿ, ಬಿದಿರೆಗ್ಯಾರು?
ಮಂಗಳೂರು: ದ.ಕ.ಜಿಲ್ಲೆಯಲ್ಲಿ 3 ಕ್ಷೇತ್ರ ಪೈಕಿ ಪುತ್ತೂರಿನ ಅಭ್ಯರ್ಥಿಯನ್ನು ಮಾತ್ರ ಬಿಜೆಪಿ ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಉಳಿದ ಎರಡು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಮುಂದುವರಿದಿದೆ.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕ್ಯಾಂಪ್ಕೋ ನಿರ್ದೇಶಕ ಸಂಜೀವ ಮಠಂದೂರು ಬಿಜೆಪಿ ಅಭ್ಯರ್ಥಿಯಾಗಿದ್ದು, ಇದರೊದಿಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಖಚಿತವಾದಂತಾಗಿದೆ. ಬೆಳ್ತಂಗಡಿ ಮತ್ತು ಮೂಡುಬಿದಿರೆ ಕ್ಷೇತ್ರಗಳ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿಖರವಾಗಿಲ್ಲ. ಬೆಳ್ತಂಗಡಿಯಿಂದ ಮಂಡಲ ಸಮಿತಿ ಅಧ್ಯಕ್ಷೆ ಶಾರದಾ, ಬಂಟ್ವಾಳದ ತುಂಗಪ್ಪ ಬಂಗೇರ, ಬಿಜೆಪಿ ಸೇರ್ಪಡೆಯಾದ ಗಂಗಾಧರ ಗೌಡ, ಪುತ್ರ ರಂಜನ್ ಗೌಡ, ಬಿಜೆಪಿ ಜಿಲ್ಲಾ ಪ್ರಭಾರಿ ಪ್ರತಾಪ್ಸಿಂಹ ನಾಯಕ್ ಹೆಸರು ಕೇಳಿಬರುತ್ತಿದೆ. ಅದೇ ರೀತಿ ಮೂಡುಬಿದಿರೆಯಲ್ಲಿ ಮಂಡಲ ಸಮಿತಿ ಅಧ್ಯಕ್ಷೆ ಕಸ್ತೂರಿ ಪಂಜ, ಹಿಂದೂ ಜಾಗರಣಾ ವೇದಿಕೆ ಪ್ರಾಂತ ಉಪಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೆಸರು ಕೇಳಿ ಬರುತ್ತಿದೆ. ಸಂಸದ ನಳಿನ್ ಕುಮಾರ್ ಅಲ್ಲಿಗೆ ತೆರಳಿಗೆ ಸಭೆ ನಡೆಸಿದರೂ ಅಭ್ಯರ್ಥಿ ಯಾರಾಗಬೇಕು ಎಂಬ ಗೊಂದಲ ಬಗೆಹರಿದಿಲ್ಲ.
ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಆಯ್ಕೆ ನೋಡಿ ನಮ್ಮ ಅಭ್ಯರ್ಥಿ ಹೆಸರನ್ನು ಪ್ರಕಟಿಸುವ ತಂತ್ರಕ್ಕೆ ಶರಣಾಗಿರುವುದಾಗಿ ಬಿಜೆಪಿ ಮುಖಂಡು ಹೇಳುತ್ತರಾದರೂ, ವಾಸ್ತವದಲ್ಲಿ ಆಯ್ಕೆಯಲ್ಲಿನ ಗೊಂದಲ ವಿಳಂಬಕ್ಕೆ ಕಾರಣ ಎನ್ನಲಾಗಿದೆ.
ನಾಮಪತ್ರ ಸಲ್ಲಿಕೆ ಏ.10ರಂದು ಆರಂಭಗೊಳ್ಳುತ್ತಿದ್ದು, ಮಂಗಳವಾರ ರಾತ್ರಿವರೆಗೆ ಈ ಎರಡು ಕ್ಷೇತ್ರಕ್ಕೆ ಯಾರ ಹೆಸರಿಗೂ ವರಿಷ್ಠರ ಮುದ್ರೆ ಬಿದ್ದಿಲ್ಲ.