ಬೆಂಕಿ ಆರಿದ ಬಳಿಕ ಆವರಿಸಿದ ಸ್ಮಶಾನ ಮೌನ
ಕ.ಪ್ರ. ವಾರ್ತೆ ಉಪ್ಪಿನಂಗಡಿ ಏ.10
ಟ್ಯಾಂಕರ್ ಚಾಲಕನ ಅವಸರದ ಚಾಲನೆಯ ಫಲವಾಗಿ ಉಂಟಾದ ಬೆಂಕಿ ದುರಂತದಿಂದ 8 ಮಂದಿಯ ಜೀವಂತ ದಹನಗೊಂಡ ಹೃದಯವಿದ್ರಾವಕ ಘಟನೆಯಿಂದ ಪೆರ್ನೆ ಗ್ರಾಮದ ಜನತೆ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಎಲ್ಲವನ್ನೂ ಕಳೆದುಕೊಂಡು, ಎಲ್ಲರನ್ನೂ ಕಳೆದುಕೊಂಡು ನಿರ್ಗತಿಕರಾದ ಮಂದಿಯ ಪುನರ್ ವಸತಿಗಾಗಿ ಮಾನವೀಯ ಸ್ಪಂದನೆ ತೋರಲು ಜನತೆ ಮುಂದಾಗಿದ್ದಾರೆ.
ಪತ್ನಿ ಹಾಗೂ ಒಬ್ಬ ಮಗನನ್ನು ಕಳೆದುಕೊಂಡು ಉಳಿದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅನಾಥರಾದ ನಾರಾಯಣ ನಾಯ್ಕ್ ಅವರ ಕುಟುಂಬ, ಪತ್ನಿಯನ್ನು ಕಳೆದುಕೊಂಡು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆ ಮಠವನ್ನು ಕಳೆದುಕೊಂಡು ನಿರ್ಗತಿಕರಾದ ಶಂಕರ್ ರೈ ಅವರ ಕುಟುಂಬ, ಕಳೆದ ಆರು ವರ್ಷಗಳಿಂದ ತಂದೆಯನ್ನು ಕಾಣದೇ ತಾಯಿಯ ಆಸರೆಯಲ್ಲಿದ್ದ ಐವರು ಮಕ್ಕಳ ಏಕೈಕ ಪಾಲಕಿಯಾಗಿದ್ದ ಖತಿಜಮ್ಮ ಅವರನ್ನು ಕಳೆದುಕೊಂಡ ಐವರು ಮಕ್ಕಳ ಭವಿಷ್ಯ, ತರಕಾರಿ ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದ ಆನಂದ ನಾಯ್ಕ್ ಅವರ ಅಂಗಡಿ ಸುಟ್ಟು ಭಸ್ಮವಾದ ಫಲವಾಗಿ ಅವರ ಭವಿಷ್ಯ ಸೇರಿದಂತೆ ಸತ್ತವರ ಕುಟುಂಬದ ರೋಧನ ಮುಗಿಲು ಮುಟ್ಟಿದ್ದು ಜನರು ಅವರ ನೆರವಿಗೆ ಧಾವಿಸುತ್ತಿದ್ದಾರೆ.
ಮಗನ ಸಾವನ್ನು ಅರಗಿಸಿಕೊಳ್ಳಲಾಗದ ತಾಯಿ: ಅಂಗನವಾಡಿಗೆಂದು ಹೋಗಲು ಮಗ ಸುನಿಲ್ನನ್ನು ತನ್ನ ಸ್ನೇಹಿತೆ ವನಿತಾಳ ಮನೆಯಲ್ಲಿ ಬಿಟ್ಟು ಬಂದ ಸ್ವಾತಿ ಮಗ ಸಾವನ್ನಪ್ಪಿರುವ ಸತ್ಯವನ್ನು ಅರಗಿಸಿಕೊಳ್ಳಲಾರದೆ ಪದೇ ಪದೇ ಪ್ರಜ್ಞಾಹೀನಳಾಗುತ್ತಿರುವ ದುರಂತ ಎಂಥವರ ಹೃದಯವನ್ನೂ ಘಾಸಿಗೊಳಿಸುವಂತಿದೆ. 'ನನ್ನ ಮಗ ಸತ್ತಿಲ್ಲ... ಅವನನ್ನು ಹುಡುಕಿ ತಂದುಕೊಡಿ..' ಎಂದು ಗೋಗೆರೆಯುವ ಸ್ವಾತಿ ಅವರನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬಂತಾಗಿದೆ.
