ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಚ್‌ಪಿಸಿಎಲ್ ವಿರುದ್ಧ ಕಾನೂನು ಕ್ರಮ: ಡಿಸಿ

Vishwanath S
Updated On : 11 Apr 2013, 12:52 pm

ಮಂಗಳೂರು: ಉಪ್ಪಿನಂಗಡಿಯ ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಅನಿಲ ಟ್ಯಾಂಕರ್ ದುರಂತಕ್ಕೆ ಸಂಬಂಧಿಸಿ ಎಚ್‌ಪಿಸಿಎಲ್ ಕಂಪನಿ ಅಧಿಕಾರಿ ನೀಡಿದ ಪ್ರತಿಕ್ರಿಯೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕಾನೂನು ಪ್ರಕಾರ ಕಂಪನಿಯನ್ನೇ ದುರ್ಘಟನೆಗೆ ಹೊಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
 ಕಂಪನಿಗಳು ಟ್ಯಾಂಕರ್‌ಗಳಲ್ಲಿ ಅನಿಲ ತುಂಬಿಸಿ ಸಾಗಿಸುವಾಗ ಜವಾಬ್ದಾರಿ ಇಲ್ಲದೆ ವರ್ತಿಸುವುದನ್ನು ಯಾವುದೇ ಕಾರಣಕ್ಕೆ ಕ್ಷಮಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿ ಹರ್ಷಗುಪ್ತ, ಕಂಪನಿಯನ್ನು ಈ ಘಟನೆಯಲ್ಲಿ ಆರೋಪಿಯನ್ನಾಗಿ ಮಾಡಲು ಜಿಲ್ಲಾಡಳಿತ ಹಿಂಜರಿಯದು ಎಂದು ಹೇಳಿದರು.
 ದುರ್ಘಟನೆ ಬಗ್ಗೆ ಅನಿಲ ಕಂಪನಿಗಳು ಹೊಣೆ ಹೊರಲು ವಿಫಲರಾಗಿದ್ದಾರೆ. ಮುಗ್ಧ ಜನರ ಜೀವನದ ಜತೆ ಚೆಲ್ಲಾಟವಾಡಿದ್ದಾರೆ. ಇವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಟ್ಯಾಂಕರ್‌ಗಳ ಪರಿಶೀಲನೆ: ಸಾರಿಗೆ ಅಧಿಕಾರಿಗಳು ಪ್ರತ್ಯೊಂದು ಟ್ಯಾಂಕರ್‌ಗಳನ್ನು ನಿಲ್ಲಿಸಿ ಇಬ್ಬರು ಚಾಲಕರು ಮತ್ತು ಕ್ಲೀನರ್ ಇದ್ದಾರೆಯೇ ಎಂದು ಪರಿಶೀಲಿಸಿ ಅವರ ಎಲ್ಲ ದಾಖಲೆ ಪತ್ರ ತಪಾಸಣೆ ನಡೆಸಬೇಕು. ಕಾನೂನು ಉಲ್ಲಂಘಿಸುವ ಟ್ಯಾಂಕರ್‌ಗಳನ್ನು ಮುಟ್ಟುಗೋಲು ಹಾಕಬೇಕು. ಟ್ಯಾಂಕರ್‌ಗಳು ವೇಗದ ಮಿತಿ ಮೀರದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು.
ಅಗ್ನಿಶಾಮಕ ಠಾಣೆ ಸ್ಥಾಪಿಸಿ: ರಾಷ್ಟ್ರೀಯ ಹೆದ್ದಾರಿಯ ಅಪಾಯಕಾರಿ ತಿರುವುಗಳನ್ನು ಸುಧಾರಿಸಲು ಇರುವ ಕ್ರಮದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಅಭಿಪ್ರಾಯ ಪಡೆದರು. ಸಮಗ್ರ ನಷ್ಟದ ಬಗ್ಗೆ ಅಂದಾಜು ತಹಸೀಲ್ದಾರ್‌ರಿಂದ ವಿವರ ಪಡೆದು ಮೃತಪಟ್ಟ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದಾಗಿ ಹೇಳಿದರು.
 ಉಪ್ಪಿನಂಗಡಿಯಲ್ಲಿ ಇನ್ನೊಂದು ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಸೂಚನೆ ನೀಡಿದರು. ಸ್ಫೋಟಕ ವಸ್ತುಗಳನ್ನು ಸಾಗಿಸಲು ಇರುವ ಕಾನೂನು ಮತ್ತು ನಿರ್ಬಂಧಗಳನ್ನು ಪರಿಶೀಲಿಸಿ ಈ ಸಂಬಂಧ ಸ್ಫೋಟಕ ವಿಭಾಗದ ಮುಖ್ಯ ನಿಯಂತ್ರಕರನ್ನು ಸಂಪರ್ಕಿಸಿ ಮಾರ್ಗಸೂಚಿ ಬಗ್ಗೆ ಮಾಹಿತಿ ಪಡೆಯುವಂತೆ ಕಂಪನಿ ಮತ್ತು ಬಾಯ್ಲರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಿಎಸ್ ಅಳವಡಿಸಿ: ತಂತ್ರಜ್ಞಾನ ಯುಗದಲ್ಲಿ ಇಂಥ ಕಂಪನಿಗಳು ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ತಂತ್ರಜ್ಞಾನ ನೆರವಿನಿಂದ ಭೀಕರ ಅವಘಡ ತಡೆಯಲು ಸಾಧ್ಯವಿದೆ. ಕಂಪನಿಯ ತುರ್ತು ನಿರ್ವಹಣೆ ಸ್ಪಂದನ ವ್ಯವಸ್ಥೆ ಸರಿಯಾಗಿಲ್ಲ. ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪಾಲನೆಯಾಗಿಲ್ಲ ಎಂದರು.
ಎಚ್‌ಪಿಸಿಎಲ್‌ಗೆ ತಾಕೀತು: ತಾನು ಕೇಳಿದ ಎಲ್ಲ ಪ್ರಶ್ನೆಗಳಿಗೆ 48 ಗಂಟೆಯೊಳಗೆ ಉತ್ತರ ಸಹಿತ ಬರುವಂತೆ ಎಚ್‌ಪಿಸಿಎಲ್ ಕಂಪನಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು. ಕಂಪನಿಯು ದುರ್ಘಟನೆ ವೇಳೆ ಬೇಜವಾಬ್ದಾರಿಯುತವಾಗಿ ವರ್ತಿಸಿರುವುದನ್ನು ಅಗ್ನಿಶಾಮಕ ಪಡೆ ಜಿಲ್ಲಾ ಮುಖ್ಯಸ್ಥ ವರದರಾಜನ್ ಜಿಲ್ಲಾಧಿಕಾರಿಯ ಗಮನಕ್ಕೆ ತಂದರು. ಇಂಥ ದುರ್ಘಟನೆ ತಡೆಯುವ ಬಗ್ಗೆ ಯೋಜನೆಯನ್ನು ಮುಂದಿಟ್ಟ ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್, ಘಟನೆಯ ವಿವರವನ್ನು ಸಭೆಗೆ ನೀಡಿದರು.
ಸಭೆಯಲ್ಲಿ ಬಿಪಿಸಿಎಲ್, ಐಒಸಿಎಲ್ ಕಂಪನಿ ಪ್ರತಿನಿಧಿಗಳು, ಎಂಆರ್‌ಪಿಎಲ್ ಅಧಿಕಾರಿಗಳು, ಅಪರ ಜಿಲ್ಲಾಧಿಕಾರಿ ದಯಾನಂದ್, ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಡಿಸಿಪಿ ಮುತ್ತೂರಾಯ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement