ಬೆಂಕಿಯ ಬಲೆ: 8 ಬಲಿ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ ಎಂಬಲ್ಲಿ ರಾ.ಹೆ.75ರಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅವಘಡದಲ್ಲಿ ಅಡುಗೆ ಅನಿಲ ಸಾಗಾಟ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹತ್ತಿಕೊಂಡು ಎಂಟು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ನಾಲ್ವರು ಗಂಭೀರ ಗಾಯಗೊಂಡಿದ್ದು, ಹಲವು ಮನೆಗಳು, ವಾಹನಗಳು ಬೆಂಕಿಗಾಹುತಿಯಾಗಿವೆ.
ಘಟನಾ ಸ್ಥಳ ಪರಿಸರದ ವನಿತಾ (38) ಮತ್ತಾಕೆಯ ಮಗ ಚಿತೇಶ್ (5) ಈತನ ಗೆಳೆಯ ನೆರೆಮನೆಯ ನಿವಾಸಿ ಸುನಿಲ್ (5) ಸ್ಥಳೀಯ ನಿವಾಸಿ ಗುರುವಪ್ಪ (30), ಖತೀಜಮ್ಮ (40) , ಕಾರು ಚಾಲಕ ವಸಂತ (30) ಶೋಭಾ ( 45), ಮತ್ತು ಟ್ಯಾಂಕರ್ ಚಾಲಕ (ಹೆಸರು ಗೊತ್ತಾಗಿಲ್ಲ) ಸ್ಥಳದಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಸುನೀಗಿದರು.
ಈ ಪೈಕಿ ವಸಂತ ಆಸ್ಪತ್ರೆಗೆ ಸಾಗಿಸುವ ಯತ್ನದಲ್ಲಿರುವಾಗಲೇ ದಾರಿ ಮಧ್ಯೆ ಮೃತಪಟ್ಟರು. ಮಕ್ಕಳು ಮತ್ತು ಟ್ಯಾಂಕರ್ ಚಾಲಕನ ಮೃತ ದೇಹಗಳನ್ನು ಮುದ್ದೆಯಾದ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯಿಂದ ಹಜೀಮಾ (70), ಸಫಿಯಾ (28), ಇಂದಿರಾ (50), ಸಲೀಮ್ (17) ಎಂಬವರು ಗಾಯಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ ಕೆಲವರ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ.
ನಡೆದಿದ್ದು ಏನು?: ಮಂಗಳೂರಿನಿಂದ ಅಡುಗೆ ಅನಿಲ ತುಂಬಿಕೊಂಡು ರಾ.ಹೆ.75ರಲ್ಲಿ ವೇಗದಿಂದ ಬರುತ್ತಿದ್ದ ಟ್ಯಾಂಕರ್ ಪೆರ್ನೆಯ ಮೊದಲ ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಓರೆಕೋರೆ ಚಲಿಸಿ ಹೆದ್ದಾರಿ ಬದಿಯಲ್ಲಿ ಮಗುಚಿ ಬಿತ್ತು. ಈ ಸಂದರ್ಭ ಹೆದ್ದಾರಿ ಬದಿಯ ವಿದ್ಯುತ್ ಕಂಬದ ತಂತಿಯೂ ಸ್ಪರ್ಶವಾಗಿ ಅಗ್ನಿ ಅನಾಹುತಕ್ಕೆ ಕಾರಣವಾಯಿತು ಎನ್ನಲಾಗಿದೆ.
ಹೊತ್ತಿಕೊಂಡಿತು ಬೆಂಕಿ: ಟ್ಯಾಂಕರ್ ಅಪಘಾತಕ್ಕೀಡಾದ ಬೆನ್ನಲ್ಲೆ ದಟ್ಟ ಕಪ್ಪು ಹೊಗೆ ಸುಮಾರು 150 ಮೀಟರ್ ವ್ಯಾಪ್ತಿಯ ಪರಿಸರವಿಡೀ ವ್ಯಾಪಿಸಿ, ಬಳಿಕ ಬೆಂಕಿಯ ಕೆನ್ನಾಲೆಗಳು ಪ್ರಸರಿಸಿದ ಕಾರಣ ಘಟನಾ ಸ್ಥಳದ ಸಮೀಪವೇ ಇದ್ದ ಹಲವು ಮನೆಗಳು, ಹಲವು ಅಂಗಡಿ ಕಟ್ಟಡಗಳಿಗೆ ಬೆಂಕಿ ತಗುಲಿತು. ಮನೆಯಲ್ಲಿದ್ದ ಮಹಿಳೆಯರು, ಮಕ್ಕಳು ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಧಗಧಗ ಉರಿಯುವ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾದರು. ಸ್ಥಳದಲ್ಲೇ ಸಾವನ್ನಪ್ಪಿದ ಯಾರನ್ನೂ ಗುರುತಿಸಲು ಅಸಾಧ್ಯವೆನ್ನುವಷ್ಟರ ಮಟ್ಟಿಗೆ ಸುಟ್ಟು ಕರಕಲಾಗಿದ್ದರು.