ಘಟನೆಯ ಪ್ರತ್ಯಕ್ಷದರ್ಶಿ ಜಿ. ಉಮ್ಮರ್ ಮಾತನಾಡಿ, ಬೆಂಕಿಯ ಕೆನ್ನಾಲಗೆ ವ್ಯಾಪಿಸಿದಾಗ ತಾನು ತನ್ನ ಮನೆಯವರನ್ನು ಮನೆಯಿಂದ ಬೆಟ್ಟದತ್ತ ಕರೆದೊಯ್ದೆ. ಎದುರು ಮನೆಯ ಮಹಿಳೆಯರ ಆರ್ತನಾದ ಕರುಳು ಹಿಡುವಂತೆ ಕೇಳಿಬರುತ್ತಿತ್ತು. ಆ ವೇಳೆಗೆ ಟೈಲರಿಂಗ್ ವತ್ತಿಯ ಗುರುವಪ್ಪ ಆಲಿಯಾಸ್ ಕುಂಞ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಅಂಗಡಿಯಿಂದ ಧಾವಿಸಿ ಬಂದು ಬೆಂಕಿಯ ಕಿನ್ನಾಲಗೆಯಲ್ಲಿ ಸಿಲುಕಿದ್ದ. ಆ ವೇಳೆಗೆ ಮನೆಯೊಳಗೆ ಸಿಲುಕಿದ್ದ ಖತಿಜಮ್ಮಳನ್ನು ಗುರುವಪ್ಪ ಮನೆಯಿಂದ ಹೊರಗಡೆ ಬರುವಂತೆ ಮಾಡಿದನಾದರೂ ಬೆಂಕಿಯನ್ನು ಮೈತುಂಬ ಪ್ರಸರಿಸಿ ಬಂದ ಆಕೆಯನ್ನು ರಕ್ಷಿಸಲು ಸಾಧ್ಯವಾಗದೇ ಉಳಿಯಬೇಕಾಯಿತು.
ಬೇರೆಯವರನ್ನು ರಕ್ಷಿಸಲು ಹೋಗಿ ಅವನೂ ಬೆಂಕಿ ಪಾಲಾದ: ಖತಿಜಮ್ಮಳನ್ನು ರಕ್ಷಿಸಿ ಮನೆಯೊಳಗೆ ಸಿಲುಕಿದ್ದ ಮಕ್ಕಳನ್ನು ರಕ್ಷಿಸಲು ಮುಂದಾದ ಗುರುವಪ್ಪ ತಾನೂ ಸತ್ತು ಹೋದನೆಂದು ತಿಳಿದಾಗ ಮಾತು ಅಳುವಿನತ್ತ ತಿರುಗುತ್ತಿತ್ತು. ಪರೋಪಕಾರಿ ಗುರುವಪ್ಪ ಪರರ ರಕ್ಷಣೆಗಾಗಿ ತಾನೂ ಬೆಂದು ಸತ್ತ ಎಂದು ಹೇಳುವಾಗ ಅವರ ದುಃಖ ತಡೆಯದಾಯಿತು.
ವನಿತಾ ಮತ್ತು ಮಗ ಹಿತೇಶ್ ಬೆಂಕಿಯಲ್ಲಿ ಸಿಲುಕಿರುವುದನ್ನು ಅನತಿ ದೂರದಲ್ಲೇ ಕಂಡ ವನಿತಾಳ ಗಂಡ ನಾರಾಯಣ ಅವರಿಗೆ ಮಗ ಮತ್ತು ಪತ್ನಿ ಬೆಂಕಿ ಪ್ರಸಹರಿಸುವ ಮುನ್ನ ಎಲ್ಲಿಯಾದರೂ ಓಡಿ ತಪ್ಪಿಸಿಕೊಂಡಿರಬಹುದೆಂಬ ಸಣ್ಣ ಆಸೆಯಿಂದ ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿ ದಾರುಣ ಸಾವು ಅವರಿಬ್ಬರನ್ನೂ ಅಪ್ಪಿಯಾಗಿತ್ತು.
ಮನೆಯೊಳಗಿದ್ದ ದೇವರ ಕಾಣಿಕೆ ಡಬ್ಬಿ, ಅದರಲ್ಲಿದ್ದ ಹಣ ಚೆಲ್ಲಾಪಿಲ್ಲಿಯಾಗಿದ್ದ ದೃಶ್ಯ, ಬೆಲೆಬಾಳುವ ಬಟ್ಟೆ ಬರೆಗಳು ಅಗ್ನಿಗಾಹುತಿಯಾದ ಸ್ಥಿತಿ ಮನೆಯೇ ಮರಣಕ್ಕೆ ನೆಲೆಯಾದ ದಾರುಣತೆಯ ದೃಶ್ಯ ವರ್ಣನಾತೀತವಾಗಿದೆ.